ದಾವಣಗೆರೆ: ಸದಾ ಥಿಯರಿ, ಪ್ರ್ಯಾಕ್ಟಿಕಲ್, ಡ್ರಾಯಿಂಗ್ ಕ್ಲಾಸ್, ಲ್ಯಾಬ್… ಇಂತಹ ವಿಷಯದಲ್ಲಿ ಮುಳುಗಿರುವ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಭಾನುವಾರ ಗಣೇಶ ಹುಟ್ಟಿ ಬಂದ ಹಿನ್ನೆಲೆ, ಮಹಿಷಾಸುರನ ಅಬ್ಬರ, ಚಾಮುಂಡೇಶ್ವರಿ ಸಂಹಾರ, ವಿಶ್ವ ವಿಖ್ಯಾತ ಮೈಸೂರು ದಸರಾದ ನೆನಪು, ಕೃಷ್ಣಲೀಲೆಗಳ ಅನಾವರಣ…. ಹೀಗೆ ಸಾಂಸ್ಕೃತಿಕ ವಾತಾವರಣ ನಿರ್ಮಾಣವಾಗಿತ್ತು.!
ನಮ್ಮ ಎಥ್ನಿಕ್… 2019ರ ಅಂಗವಾಗಿ ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಟೆಕ್ಸ್ ಟೈಲ್ಸ್… ವಿವಿಧ ವಿಭಾಗದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ವಿಶೇಷ, ವಿಶಿಷ್ಟ ಸಾಂಪ್ರದಾಯಿಕ ಪೋಷಾಕುಗಳಲ್ಲಿ ಮಿಂಚಿದರು. ಹಾಡುಗಳಿಗೆ ಭರ್ಜರಿ ಹೆಜ್ಜೆ ಹಾಕಿದರು. ಕುಣಿದರು, ಕುಪ್ಪಳಿಸಿದರು. ಮುಗಿಲು ಮುಟ್ಟುವಂತೆ ಹರ್ಷೋದ್ಘಾರ ಮಾಡಿದರು.
ಒಟ್ಟಾರೆಯಾಗಿ ಸಾಂಸ್ಕೃತಿಕ ಲೋಕದಲ್ಲಿ ಮಿಂದೆದ್ದರು. ಒಂದು ವಿಭಾಗದವರು ಜೆಸಿಬಿಗಳು, ಇನ್ನೊಂದು ವಿಭಾಗದವರು ಟ್ರ್ಯಾಕ್ಟರ್, ಇನ್ನೊಂದು ವಿಭಾಗದವರು ಅಬ್ಬರದ ಸಂಗೀತದ ನಡುವೆ ಹೆಜ್ಜೆ ಹಾಕುತ್ತಾ ಸಾಗಿ ಬಂದರು. ವಿದ್ಯಾರ್ಥಿಗಳು ಬಿಳಿ ಬಣ್ಣದ ಪಂಚೆ, ಶರ್ಟ್, ಅತ್ಯಾಕರ್ಷಕ ಪೋಷಾಕುಗಳಲ್ಲಿ ಮಿಂಚಿದರು. ಸೇರಿಗೆ ಸೆವ್ವಾ ಸೇರು… ಎನ್ನುವಂತೆ ವಿದ್ಯಾರ್ಥಿನಿಯರು ಸೀರೆ, ಲಂಗ-ದಾವಣಿ, ಲೆಹಂಗಾ… ಇತರೆ ಸಂಪ್ರದಾಯಿಕ ಉಡುಗೆಯಲ್ಲಿ ಸಂಭ್ರಮಿಸಿದರು.
ಗುಜರಾತ್‌ನ ಗರ್ಭಾ, ದಾಂಡಿಯಾ, ಅಸ್ಸಾಂನ ಬಿಹೂ, ಕರ್ನಾಟಕದ ಸಂಕ್ರಾಂತಿ, ಸುಗ್ಗಿ ಕುಣಿತ ಅತ್ಯಾಕರ್ಷಕ ವಾಗಿ ಮೂಡಿಬಂದವು. ಶಿವರಾಜ್‌ಕುಮಾರ್ ಅಭಿನಯದ ಜನುಮದ ಜೋಡಿ… ಚಿತ್ರದ ಕೋಲು ಮಂಡೆ… ಜಂಗಮದೇವ… ಹಾಡಿನ ನೃತ್ಯ ಸೊಗಸಾಗಿ ಮೂಡಿ ಬಂದಿತು. ಮಹಿಷಾಸುರ ಮರ್ದಿನಿ ಮತ್ತು ಗಣೇಶನ ಜನನ…ದ ನೃತ್ಯ ರೂಪಕಗಳು ಪೌರಾಣಿಕ ಕಥೆಯನ್ನ ಬಹಳ ಅಚ್ಚುಕಟ್ಟಾಗಿ ಕಟ್ಟಿಕೊಟ್ಟವು. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಭ್ಯಾಸದ ಜೊತೆಗೆ ಹಾಡು, ಕುಣಿತ, ವೇಷಭೂಷಣಕ್ಕೂ ಸೈ… ಎಂಬುದನ್ನು ಸಾರಿ ಸಾರಿ ರುಜುವಾತುಪಡಿಸಿದರು.
ಗುಂಪು ವಿಭಾಗದಲ್ಲಿ ಇಂಡಿಯನ್ ಕಾರ್ನಿವಲ್, ವೈಯಕ್ತಿಕ ವಿಭಾಗದಲ್ಲಿ ಸೋಲೋ, ರ್‍ಯಾಂಪ್ ವಾಕ್ ನಡೆದವು. ಗುತ್ತಿಗೆದಾರ ಡಾ| ಉದಯ್‌ಕುಮಾರ್ ನಮ್ಮ ಎಥ್ನಿಕ್… 2019ಗೆ ಚಾಲನೆ ನೀಡಿದರು. ಮೆಕ್ಯಾನಿಕಲ್ ವಿಭಾಗದ ಮಧುಸೂಧನ್ ಮಿಸ್ಟರ್ ಎಥಿ°ಕ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ವಿಭಾಗದ ಸಹನಾ ಮಿಸ್ ಎಥಿ°ಕ್… ಪ್ರಶಸ್ತಿ ಮುಡಿಗೇರಿಸಿಕೊಂಡರು.
ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಪ್ರಾಚಾರ್ಯ ಡಾ|ಕೆ.ಎಸ್.ಬಸವರಾಜಪ್ಪ, ಡಾ. ಎಚ್.ಬಿ. ರವೀಂದ್ರ, ಡಾ| ಕಲ್ಲೇಶಪ್ಪ, ಡಾ| ರಮೇಶ್, ಡಾ| ವೀಣಾಕುಮಾರ್, ಡಾ| ವಿನುತಾ ಇತರರು ಇದ್ದರು.