ಎಚ್.ಕೆ. ನಟರಾಜ
ದಾವಣಗೆರೆ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲು ರಾಜ್ಯ ಸರ್ಕಾರ ಸ್ವಯಂ ಸೇವಕರ ನೆರವು ಪಡೆಯಲು ಮುಂದಾಗಿದ್ದರೆ, ಇತ್ತ ದಾವಣಗೆರೆ ಜಿಲ್ಲಾಡಳಿತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾಜಿ ಯೋಧರ ನೆರವು ಪಡೆಯಲು ಯೋಜನೆ ರೂಪಿಸಿದೆ. ಈ ಹಿಂದೆ ದೇಶ ರಕ್ಷಣೆ ಮಾಡಿದ ಮಾಜಿ ಸೈನಿಕರು, ಈಗ ದೇಶದ ಜನರ ಮೇಲೆ ದಾಳಿ ಇಟ್ಟಿರುವ ಕೊರೊನಾ ಮಹಾಮಾರಿಯ ಸರಪಳಿ ಮುರಿದು ಜನರ ಪ್ರಾಣ ರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ.
ದೇಶದ ಗಡಿ ಕಾದ ಯೋಧರು ಈಗ ಕೊರೊನಾ ಯೋಧರಾಗಿ ಬರಲಿದ್ದಾರೆ. ಮಾಸ್ಕ್ ಇಲ್ಲದೇ ಓಡಾಡುವುದು ಹಾಗೂ ಜನಜಂಗುಳಿ ಏರ್ಪಡುವುದನ್ನು ತಡೆಯಲು, ಎಲ್ಲೆಡೆ ಸಾಮಾಜಿಕ, ದೈಹಿಕ ಅಂತರ ಪಾಲನೆ ಜತೆಗೆ ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ವಿಧಿಸಿರುವ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಗಾಗಿ ಜಿಲ್ಲಾಡಳಿತ 60ಕ್ಕೂ ಹೆಚ್ಚು ಮಾಜಿ ಸೈನಿಕರ ನೆರವು ಪಡೆಯಲು ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಈಗಾಗಲೇ ಮಾಜಿ ಯೋಧರ ಪಟ್ಟಿ ತಯಾರಿಸಲಾಗಿದ್ದು, ಪೂರ್ವಾಪರ ವಿಚಾರಣೆಗಾಗಿ ಆ ಪಟ್ಟಿಯನ್ನು ಪೊಲೀಸ್ ಇಲಾಖೆಗೆ ಸಲ್ಲಿಸಿದೆ. ಪೊಲೀಸ್ ವಿಚಾರಣೆ ಬಳಿಕ ಮಾಜಿ ಯೋಧರು ಕೊರೊನಾ ಮಾರ್ಗಸೂಚಿ ಪಾಲನೆಗೆ ರಸ್ತೆಗಿಳಿಯಲಿದ್ದಾರೆ.
ಮಾರ್ಷಲ್ ರೀತಿ ಕಾರ್ಯ: ಜಿಲ್ಲೆಯಲ್ಲಿ 535 ಜನ ಮಾಜಿ ಸೈನಿಕರಿದ್ದು, ಇವರಲ್ಲಿ ಬಹುತೇಕರು 50 ವರ್ಷ ಮೇಲ್ಪಟ್ಟವರೇ ಇದ್ದಾರೆ. ಇವರಲ್ಲಿ ಕೊರೊನಾ ವಾರಿಯರ್ ಆಗಿ ಕೆಲಸ ಮಾಡಲು ಆಸಕ್ತಿ ಇರುವ 50 ವರ್ಷದೊಳಗಿನ 60ಜನರನ್ನು ಜಿಲ್ಲಾಡಳಿತ ಗುರುತಿಸಿ ಪಟ್ಟಿ ಮಾಡಿದೆ. ಇವರನ್ನು ಆಯ್ಕೆ ಮಾಡಿಕೊಂಡ ಬಳಿಕ ಜಿಲ್ಲಾಡಳಿತ ಇವರನ್ನು ಜನಜಂಗುಳಿ ಏರ್ಪಡುವ ಮಾರುಕಟ್ಟೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ದೊಡ್ಡ ದೊಡ್ಡ ಅಂಗಡಿಗಳು, ಕಲ್ಯಾಣ ಮಂಟಪ, ಪ್ರಮುಖ ವೃತ್ತಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಿದೆ. ಗುರುತಿನ ಚೀಟಿ ಹಾಗೂ ಮಿಲಿಟರಿ ಸಮವಸ್ತ್ರದೊಂದಿಗೆ ಮಾಜಿ ಯೋಧರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಬೆಂಗಳೂರಿನಲ್ಲಿ ನಿಯೋಜಿಸಿರುವ ಮಾರ್ಷಲ್ ಗಳ ರೀತಿಯಲ್ಲಿ ಮಾಜಿ ಯೋಧರು ಕಾರ್ಯನಿರ್ವಹಿಸಲಿದ್ದಾರೆ. ಮಾಸ್ಕ್, ದೈಹಿಕ ಅಂತರ ಸೇರಿದಂತೆ ಸರ್ಕಾರದ ಕೊರೊನಾ ನಿಯಂತ್ರಣ ಮಾರ್ಗಸೂಚಿ ಉಲ್ಲಂಘಿಸುವವರಿಗೆ ದಂಡ ಹಾಕುವ ಜತೆಗೆ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸ್ ಇಲಾಖೆಗೆ ಶಿಫಾರಸು ಸಹ ಮಾಡಲಿದ್ದಾರೆ. ಕೊರೊನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ನೆರವು ನೀಡುವ ಮಾಜಿ ಯೋಧರಿಗೆ ಗೃಹರಕ್ಷಕ ದಳದ ಸಿಬ್ಬಂದಿಗೆ ನೀಡುವಂತೆ ಗೌರವಧನ ನೀಡಲು ಸಹ ಜಿಲ್ಲಾಡಳಿತ ತೀರ್ಮಾನಿಸಿದೆ.
ಆಸಕ್ತರಿಗೂ ಅವಕಾಶ: ಸಾರ್ವಜನಿಕ ವಲಯದಲ್ಲಿ ಕೊರೊನಾ ಮಾರ್ಗಸೂಚಿ ಪರಿಪಾಲನೆ ಮಾಡಲು ಜಿಲ್ಲಾಡಳಿತ ಕೇವಲ ಮಾಜಿ ಸೈನಿಕರ ನೆರವು ಒಂದನ್ನೇ ನೆಚ್ಚಿಕೊಂಡಿಲ್ಲ. ಕಾಲೇಜುಗಳಲ್ಲಿರುವ ನೋಂದಾಯಿತ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂ ಸೇವಕರನ್ನು ಹಾಗೂ ಸಂಘ ಸಂಸ್ಥೆಗಳ ಮೂಲಕ ಬರಬಹುದಾದ ಸ್ವಯಂ ಸೇವಕರನ್ನು ಹಾಗೂ ನೇರವಾಗಿ ಕೆಲಸ ಮಾಡಲು ಇಚ್ಛಿಸಿ ಬರುವ ಸ್ವಯಂ ಸೇವಕರನ್ನು ಸೇರಿ 500ಕ್ಕೂ ಹೆಚ್ಚು ಜನರ ನೆರವು ಪಡೆದುಕೊಂಡು ಕೊರೊನಾ ಕಟ್ಟಿಹಾಕಲು ಯೋಜನೆ ಹಾಕಿಕೊಂಡಿದೆ. ಒಟ್ಟಾರೆ ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ, ಜಿಲ್ಲಾಡಳಿತ ಹೊರಡಿಸುವ ಮಾರ್ಗಸೂಚಿಗಳು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಮಾಡಲು ಮಾಜಿ ಯೋಧರು ಕೈಜೋಡಿಸಲಿದ್ದಾರೆ. ತನ್ಮೂಲಕ ಕೊರೊನಾದಿಂದ ಜನರನ್ನು ಕಾಪಾಡುವ ಕಾಯಕದಲ್ಲಿಯೂ ಭಾಗಿಯಾಗಲಿದ್ದಾರೆ.