Advertisement

16ಕ್ಕೆ ರೈತಸಂಘದಿಂದ ವಿಧಾನಸೌಧ ಮುತ್ತಿಗೆ

10:08 AM Jul 04, 2019 | Naveen |

ದಾವಣಗೆರೆ: ರಾಜ್ಯ ಸರ್ಕಾರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿಗೆ ಮುಂದಾಗಿರುವುದನ್ನು ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಜು. 16 ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಿರ್ಧರಿಸಿದೆ.

Advertisement

ನಗರದ ಎಪಿಎಂಸಿ ಸಭಾಂಗಣದಲ್ಲಿ ಬುಧವಾರ ನಡೆದ ಸಂಘದ ರಾಜ್ಯ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಜು. 12ರಿಂದ 26ರ ವರೆಗೆ ವಿಧಾನ ಮಂಡಲದ ಅಧಿವೇಶನ ನಿಗದಿಯಾಗಿದ್ದು, ಸರ್ಕಾರದ ಗಮನ ಸೆಳೆಯಲು ಇದು ಸೂಕ್ತ ಸಮಯವಾಗಿದೆ ಎಂದು ಸಭೆ ಅಭಿಪ್ರಾಯಪಟ್ಟಿತು.

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ಮಂಡಿಸಿದರು. ಮೈಸೂರಿನಿಂದ ಬೆಂಗಳೂರಿಗೆ ಅಥವಾ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಬೇಕು ಎಂಬ ಸಲಹೆಯೂ ಸಭೆಯಲ್ಲಿ ವ್ಯಕ್ತವಾಯಿತು.

ಆದರೆ, ಈಗ ಮಳೆಗಾಲ. ರೈತರಿಗೆ ಬಿತ್ತನೆ ಸಮಯವಾಗಿದೆ. ಇರುವ ಕಡಿಮೆ ಅವಧಿಯಲ್ಲಿ ರೈತರನ್ನು ಸಂಘಟಿಸಿ ಪಾದಯಾತ್ರೆಯಲ್ಲಿ ತೊಡಗಿಸುವುದು ಸುಲಭವಲ್ಲ. ಹಾಗಾಗಿ ವಿಧಾನಸೌಧ ಮುತ್ತಿಗೆಯೇ ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಯಿತು.

Advertisement

ಹಗಲು ದರೋಡೆ: ಸಭೆಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ರಾಜ್ಯದಲ್ಲಿರುವುದು ಬಹುಮತದ ಸರ್ಕಾರವಲ್ಲ. ವಿಧಾನ ಮಂಡಲದ ಅಧಿವೇಶನ ಎಷ್ಟು ದಿನ ನಡೆಯುವುದೋ ಗೊತ್ತಿಲ್ಲ. ಅಷ್ಟರೊಳಗೆ ನಮ್ಮ ಚಳವಳಿಯ ಬಿಸಿ ಸರ್ಕಾರಕ್ಕೆ ತಟ್ಟಬೇಕು ಎಂದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ರೈತರ 46 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವುದಾಗಿ ಹೇಳಿ, ಈಗ ಕೇವಲ 16 ಸಾವಿರ ಕೋಟಿಗೆ ಇಳಿಸಿದ್ದಾರೆ. ಸಿಎಂ ತಾವೇ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ ಎಂದು ಆಗ್ರಹಿಸಿದರು.

ಬರಗಾಲ ಪರಿಸ್ಥಿತಿಯನ್ನು ಸರ್ಕಾರ ಸಮರ್ಪಕವಾಗಿ ನಿಭಾಯಿಸುತ್ತಿಲ್ಲ. ಕೇವಲ ತುಟಿಗೆ ತುಪ್ಪ ಹಚ್ಚುವ ಮೂಲಕ ಬರಗಾಲ ಪರಿಹಾರ ಕೆಲಸ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಖಾಸಗಿ ಕಂಪನಿಗೆ ಸಾವಿರಾರು ಎಕರೆ ಜಮೀನು ನೀಡಲು ಹೊರಟಿದೆ. ಆ ಮೂಲಕ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಲು ಮುಂದಾಗಿದೆ ಎಂದು ದೂರಿದರು.

ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನೈಸ್‌ ಕಂಪನಿಗೆ ಭೂಮಿ ನೀಡುವುದರ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೋರಾಟ ನಡೆಸಿದ್ದರು. ಈಗ ಅವರ ಪುತ್ರನೇ ಸಿಎಂ ಆಗಿದ್ದಾರೆ. ಈಗೇಕೆ ಭೂಮಿ ಕೊಡಲು ಹೊರಟಿದ್ದಾರೆ? ಇದು ಹಗಲು ದರೋಡೆ ಎಂದು ಆರೋಪಿಸಿದರು.

ಜಿಂದಾಲ್ ಕಂಪೆನಿಗೆ ಭೂಮಿ ಲೀಸ್‌ ಆಧಾರದ ಮೇಲೆ ಕೊಡಲು ನಮ್ಮ ವಿರೋಧವಿಲ್ಲ, ಆದರೆ ಮಾರಾಟ ಮಾಡುವುದಕ್ಕೆ ಆಕ್ಷೇಪವಿದೆ ಎಂದ ಅವರು, 2013ರಲ್ಲಿ ಅಂದಿನ ರಾಜ್ಯ ಸರ್ಕಾರ ಇಬ್ಬರು ಉದ್ಯಮಿಗಳಿಗೆ ಪ್ರತಿ ಎಕರೆಗೆ 5 ಲಕ್ಷಕ್ಕಿಂತ ಹೆಚ್ಚು ಮೊತ್ತಕ್ಕೆ ಮಾರಾಟ ಮಾಡಿತ್ತು. ಈಗಿನ ಸರ್ಕಾರ ಎಕರೆಗೆ ಕೇವಲ 1.20 ಲಕ್ಷ ರೂ.ಗಳಂತೆ ಮಾರಾಟ ಮಾಡಲು ಹೊರಟಿರುವುದು ಏಕೆ ಎಂದು ಕೋಡಿಹಳ್ಳಿ ಪ್ರಶ್ನಿಸಿದರು.

ಸಚಿವ ಡಿ.ಕೆ. ಶಿವಕುಮಾರ್‌ ಮೇಲೆ ಗ್ರಾನೈಟ್ ಕಳ್ಳತನದ ಆರೋಪವಿದೆ. ಅಂಥ ವ್ಯಕ್ತಿಯನ್ನು ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿರುವುದು ಸೂಕ್ತವಾಗಿಯೇ ಇದೆ ಎಂದು ಅವರು ವ್ಯಂಗ್ಯವಾಡಿದರು. ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಎಚ್.ಆರ್‌. ಬಸವರಾಜಪ್ಪ, ಮುಖಂಡರಾದ ಈಚಗಟ್ಟ ಸಿದ್ದವೀರಪ್ಪ, ಕೋಲಾರ ಶಿವಪ್ಪ, ಜಡಿಯಪ್ಪ ದೇಸಾಯಿ, ಅನಸೂಯಮ್ಮ, ಕುರುವ ಗಣೇಶ್‌, ಮಹೇಶ್‌, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಶೇಖರ ನಾಯ್ಕ ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next