ದಾವಣಗೆರೆ: ಹೊಸ ಪಿಂಚಣಿ ಯೋಜನೆ ರದ್ದು ಪಡಿಸಿ, ಹಳೇ ಪಿಂಚಣಿ ಪದ್ಧತಿ ಜಾರಿಗೊಳಿಸಲು ಆಗ್ರಹಿಸಿ ಶನಿವಾರ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ನೇತೃತ್ವದಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ನೌಕರರು ರಕ್ತ ಕೊಟ್ಟೇವು ಪಿಂಚಣಿ ಬಿಡೆವು…ಶೀರ್ಪಿಕೆಯಡಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಸರ್ಕಾರಿ ನೌಕರರು ನಿವೃತ್ತಿಯ ನಂತರ ವೃದ್ಧಾಪ್ಯದ ಕಾಲದಲ್ಲಿ ಪಿಂಚಣಿ ಬಂದಲ್ಲಿ ಮಾತ್ರ ಮಕ್ಕಳು, ಸಂಬಂಧಿಕರು, ಪೋಷಕರನ್ನು ಪೋಷಣೆ ಮಾಡಲು ಸಾಧ್ಯವಾಗುತ್ತದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಎನ್‌ಪಿಎಸ್ ಜಾರಿಗೊಳಿಸಿರುವುದರಿಂದ ವೃದ್ಧಾಶ್ರಮಗಳು ಹೆಚ್ಚು ಮಾಡಲು ಅವಕಾಶವಾಗುತ್ತದೆ. ಆದ್ದರಿಂದ ನಿವೃತ್ತಿ ವೇತನದಿಂದ ಕಷ್ಟದಲ್ಲಿ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಸಹಾಯ ಮಾಡಬೇಕೆಂದು ಒತ್ತಾಯಿಸಿದರು.
ನಂತರ, ಪ್ರತಿಭಟನಾಕಾರರು ಕಾಲ್ನಡಿಗೆ ಜಾಥಾ ಹೊರಟು ಅಂಬೇಡ್ಕರ್ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಜಯದೇವ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಬಳಿಕ ಮೆರವಣಿಗೆ ಮೂಲಕ ಗಾಂಧಿ ವೃತ್ತದ ಮಾರ್ಗವಾಗಿ ಸಾಗಿ ಮಹಾನಗರ ಪಾಲಿಕೆ ಮುಂಭಾಗದಲ್ಲಿರುವ ಮಹನೀಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಅಲ್ಲಿ ರಕ್ತದಾನ ಮಾಡಿ, ಎನ್‌ಪಿಎಸ್ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟಿಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನೌಕರರ ವಂತಿಗೆ ಹಣಕ್ಕೆ ಯಾವುದೇ ಭದ್ರತೆ ನೀಡಿಲ್ಲ. ಇದು ನೌಕರರ ಸಂಧ್ಯಾಕಾಲದ ಜೀವನವನ್ನು ಅಭದ್ರತೆಗೆ ತಳ್ಳಲು ಕಾರಣವಾಗಿದೆ. ಪಿಂಚಣಿ ಎಂಬುದು ನೌಕರರು ಮಾಡಿದ ಸೇವೆಗಾಗಿ ಇಳಿವಯಸ್ಸಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಾಗಿ ನೀಡುವ ಹಕ್ಕಿನಂಶದ ಹಣವೆಂದು ಪರಿಗಣಿಸುವಂತೆ ಸರ್ವೋಚ್ಛ ನ್ಯಾಯಾಲಯ ಸಹ ಹೇಳಿದೆ. ಹಾಗಾಗಿ ಅವೈಜ್ಞಾನಿಕ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೇ ಪಿಂಚಣಿ ಪದ್ಧತಿ ಜಾರಿಗೊಳಿಸಲು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಬಿ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಮೋಹನ್.ಎಚ್.ಆರ್., ಪಾಲಿಕೆ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಗೋವಿಂದರಾಜ್, ರಾಜ್ಯ ಸಮಿತಿ ಸದಸ್ಯ ಜಿ.ಎನ್. ಮಂಜಪ್ಪ, ಸಂಘದ ಮುಖಂಡರಾದ ಬಸವರಾಜ್ ಎಚ್.ಜಿ.ಎಂ., ಶಿವಣ್ಣ ಬಿ., ವಿಶ್ವನಾಥ್, ಗುರುಮೂರ್ತಿ, ಮಾರುತಿ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ರಾಷ್ಟ್ರವ್ಯಾಪಿ ಏಕ ಕಾಲದಲ್ಲಿ ಕರೆ ನೀಡಲಾದ ಈ ಹೋರಾಟದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಅಖೀಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ, ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲಾ ಶಿಕ್ಷಕರು, ಲಿಪಿಕ, ವಾಹನ ಚಾಲಕ ಹಾಗೂ ಗ್ರೂಪ್ ಡಿ ನೌಕರರ ಸಂಘ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘ, ಬೆಸ್ಕಾಂ ನೌಕರರ ಒಕ್ಕೂಟ, ಮಹಾನಗರ ಪಾಲಿಕೆ ಪೌರ ಕಾರ್ಮಿಕರ ನೌಕರರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.