Advertisement

ಜಾತ್ಯತೀತ ಸಮ ಸಮಾಜದ ನಿರ್ಮಾಣ ಗುರಿ

11:25 AM Jan 27, 2020 | Naveen |

ದಾವಣಗೆರೆ: ಜಾತ್ಯತೀತ ಮತ್ತು ಸಮ ಸಮಾಜದ ನಿರ್ಮಾಣ ಗಣರಾಜ್ಯ ಹಾಗೂ ಸಂವಿಧಾನದ ಮುಖ್ಯ ಆಶಯ ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ ತಿಳಿಸಿದರು. ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ 71ನೇ ಗಣರಾಜ್ಯೋತ್ಸವದ ಲಿಖೀತ ಸಂದೇಶ ನೀಡಿದ ಅವರು, ಸಂವಿಧಾನದ ಆಶಯಕ್ಕೆ ತಕ್ಕಂತೆ ದೇಶ ಪ್ರಗತಿ ಸಾಧಿಸುತ್ತಿದೆಯೇ ಎಂಬುದರ ಕುರಿತಂತೆ ಗಣತಂತ್ರದ ಸಂದರ್ಭದಲ್ಲಿ ಅವಲೋಕಿಸಬೇಕಾದ ಅಗತ್ಯವಿದೆ. ಮೂಲ ಆಶಯಗಳಿಗೆ ತಕ್ಕಂತೆ ಅಭಿವೃದ್ಧಿಗೆ ಪ್ರತಿಯೊಬ್ಬ ಭಾರತೀಯರು ಶ್ರಮಿಸಬೇಕು ಎಂದು ಮನವಿ ಮಾಡಿದರು.

Advertisement

ಪ್ರಜಾಪ್ರಭುತ್ವ ಎಂದರೆ ಜನರಿಂದ, ಜನರಿಗಾಗಿ, ಜನರಿಂದಲೇ ನಡೆಯುವ
ಸರ್ಕಾರ. 1947 ರ ಆ. 15 ರಂದು ಸ್ವಾತಂತ್ರ್ಯ ದೊರಕಿದಾಕ್ಷಣ ಪ್ರಜಾಪ್ರಭುತ್ವದ ಅವಕಾಶ ಸಿಗಲಿಲ್ಲ. ತನ್ನದೇ ಅಧಿಕೃತ ಸಂವಿಧಾನ ಇರದ ಕಾರಣ 6ನೇ ಮೌಂಟ್‌ ಬ್ಯಾಟನ್‌ ಆಳ್ವಿಕೆಯಲ್ಲಿರಬೇಕಾಯಿತು. ಎರಡೂವರೆ ವರ್ಷಗಳ ನಂತರ ಸಂವಿಧಾನ ಅಧಿಕೃತವಾಗಿ ಜಾರಿಯಾದ ನಂತರ ಈಗ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶವಾಗಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.

ಬ್ರಿಟಿಷರ ದಾಸ್ಯದಲ್ಲಿದ್ದ ಭಾರತ ಸ್ವತಂತ್ರಗೊಂಡು, ಆಳವಾದ ಅಧ್ಯಯನದ ನಂತರ ಸಿದ್ಧಪಡಿಸಲಾದ ಸಂವಿಧಾನವನ್ನು 1949ರ ನ. 26 ರಂದು ಅಂಗೀಕರಿಸಲಾಯಿತು. ಅಂಗೀಕರಿಸಲಾದ ಸಂವಿಧಾನವನ್ನು 1950ರ ಜ. 26 ರಂದು ಲೋಕಸಭೆಯು ಪ್ರಜೆಗಳ ಹೆಸರಿನಲ್ಲಿ ನೀಡಿದ ದಿನವೇ ಗಣರಾಜ್ಯೋತ್ಸವ ದಿನ ಎಂದು ಸ್ಮರಿಸಿದರು.

1946 ರ ಡಿ. 11 ರಂದು ಡಾ|ಬಾಬು ರಾಜೇಂದ್ರ ಪ್ರಸಾದ್‌ರವರ ಅಧ್ಯಕ್ಷತೆಯಲ್ಲಿ
ಸಂವಿಧಾನ ರಚನಾ ಸಮಿತಿ, 1947 ರ ಆ. 29 ರಂದು ಡಾ| ಬಿ.ಆರ್‌. ಅಂಬೇಡ್ಕರ್‌ ರವರ ಅಧ್ಯಕ್ಷತೆ ಸಂವಿಧಾನ ಕರಡು ಸಮಿತಿ ನೇಮಿಸಲಾಯಿತು. 1948 ರ ಫೆಬ್ರವರಿಯಲ್ಲಿ ಕರಡು ಸಂವಿಧಾನ ಸಿದ್ಧಗೊಂಡಿತು. ವಿಶ್ವದ ಅತಿ ಶ್ರೇಷ್ಠ ಸಂವಿಧಾನದ ರಚನೆಯಲ್ಲಿ ಸಂವಿಧಾನದ ಪಿತಾಮಹ… ಎಂದು ಕರೆಯಲ್ಪಡುವ ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ರವರ ಪಾತ್ರ ವಿಶೇಷ ಎಂದು ಸ್ಮರಿಸಿದರು.

ಸಂವಿಧಾನ ಕೇವಲ ಜನರಿಗೆ ಹಕ್ಕುಗಳ ನೀಡುವುದಲ್ಲ. ಜವಾಬ್ದಾರಿಯನ್ನೂ ತಿಳಿಸುತ್ತದೆ. ಸಂವಿಧಾನದ ಪ್ರಮುಖ ಆಶಯ ಸಮಾನತೆ. ಅಭಿವ್ಯಕ್ತಿ, ಸಭಾ, ಸಂಘಟನಾ, ಸಂಚಾರ ಹೀಗೆ ಮೊದಲಾದ ಸ್ವಾತಂತ್ರ್ಯದ ಹಕ್ಕುಗಳ ಜೊತೆಗೆ ಸಮಾನತೆ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳನ್ನೂ ಸಂವಿಧಾನ ನೀಡಿದೆ ಎಂದು ತಿಳಿಸಿದರು.

Advertisement

ಸಂವಿಧಾನ ಮತ್ತು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕೆಲಸ ಕಾರ್ಯಗಳು, ನಾಗರಿಕರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಮೂಲಕ ಭವ್ಯ ಭಾರತದ ಕನಸು ನನಸಾಗಿಸಬಹದು ಎಂದು ಆಶಿಸಿದರು.

ಭಾರತದ ಸಂವಿಧಾನಕ್ಕೆ 71 ತುಂಬಿದೆ. ಏಳು ದಶಕಗಳ ಕಾಲ ಉಳಿದಿದೆ ಎಂಬುದು ಒಂದು ಸಾಧನೆ. ಏಕೆಂದರೆ ಪ್ರಪಂಚದಲ್ಲಿ ಸಂವಿಧಾನಗಳು ಇಷ್ಟು ದೀರ್ಘ‌ ಕಾಲ ಬಾಳಿಲ್ಲ. ಅಮೆರಿಕದ ಚಿಕ್ಯಾಗೋ ವಿಶ್ವವಿದ್ಯಾಲಯ ಲೆಕ್ಕಾಚಾರದ ಪ್ರಕಾರ ಸಂವಿಧಾನಗಳ ಸರಾಸರಿ
ಆಯುಷ್ಯ 17 ವರ್ಷ ಮಾತ್ರ. ಅಷ್ಟೇ ಅಲ್ಲ, ಅಧ್ಯಯನವೊಂದರಲ್ಲಿ ಪರಿಶೀಲಿಸಲಾದ ಸಂವಿಧಾನಗಳ ಪೈಕಿ ಪ್ರತೀ ನೂರರಲ್ಲಿ ಏಳು ಸಂವಿಧಾನಗಳು ಎರಡು ವರ್ಷ ತುಂಬುವುದರೊಳಗೆ ಕಳೆದುಹೋಗಿವೆ. ಆದರೆ, ಭಾರತದ ಸಂವಿಧಾನ ಇನ್ನೂ ಉಳಿದಿದೆ, ಮಾತ್ರವಲ್ಲ ಜನಮನದಲ್ಲಿ ಅದಕ್ಕೆ ಪವಿತ್ರವಾದ ಸ್ಥಾನ ಇದೆ ಎನ್ನುವುದನ್ನು ಸಂವಿಧಾನಗಳ ಅಲ್ಪಾಯುಷ್ಯದ ಹಿನ್ನೆಲೆಯಲ್ಲಿ ಯೋಚಿಸಿದಾಗ ರೋಚಕ ಎನಿಸುತ್ತದೆ ಎಂದರು.

ದಾವಣಗೆರೆ ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಹರಿಹರದ ಎಂ.ಪಿ. ಶ್ರೀಷ್ಮಾ ಹೆಗಡೆ ದೆಹಲಿಯ ರಾಜಪಥ್‌ನಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಅಖೀಲ ಭಾರತ ಹಿರಿಯ ವಿಭಾಗದ(ಬಾಲಕಿಯರು) ಎನ್‌ ಸಿಸಿ ಪೆರೇಡ್‌ನ‌ ಮುಂದಾಳತ್ವ ವಹಿಸಿದ್ದಕ್ಕೆ ಅಭಿನಂದನಾರ್ಹರು ಎಂದು ಸಂತಸ ವ್ಯಕ್ತಪಡಿಸಿದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಅಧ್ಯಕ್ಷತೆ ವಹಿಸಿದ್ದರು. ಸಂಸದ ಜಿ.ಎಂ. ಸಿದ್ದೇಶ್ವರ್‌, ವಿಧಾನ ಪರಿಷತ್ತು ಸದಸ್ಯ ಕೆ. ಅಬ್ದುಲ್‌ ಜಬ್ಟಾರ್‌, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌ ಇತರರು ಇದ್ದರು.

22 ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದವು. 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹೊನ್ನಾಳಿ ತಹಶೀಲ್ದಾರ್‌ ತುಷಾರ್‌ ಬಿ. ಹೊಸೂರ್‌ ಒಳಗೊಂಡಂತೆ 10
ಜನರಿಗೆ ಸರ್ವೋತ್ತಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಜ್ಯು ಏಷಿಯಾ, ವಿಶ್ವಚೇತನ
ವಿದ್ಯಾನಿಕೇತನ ವಸತಿಯುತ ಶಾಲೆ, ಸೇಂಟ್‌ಪಾಲ್ಸ್‌ ಪ್ರೌಢಶಾಲೆ ಮತ್ತು ಪುಷ್ಪಾ ಮಹಾಲಿಂಗಪ್ಪ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ದೇಶಪ್ರೇಮ, ತ್ಯಾಗ, ಬಲಿದಾನ ನೃತ್ಯರೂಪಕಗಳನ್ನು ಕಣ್ಮನ ಸೆಳೆದವು.

Advertisement

Udayavani is now on Telegram. Click here to join our channel and stay updated with the latest news.

Next