Advertisement

ಸೈನಿಕರು-ಪೊಲೀಸರ ಸೇವೆ ಮರೆಯುವಂತಿಲ್ಲ

11:32 AM Oct 19, 2019 | Naveen |

ದಾವಣಗೆರೆ: ದೇಶ ಸೇವೆ ದೇವರು, ಈಶ ಸೇವೆ ಮಾಡಿದಂತೆ. ಅಂತಹ ಸೇವೆ ಸಲ್ಲಿಸುವ ಯೋಧರ ಸೇವೆ ಮರೆಯುವಂತಿಲ್ಲ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದ್ದಾರೆ.

Advertisement

ಅ.21ರ ಹುತಾತ್ಮರ ದಿನಾಚರಣೆ ಅಂಗವಾಗಿ ಶುಕ್ರವಾರ ಸಂಜೆ ಜಯದೇವ ವೃತ್ತದಲ್ಲಿ ನಡೆದ ಹುತಾತ್ಮ ಯೋಧರ ಮತ್ತು ಪೊಲೀಸರ ಕುಟುಂಬ ವರ್ಗದವರ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ನೆಮ್ಮದಿ, ಸುರಕ್ಷಿತವಾಗಿ ಇರಲು ಹಗಲಿರುಳು ಶ್ರಮಿಸುವಂತಹ ಪೊಲೀಸರು ಮತ್ತು ಸೈನಿಕರ ಸೇವೆಯನ್ನು ಮರೆಯುವಂತೆಯೇ ಇಲ್ಲ ಎಂದರು.

ಭಾರತದಲ್ಲಿನ 140 ಕೋಟಿ ಜನರು ಸುಖ, ನೆಮ್ಮದಿ, ಸುರಕ್ಷಿತವಾಗಿ ಇರಲು ಸೈನಿಕರ ಕರ್ತವ್ಯ, ತ್ಯಾಗ, ಬಲಿದಾನ ಕಾರಣ. ಯಾವುದಾದರೂ ಇಲಾಖೆಯಲ್ಲಿ ಹುತಾತ್ಮರು… ಎನ್ನುವುದಾದರೆ ಅದು ಸೈನ್ಯ ಮತ್ತು ಪೊಲೀಸ್‌ ಇಲಾಖೆಯಲ್ಲಿ ಮಾತ್ರವೇ. ಸಮಾಜದ ಸ್ವಾಸ್ಥ್ಯಕ್ಕಾಗಿ ತಮ್ಮ ಪ್ರಾಣಾರ್ಪಣೆ ಮಾಡಿದವರನ್ನು ಹುತಾತ್ಮರು ಎಂದು ಕರೆಯಲಾಗುತ್ತದೆ.

ಹುತಾತ್ಮರಾದವರು ಅಮರರು. ಅವರು ಸದಾ ನಮ್ಮ ನಡುವೆಯೇ ಇರುತ್ತಾರೆ ಎಂದು ತಿಳಿಸಿದರು. ನೆರೆಯ ಪಾಕಿಸ್ತಾನ ನೇರ ಯುದ್ಧ ಮಾಡದೆ ಹಿಂಬಾಗಿಲ ಮೂಲಕ ಅಂದರೆ ಭಯೋತ್ಪಾದಕರ ಮೂಲಕ ಪದೆ ಪದೇ ದಾಳಿ ನಡೆಸುತ್ತಿದೆ. ಭಾರತದೊಂದಿಗೆ ನಡೆದ ಯುದ್ಧದಲ್ಲಿ ಸೋಲನ್ನಪ್ಪಿದ್ದರೂ ಭಂಡತನದಿಂದ ವರ್ತಿಸುತ್ತಿದೆ. ಭಯೋತ್ಪಾದಕರನ್ನು ಹೊಡೆದು, ಓಡಿಸುವ ದೊಡ್ಡ ಕೆಲಸ ಮಾಡುತ್ತಿರುವ ಯೋಧರನ್ನು ನಾವು ಮರೆಯುವಂತೆಯೇ ಇಲ್ಲ.
ಸೈನಿಕರಂತೆ ಪೊಲೀಸರು ಸಹ ಸಾರ್ವಜನಿಕರ ಸುಖ, ನೆಮ್ಮದಿಗಾಗಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

ಹಿಂದೆ ಸಾಕಷ್ಟು ಸಂಖ್ಯೆಯಲ್ಲಿ ಕರ್ನಾಟಕದಿಂದ ಸೈನ್ಯಕ್ಕೆ ಸೇರಲಾಗುತ್ತಿತ್ತು. ಬೆಳಗಾವಿ ಮುಂತಾದ ಜಿಲ್ಲೆಯಲ್ಲಿ ಸಾಕಷ್ಟು ಯುವಕರು ಸೈನ್ಯಕ್ಕೆ ಸೇರುತ್ತಿದ್ದರು. ದಾವಣಗೆರೆಯ ಪಕ್ಕದ ತೋಳಹುಣಸೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರಿದ್ದಾರೆ. ಯುವ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವಂತಾಗಬೇಕು ಎಂದು ಆಶಿಸಿದರು.

Advertisement

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪದ್ಮಾ ಬಸವಂತಪ್ಪ ಮಾತನಾಡಿ, ದೇಶ, ಸಮಾಜಕ್ಕೆ ಪ್ರಾಣಾರ್ಪಣೆ ಮಾಡಿದಂತಹ ಹುತಾತ್ಮರ ಕುಟುಂಬದವರನ್ನು ಗೌರವ ಮತ್ತು ಮರ್ಯಾದೆಯಿಂದ ಕಾಣಬೇಕು. ಆದರೆ, ಆ ರೀತಿಯಲ್ಲಿ ಕಾಣದೇ ಇರುವುದು ಸಹ ಇದೆ. ಹುತಾತ್ಮ ಕುಟುಂಬದವರಿಗೆ ಕೀಳಾಗಿ ಕಾಣುವಂತಹ ಮನೋಭಾವ ದೂರ ಆಗಬೇಕು ಎಂದರು.

ಪ್ರಾಸ್ತಾವಿಕ ನುಡಿಗಳಾಡಿದ ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ, ಪ್ರತಿ ವರ್ಷ ಅ.21 ರಂದು ಪೊಲೀಸ್‌ ಹುತಾತ್ಮರ ದಿನ ಆಚರಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಹುತಾತ್ಮ ಕುಟುಂಬದವರಿಗೆ ಪೊಲೀಸ್‌ ಬ್ಯಾಂಡ್‌ ಗೌರವ ಹಾಗೂ ಸನ್ಮಾನ ಮಾಡಲಾಗುತ್ತಿದೆ.

ಸೈನಿಕರ ದೇಶಭಕ್ತಿ, ಕರ್ತವ್ಯ, ತ್ಯಾಗ, ಬಲಿದಾನವನ್ನು ಸದಾ ನೆನೆಯಬೇಕು ಎಂದು ತಿಳಿಸಿದರು. ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎಂ. ರಾಜೀವ್‌, ಉಪಾಧೀಕ್ಷಕ ಮಂಜುನಾಥ್‌ ಕೆ. ಗಂಗಲ್‌ ಇತರರು ಇದ್ದರು. ದೇವರಾಜ್‌, ನಿರ್ಮಲ ನಿರೂಪಿಸಿದರು.

ಸಿಆರ್‌ಪಿಎಫ್‌ನ ಜಗದೀಶ್‌, ಎಸ್‌.ಎಚ್‌. ಮಂಜಪ್ಪ, ಸಿಐಎಸ್‌ಎಫ್‌ನ ಟಿ. ಬಸವರಾಜ್‌, ಬಿಎಸ್‌ ಎಫ್‌ನ ಸಿ.ಎಸ್‌. ಯೋಗೇಶ್‌, ಸಿ.ಆರ್‌. ವೀರೇಶ್‌, ಸೈನ್ಯದ ಜಾವೇದ್‌ನಾಯ್ಕ, ಜಿಲ್ಲಾ ಮೀಸಲು ಪಡೆಯ ಆಂಜನೇಯ ಕುಟುಂಬ ವರ್ಗದವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next