Advertisement

ಸಾಧನೆಗಳ ಚರ್ಚೆಗೆ ಮೋದಿ ಬರಲಿ

11:44 AM Apr 21, 2019 | |

ದಾವಣಗೆರೆ: ಕಳೆದ ಐದು ವರ್ಷಗಳಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಮಾಡಿದ ಸಾಧನೆಯೊಂದಿಗೆ ಬರಲಿ. ನಾನೂ ಸಹ ಈ ಹಿಂದೆ ಮುಖ್ಯಮಂತ್ರಿಯಾಗಿ ಐದು ವರ್ಷ ಆಡಳಿತ ಅವಧಿಯ ಸಾಧನಾ ಪಟ್ಟಿಯೊಂದಿಗೆ ಬರುವೆ. ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

Advertisement

ಶನಿವಾರ, ತ್ಯಾವಣಿಗೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್‌.ಬಿ. ಮಂಜಪ್ಪರ ಪರ ಚುನಾವಣಾ ಪ್ರಚಾರದ ತಮ್ಮ ಭಾಷಣದುದ್ದಕ್ಕೂ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಕಳೆದ ಚುನಾವಣೆಯಲ್ಲಿ ಮತ ನೀಡಿದ ಜನರ ನಂಬಿಕೆಗೆ ನರೇಂದ್ರ ಮೋದಿ ದ್ರೋಹ ಬಗೆದಿದ್ದಾರೆ. ಸ್ವಾತಂತ್ರ್ಯಾ ನಂತರ ಹಾಗೂ 40 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ದೇಶದಲ್ಲಿ ಆಡಳಿತ ನಡೆಸಿದ ಪ್ರಧಾನಿಗಳಲ್ಲಿ ಮೋದಿಯಷ್ಟು ಸುಳ್ಳು ಹೇಳುವವರು ಬಂದಿಲ್ಲ ಎಂದರು.

ಬಿಜೆಪಿಯವರದ್ದು ಸುಳ್ಳೇ ಬಂಡವಾಳ. ಬೇರೇನೂ ಇಲ್ಲ. 5 ವರ್ಷ ಮುಗಿಯುತ್ತಾ ಬಂದರೂ ನರೇಂದ್ರ ಮೋದಿ ಯಾವುದೇ ಭರವಸೆ ಈಡೇರಿಸಿಲ್ಲ. ಆದರೆ, ನಾವು 2013ರಲ್ಲಿ ಕೊಟ್ಟ 165 ಭರವಸೆಗಳನ್ನು ಈಡೇರಿಸಿದ್ದೇವೆ. ಮುಖ್ಯಮಂತ್ರಿಯಾಗಿ ಕೈಗೊಂಡ ಅಭಿವೃದ್ಧಿ ಕಾರ್ಯ, ದೇಶದಲ್ಲೇ ಯಾವ ಸರ್ಕಾರವೂ ಇನ್ನೂ ಜಾರಿಗೊಳಿಸದ ಯೋಜನೆಗಳು, ಬಡವರು-ಶೋಷಿತರ ರಕ್ಷಣೆಗಾಗಿ ಅನುಷ್ಠಾನಗೊಳಿಸಿದ ಕಾಯ್ದೆಗಳ ಪಟ್ಟಿಯನ್ನೇ ತೆರೆದಿಡುವೆ. ಈ ರೀತಿ ಪಟ್ಟಿಯನ್ನು ನೀನು ಇಡಲು
ಸಾಧ್ಯವೇ ಎಂದು ಏಕವಚನದಲ್ಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು.

ಜನರ ದಾರಿತಪ್ಪಿಸಿ, ಮೋಸ ಮಾಡುವುದಕ್ಕಿಂತ ಮಹಾಪಾಪ ಮತ್ತೊಂದಿಲ್ಲ. ಜನರಿಗೆ ಬೇಕಿರುವುದು ಮನ್‌ ಕಿ ಬಾತ್‌ ಆಲ್ಲ, ಕಾಮ್‌ ಕಿ ಬಾತ್‌. ನಿನ್ನ
ಅಧಿಕಾರದ ಅವಧಿಯಲ್ಲಿ ಯಾರ ವಿಕಾಸ ಆಗಿದೆ?. ವಿಜಯ್‌ ಮಲ್ಯ, ಚೋಕ್ಸಿ, ಅನಿಲ್‌ ಅಂಬಾನಿ, ಅದಾನಿ ಅವರಂತಹ ಶ್ರೀಮಂತರ ವಿಕಾಸವಾಗಿದೆಯೇ ಹೊರತು ಬಡವರು, ರೈತರ ಸ್ಥಿತಿ ಬದಲಾಗಿಯೇ? ನೀವೆಲ್ಲಾ ಸಾಮಾಜಿಕ ನ್ಯಾಯದ ಪರವಾಗಿಲ್ಲ ಎಂದು ಟೀಕಿಸಿದರು.

ಅಭಿವೃದ್ಧಿ ಬಗ್ಗೆ ಚರ್ಚಿಸುವುದನ್ನು ಬಿಟ್ಟು ಭಾವನಾತ್ಮಕ ವಿಷಯ ಪ್ರಸ್ತಾಪಿಸುವ ಪ್ರಧಾನಿ, ಬಾಗಲಕೋಟೆಯನ್ನು ಬಾಲಾಕೋಟ್‌ ಗೆ ಹೋಲಿಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ
ಅವರು, ದೇಶದ ಭದ್ರತೆ ನನ್ನ ಕೈಯಿಂದಲೇ ಸಾಧ್ಯ ಎಂಬುದಾಗಿ ನರೇಂದ್ರ ಮೋದಿ ಹೇಳುವ ಸುಳ್ಳನ್ನು ಮುಗ್ಧ ಜನ ನಂಬುತ್ತಾರೆ. ಆದರೆ, ಇತಿಹಾಸ ತೆಗೆದು ನೋಡಿ, ನೆಹರೂ ಅವರಿಂದ ಇಂದಿರಾಗಾಂಧಿ ಪ್ರಧಾನಿಯಾಗಿದ್ದವರೆಗೂ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಪಾಕಿಸ್ತಾನದ ಮೇಲೆ ನಾಲ್ಕು ಬಾರಿ ಯುದ್ಧ ಹಾಗೂ 12 ಸರ್ಜಿಕಲ್‌ ಸ್ಟ್ರೈಕ್ ಆಗಿವೆ. ಆದರೆ, ಕಾಂಗ್ರೆಸ್‌ ಎಂದೂ ಸಹ ಆ ಘಟನೆಗಳನ್ನು ಚುನಾವಣೆಗೆ ಬಳಸಿಕೊಂಡಿಲ್ಲ. ಆದರೆ, ಮೋದಿ ಈ ಚುನಾವಣೆಯಲ್ಲಿ ತಾನೇ ಸ್ಟೆನ್‌ಗನ್‌ ಹಿಡಿದುಕೊಂಡು ಯುದ್ಧ ಮಾಡಿದ ರೀತಿ ಬಣ್ಣಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

Advertisement

1948ರಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಯುದ್ಧ ಮಾಡಿದಾಗ ನರೇಂದ್ರ ಮೋದಿ ಹುಟ್ಟೇ ಇರಲಿಲ್ಲ. ನಾನು 1947ರಲ್ಲಿ ಹುಟ್ಟಿದವನು. ಮೋದಿ ನನಗಿಂತ ಚಿಕ್ಕವನು. 1971ರಲ್ಲಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಪಾಕಿಸ್ತಾನದ 90 ಸಾವಿರ
ಸೈನಿಕರನ್ನು ಸದೆ ಬಡಿಯಲಾಯಿತು. ಆಗ ಪೂರ್ವ ಪಾಕಿಸ್ತಾನ ಎಂದು ಕರೆಯಲ್ಪಡುತ್ತಿದ್ದ ಪ್ರದೇಶ ಬಾಂಗ್ಲಾ ದೇಶವಾಗಿ ವಿಭಜನೆಯಾಯಿತು. ನೀನೇನಾದರೂ ಅಂತಹ ಕೆಲಸ ಮಾಡಿದ್ದೀಯ? ಎಂದು ಪ್ರಶ್ನಿಸಿದ ಅವರು, ಯುದ್ಧ ಮಾಡೋರು ಸೈನಿಕರು. ಆದರೆ, ಹೆಸರು ತೆಗೆದುಕೊಳ್ಳುವುದು ಇವರು ಎಂದು ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗಾಗಿ ಏನು ಮಾಡಿದ್ದೀಯಾ ಎಂಬುದನ್ನು ಹೇಳು. ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ ಸೊಸೈಟಿ ಸಾಲ 8,161 ಕೋಟಿ ರೂ. ಮನ್ನಾ ಮಾಡಿದೆ. ನೀನು ಯಾವ ಸಾಲ ಮನ್ನಾ ಮಾಡಿದ್ದೀಯಾ? ರೈತರ ಆದಾಯ ದುಪ್ಪಟ್ಟು ಮಾಡುವೆ ಎಂಬುದಾಗಿ ಹೇಳಿದ್ದೆ, ಅದು ಆಗಿದೆಯೇ?. ಹಸಿರು ಶಾಲು ಹೆಗಲ ಮೇಲೆ ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸುವ ಯಡಿಯೂರಪ್ಪ ರೈತರ ಸಾಲ ಮನ್ನಾ ಮಾಡಿದ್ದಾನೋ? ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಇದೇ ಯಡಿಯೂರಪ್ಪ ಸಾಲ ಮನ್ನಾ ವಿಷಯ ಪ್ರಸ್ತಾಪಿಸಿದಾಗ, ನಮ್ಮ ಬಳಿ
ನೋಟ್‌ ಪ್ರಿಂಟ್‌ ಮಾಡುವ ಮೆಷಿನ್‌ ಇಲ್ಲ ಎಂಬುದಾಗಿ ವಿಧಾನ ಪರಿಷತ್‌ನಲ್ಲಿ ಹೇಳಿದ್ದರಲ್ಲ. ಇವರೆಲ್ಲಾ ರೈತರ ಪರ ಮಾತನಾಡುತ್ತಾರೆ ಎಂದು ಮೂದಲಿಸಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ಗೊಬ್ಬರ ಬೆಲೆ ಮೂರು ಪಟ್ಟು ಏರಿದೆ. ಕಚ್ಚಾತೈಲ ಬೆಲೆ ಇಳಿದರೂ ಪೆಟ್ರೋಲ್‌-ಡಿಸೇಲ್‌ ಬೆಲೆ ಏರುತ್ತಿದೆ. 380 ರೂ. ಇದ್ದ ಅಡುಗೆ ಅನಿಲ ಈಗ 950 ರೂ. ತಲುಪಿದೆ. ಅಚ್ಛೆ ದಿನ್‌ ಆಯೇಗಾ ಎಂದು ಹೇಳುತ್ತಿದ್ದೆಯಲ್ಲಾ, ಯಾರಿಗೆ ಬಂದಿದೆ ಆ ಅಚ್ಛೆ ದಿನ್‌ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭ್ರಮಾಲೋಕ ಸೃಷ್ಟಿಸಿ ಜನರ ದಾರಿತಪ್ಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮಾತನ್ನು ನಂಬಿ, ಈ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಡಿ ಎಂದು ಸಾರ್ವಜನಿಕರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next