Advertisement

ಸಿದ್ಧರಾಮಯ್ಯ ಏಕವಚನ ಬಳಕೆ ನಿಲ್ಲಿಸಲಿ

11:59 AM Apr 21, 2019 | |

ದಾವಣಗೆರೆ: ಪ್ರಧಾನ ಮಂತ್ರಿ ಬಗ್ಗೆ ಏಕವಚನದಲ್ಲಿ ಠೇಂಕಾರದಿಂದ ಮಾತನಾಡುವುದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ. ಅವರು ಏಕವಚನದಲ್ಲಿ ಅವಹೇಳನಕಾರಿಯಾಗಿ ಮಾತನಾಡುವುದನ್ನು ಬಿಡಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ಎಸ್‌.ಸುರೇಶ್‌ ಕುಮಾರ್‌ ಒತ್ತಾಯಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಧಿ, ಸಮಾಸದ ಬಗ್ಗೆ ಪಾಠ ಮಾಡುವಂತಹ ವ್ಯಾಕರಣ ಮೇಷ್ಟ್ರು ಸಿದ್ದರಾಮಯ್ಯ ಅವರಿಗೆ ಬಹುಶಃ ಏಕವಚನ ಮತ್ತು ಬಹುವಚನಗಳ ಬಗ್ಗೆ ಕಲಿಸಿಕೊಟ್ಟಿಲ್ಲ ಎಂದು ಕಾಣಿಸುತ್ತದೆ ಎಂದು ಟೀಕಿಸಿದರು.

ಮಾಜಿ ಮುಖ್ಯಮಂತ್ರಿ, ಕನ್ನಡ ಕಾವಲು ಸಮಿತಿ ಅಧ್ಯಕ್ಷರೂ ಆಗಿದ್ದ ಸಿದ್ದರಾಮಯ್ಯ ಏಕವಚನದಲ್ಲಿ
ಮಾತನಾಡುವುದೇ ನನ್ನ ಆಜನ್ಮ ಸಿದ್ಧ ಹಕ್ಕು ಎನ್ನುವಂತೆ ಮಾತನಾಡುತ್ತಿದ್ದಾರೆ. ಅವರಂತೆ ಎಲ್ಲರೂ ಏಕವಚನದಲ್ಲಿ ಮಾತನಾಡಲು ಪ್ರಾರಂಭಿಸಿದರೆ ಅವರೇ ಹೇಳುವಂತೆ ಅವರಪ್ಪನಾಣೆ… ಕರ್ನಾಟಕದ ರಾಜಕಾರಣದ ಪರಿಭಾಷೆಯೆ ಬದಲಾಗಿ ಹೋಗುತ್ತದೆ ಎಂದು ಎಚ್ಚರಿಸಿದರು.

2019ರಲ್ಲಿ ಅವಕಾಶ ಇಲ್ಲ: ಅಖಿಲ ಭಾರತ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಿಯಾದರೆ ನಾನು ಅವರ ಪಕ್ಕದಲ್ಲಿ ಮಾರ್ಗದರ್ಶನ ನೀಡುವ ಸಲಹೆಗಾರರಾಗಿ ಇರುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.
ದೇವೇಗೌಡ ಹೇಳಿದ್ದಾರೆ.

ಅವರ ಕನಸು 2019ರಲ್ಲಿ ಈಡೇರುವ ಅವಕಾಶವೇ
ಇಲ್ಲ. 2024ಕ್ಕೆ ಈಗಿನಿಂದಲೇ ಪ್ರಯತ್ನಿಸಿದರೆ ಆಗಬಹುದು. ಗೋಡೆ ಮೇಲಿನ ಬರಹದಂತೆ ಮೋದಿ
ಅವರು ಮತ್ತೊಮ್ಮೆ ಪ್ರಧಾನಿ ಆಗುವುದು ಸ್ಪಷ್ಟವಾಗಿದೆ.

Advertisement

ಅದಕ್ಕೆ ಪೂರಕವಾಗಿ ಕರ್ನಾಟಕದಿಂದ 22
ಸಂಸದದರು ಕೇಂದ್ರ ಸರ್ಕಾರದ ರಚನೆಯಲ್ಲಿ
ಪ್ರಮುಖ ಪಾತ್ರ ವಹಿಸುತ್ತಾರೆ. ದಾವಣಗೆರೆಯಿಂದ ಜಿ.ಎಂ. ಸಿದ್ದೇಶ್ವರ್‌ ಗೆಲ್ಲುವರು ಎಂದು ಸುರೇಶ್‌ಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

ನಾವು ಹೇಳಿಯೇ ಇಲ್ಲ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿಯವರು ಯಾರು ಹೇಳಿಯೇ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏನಾದರೂ 22 ಸ್ಥಾನ ಗೆದ್ದರೆ ಸರ್ಕಾರಕ್ಕೆ ಅಪಾಯ ಎಂಬುದಾಗಿ ಕಾಂಗ್ರೆಸ್‌ನ ವೀರಪ್ಪ ಮೊಯ್ಲಿ ಅವರೇ ಆ ಮಾತು ಹೇಳಿದ್ದಾರೆ. ನಮಗೆ ಮೈತ್ರಿ ಸರ್ಕಾರ ಪತನ ಆಗಬೇಕಾಗಿಲ್ಲ.

ಮೈತ್ರಿ ಸರ್ಕಾರ ಗಟ್ಟಿಯಾಗಿರಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರು ಹಾಕುವುದನ್ನ ನಿಲ್ಲಿಸಿ, ರಾಜ್ಯದ ಜನರ ಕಣ್ಣೆರು ಒರೆಸುವಂತಾಗಬೇಕು ಎಂದು ಆಶಿಸಿದರು.

ಸರ್ವೋಚ್ಚ ನ್ಯಾಯಾಲಯದ ಎಚ್ಚರಿಕೆಯ ಹೊರತಾಗಿಯೂ ರಾಹುಲ್‌ ಗಾಂಧಿ ಶುಕ್ರವಾರ ಕರ್ನಾಟಕದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಚೌಕಿದಾರ್‌… ಚೋರ್‌ ಎನ್ನುವಂತೆ ಮಾತನಾಡಿದ್ದಾರೆ. ಅವರು ಕೇವಲ ಮತಗಳಿಗಾಗಿ ಸರ್ವೋಚ್ಚ ನ್ಯಾಯಾಲಯದ ಆದೇಶ, ತೀರ್ಪಿಗೂ ಮನ್ನಣೆ ನೀಡದೆ ಬರೀ ಅಪಪ್ರಚಾರದಲ್ಲಿ ಮುಳುಗಿರುವ ರಾಜಕಾರಣಿ ಎಂಬುದು ಅವರ ಹೇಳಿಕೆಯಿಂದಲೇ ಗೊತ್ತಾಗುತ್ತದೆ ಎಂದರು.

ಮತದಾನ ಮಾಡಲಿಕ್ಕೆ ಹೋದವರಿಗೆ ಮತ ಹಾಕುವ ಹಕ್ಕು ಇಲ್ಲ. ಮತದಾನ ಮಾಡದೇ ಇದ್ದವರಿಗೆ ಹಕ್ಕಿದೆ. ಮಾತೆತ್ತಿದರೆ ಸಂವಿಧಾನ ಕೋಟ್‌ ಮಾಡುವ ವಿ.ಎಸ್‌. ಉಗ್ರಪ್ಪ ಮತದಾನ ಮಾಡಿಯೇ ಇಲ್ಲ. ದಿವ್ಯಾಸ್ಪಂದನ ಅಲಿಯಾಸ್‌ ರಮ್ಯಾ ಮೂರು ಬಾರಿ ಮತದಾನ ಮಾಡದೆ ಹ್ಯಾಟ್ರಿಕ್‌ ಸಾಧಿಸಿದ್ದಾರೆ. ಮತದಾನ ಮಾಡದೇ ಇರುವಂತಹ ವಿ.ಎಸ್‌.ಉಗ್ರಪ್ಪ
ಇನ್ನು ಮುಂದೆ ಸಂವಿಧಾನ ಕೋಟ್‌ ಮಾಡುವುದನ್ನು ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.

ರಾಯಚೂರಿನ ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಸಾವು ಆಘಾತಕಾರಿ ಘಟನೆ. ರಾಜ್ಯ ಸರ್ಕಾರ ತಪ್ಪಿತಸ್ಥರ ವಿರುದ್ಧ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ಇಡೀ ಸಮಾಜಕ್ಕೆ ಒಂದು ಸಂದೇಶ ನೀಡಬೇಕು ಎಂದು ಒತ್ತಾಯಿಸಿದರು. ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್‌. ಶಿವಯೋಗಿಸ್ವಾಮಿ, ಜಿ.ಕೆ. ಸುರೇಶ್‌ಕುಮಾರ್‌, ಕೆ.ಎಂ. ಸುರೇಶ್‌ಕುಮಾರ್‌, ಕೆ. ರಾಘವೇಂದ್ರ, ಎನ್‌. ರಾಜಶೇಖರ್‌, ಅಜಯಕುಮಾರ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಆಂಜನೇಯ ಕನವರಿಕೆ
ಮಾಜಿ ಸಚಿವ ಎಚ್‌. ಆಂಜನೇಯ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುವಷ್ಟು ಪಕ್ವ ಆಗಿಲ್ಲ. ಅವರು ಮಾತನಾಡಿಲ್ಲ ಬಹುಶಃ ಕನವರಿಸಿರಬಹುದು. ದೇಶವನ್ನಾಳಲು ಮೋದಿ ಅವರೇ ಲಾಯಕ್‌ ಎಂದು ಜನರು ತೀರ್ಮಾನಿಸಿ ಅವರನ್ನು ಗೆಲ್ಲಿಸಿದ್ದಾರೆ. ಆಂಜನೇಯ ಅಷ್ಟೊಂದು ಲಾಯಕ್‌ ಆಗಿದ್ದಕ್ಕೆ ಹೊಳಲ್ಕೆರೆ ಜನರು ಒಂದು ವರ್ಷದ ಹಿಂದೆಯೇ ಪಾಠ ಕಲಿಸಿದ್ದಾರೆ. ಅವರು ಮೊದಲು ಲಾಯಕ್‌ ಆಗಲಿ… ಎಂದು ರಾಜ್ಯ ಬಿಜೆಪಿ ವಕ್ತಾರ ಎಸ್‌. ಸುರೇಶ್‌ಕುಮಾರ್‌ ತಿವಿದರು.

ನ್ಯಾಯಾಂಗದ ಮೊರೆ
ಏ.18 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ 1.5 ಲಕ್ಷದಷ್ಟು ಮತದಾರರು ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದ ಕಾರಣಕ್ಕೆ ಮತದಾನದಿಂದ ವಂಚಿತರಾಗಬೇಕಾಯಿತು. ಇದೊಂದು ದೊಡ್ಡ ಹಗರಣ ಎಂದರೂ ತಪ್ಪಾಗಲಾರದು. ಕಳೆದ ವಿಧಾನಸಭಾ
ಚುನಾವಣೆಯಲ್ಲಿ ಮತದಾನ ಮಾಡಿದವರು ಅದೇ ವಿಳಾಸದಲ್ಲಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರೇ ಇಲ್ಲ ಎನ್ನುವುದಕ್ಕೆ ಚುನಾವಣಾ ಆಯೋಗವೇ ಕಾರಣ. ಈ ಬಗ್ಗೆ ಬಿಜೆಪಿ ನ್ಯಾಯಾಂಗದ ಮೊರೆ ಹೋಗಲಿದೆ ಎಂದು ಎಸ್‌. ಸುರೇಶ್‌ಕುಮಾರ್‌ ತಿಳಿಸಿದರು.

ಸರ್ಕಾರ ಸ್ಪಷ್ಟಪಡಿಸಲಿ
ಅಖಿಲ ಭಾರತ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಕೇರಳದ ವೈನಾಡಿನಲ್ಲಿ ಪ್ರಚಾರ ಸಭೆಯಲ್ಲಿ ನಾನು ಆಯ್ಕೆಯಾದರೆ ಬಂಡಿಪುರ ರಾಷ್ಟ್ರೀಯ ಉದ್ಯಾನವನ ಮಾರ್ಗದಲ್ಲಿ ರಾತ್ರಿ ವೇಳೆಯೂ ವಾಹನ ಸಂಚಾರಕ್ಕೆ ಅವಕಾಶ ಮಾಡಿಸಿಕೊಡುವುದಾಗಿ ಹೇಳಿರುವುದು ಪರಿಸರ ವಿರೋಧಿ ನೀತಿ. ರಾಹುಲ್‌ ಗಾಂಧಿಯವರು
ಹೇಳಿರುವಂತೆಯೇ ರಾಜ್ಯ ಸರ್ಕಾರ ಬಂಡಿಪುರ ರಾಷ್ಟ್ರೀಯ ಉದ್ಯಾನವನ ಮಾರ್ಗದಲ್ಲಿ ರಾತ್ರಿ ವೇಳೆಯೂ ವಾಹನ ಸಂಚಾರಕ್ಕೆ ಅವಕಾಶ
ಮಾಡಿಕೊಡುತ್ತದೆಯೋ ಇಲ್ಲವೋ ಎಂಬುದನ್ನ ಕೂಡಲೇ ಸ್ಪಷ್ಟಪಡಿಸಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ಎಸ್‌. ಸುರೇಶ್‌ಕುಮಾರ್‌ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next