Advertisement

ದೇವನಗರಿಯಲ್ಲಿ ಮತೋತ್ಸಾಹ

10:58 AM Apr 24, 2019 | Team Udayavani |

ದಾವಣಗೆರೆ: ವಿದ್ಯುನ್ಮಾನ ಮತಯಂತ್ರ, ವಿವಿ ಪ್ಯಾಟ್‌ಗಳಲ್ಲಿನ ತಾಂತ್ರಿಕದೋಷ…, ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ ಹಿನ್ನೆಲೆ ಅಧಿಕಾರಿಗಳೊಂದಿಗೆ ವಾಗ್ವಾದ.., ಮತಗಟ್ಟೆ ಬಳಿ ಭಾವಚಿತ್ರ ಇರುವ ಕರಪತ್ರ ಹಂಚಿಕೆ ಸಂಬಂಧ ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ…, ಅವಧಿ ಮುಗಿದ ನಂತರವೂ ಮುಂದುವರೆದ ಮತದಾನ…,

Advertisement

ಇವು ಮಂಗಳವಾರ ನಡೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ದಾವಣಗೆರೆ ನಗರದಲ್ಲಿ ಕಂಡು ಬಂದ ಚಿತ್ರಣ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿರಮಗೊಂಡನಹಳ್ಳಿಯ ಸರ್ಕಾರಿ ಪ್ರೌಢಶಾಲೆ ಮತಗಟ್ಟೆ 179ರಲ್ಲಿ ಸಖೀ ಮಹಿಳಾ ಸ್ನೇಹಿ ಮತದಾನ ಕೇಂದ್ರದಲ್ಲಿನ ವಿದ್ಯುನ್ಮಾನ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತಗೊಂಡಿತ್ತು. ಅಧಿಕಾರಿಗಳು ದುರಸ್ತಿಗೆ ಹರಸಾಹಸಪಟ್ಟರು. ಅಂತಿಮವಾಗಿ ಬೇರೆ ವಿದ್ಯುನ್ಮಾನ ಮತಯಂತ್ರ ಅಳವಡಿಸುವ ಮೂಲಕ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲೂರ್ಡ್ಸ್‌ ಬಾಯ್ಸ ಶಾಲೆಯ ಮತಗಟ್ಟೆ 86 ಮತ್ತು 96, ನಿಟುವಳ್ಳಿಯ ಆದರ್ಶ ಪ್ರೌಢಶಾಲೆಯ ಮತಗಟ್ಟೆ ಸಂಖ್ಯೆ 142, ಲೇಬರ್‌ ಕಾಲೋನಿಯ ಮತಗಟ್ಟೆ ಸಂಖ್ಯೆ 114, ಅಂಜುಂ ಶಾಲೆಯ ಮತಗಟ್ಟೆ ಸಂಖ್ಯೆ 117 ರಲ್ಲಿ ವಿದ್ಯುನ್ಮಾನ ಮತಯಂತ್ರಗಳಲ್ಲಿ ಕಂಡು ಬಂದ ದೋಷದ ಹಿನ್ನೆಲೆಯಲ್ಲಿ ಮತದಾನ ಸ್ಥಗಿತಗೊಂಡಿತ್ತು. ದುರಸ್ತಿ ನಂತರ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಜಾವುಲ್ಲಾ ಮುಸ್ತಫಾ ನಗರದ ಮತಗಟ್ಟೆ ಸಂಖ್ಯೆ 25 ರಲ್ಲಿ 43 ಜನರು ಮತ ಹಾಕಿದ ನಂತರ ವಿವಿ ಪ್ಯಾಟ್‌ನಲ್ಲಿ ತಾಂತ್ರಿಕ ತೊಂದರೆ ಕಂಡು ಬಂದಿತು. ಅಧಿಕಾರಿಗಳು, ಸಿಬ್ಬಂದಿ ದುರಸ್ತಿಗೆ ಸಾಕಷ್ಟು ಯತ್ನಿಸಿದರು. ಆದರೆ, ಸಾಧ್ಯವಾಗಲಿಲ್ಲ. ಅಂತಿಮವಾಗಿ ಮಹಾನಗರ ಪಾಲಿಕೆಯಿಂದ ಮತ್ತೂಂದು ವಿವಿ ಪ್ಯಾಟ್ ತಂದು, ಅಳವಡಿಸಿ, ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.

Advertisement

ವಿವಿ ಪ್ಯಾಟ್‌ನ ತಾಂತ್ರಿಕ ತೊಂದರೆಯಿಂದ 1 ಗಂಟೆಗೂ ಅಧಿಕ ಕಾಲ ಮತದಾನ ನಡೆಯದೇ ಇದ್ದ ಕಾರಣಕ್ಕೆ ಮತದಾನಕ್ಕೆ ಬಂದವರು ವಾಪಸ್ಸಾದರು. ಸಂಜೆ ವೇಳೆಗೆ ಮತದಾನಕ್ಕೆ ನೂರಾರು ಸಂಖ್ಯೆಯಲ್ಲಿನ ಮತದಾರರು ಆಗಮಿಸಿದ ಹಿನ್ನೆಲೆಯಲ್ಲಿ ಸಂಜೆ 6 ಗಂಟೆಗೆ ಮತದಾನ ಅವಧಿ ಮುಗಿದ ನಂತರವೂ 1 ಗಂಟೆ ಮತದಾನ ಅವಧಿ ವಿಸ್ತರಣೆ ಮಾಡಲಾಯಿತು. ಸಂಜೆ 6 ಗಂಟೆಗೆ 1,332 ಮತಗಳಲ್ಲಿ 715 ಮತ ಚಲಾವಣೆಗೊಂಡಿದ್ದವು. ನೂರಾರು ಜನರು ಸರತಿ ಸಾಲಲ್ಲಿ ನಿಂತಿದ್ದರು. ಹಾಗಾಗಿ 7 ಗಂಟೆ ನಂತರವೂ ಮತದಾನ ನಡೆಯಿತು.

ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದರಾಮೇಶ್ವರ ಶಾಲೆ ಮತಗಟ್ಟೆ ಸಂಖ್ಯೆ 90 ರಲ್ಲಿ ಮತದಾನ ಅವಧಿ ಮುಗಿದ ನಂತರವೂ ಸರತಿ ಸಾಲಲ್ಲಿ ನಿಂತಿದ್ದರಿಂದ 10-15 ನಿಮಿಷಗಳ ಕಾಲ ಮತದಾನ ಮುಂದುವರೆಯಿತು.

Advertisement

Udayavani is now on Telegram. Click here to join our channel and stay updated with the latest news.

Next