ದಾವಣಗೆರೆ: ಈ ಹಿಂದೆ ಕೇಳಿದ್ದು ವಿಧಾನಸಭಾ ಚುನಾವಣಾ ಟಿಕೆಟ್. ಆದರೆ, ಈಗ ಸಿಕ್ಕಿದ್ದು ಲೋಕಸಭಾ ಚುನಾವಣೆಯ ಬಿ ಫಾರಂ!
ಇದು, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲಿರುವ ಎಚ್.ಬಿ. ಮಂಜಪ್ಪಗೆ ಒಲಿದು ಬಂದ ಅದೃಷ್ಟ.
ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಹೊನ್ನಾಳಿಯ ಎಚ್.ಬಿ. ಮಂಜಪ್ಪ ಈ ಬಾರಿ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಹುರಿಯಾಳಾಗಲಿದ್ದಾರೆ. ಕ್ಷೇತ್ರದ ಪರ್ಯಾಯ ಅಭ್ಯರ್ಥಿ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಚುನಾವಣಾ ವೇಳಾಪಟ್ಟಿ ನಂತರ ನಡೆದ ಟಿಕೆಟ್ ಪ್ರಹಸನಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಂಗಳವಾರ ರಾತ್ರಿ ಎಚ್.ಬಿ.ಮಂಜಪ್ಪರ ಹೆಸರು ಪ್ರಕಟಿಸುವ ಮೂಲಕ ಅಂತ್ಯ ಹಾಡಿದೆ.
ಕ್ಷೇತ್ರದಲ್ಲಿ ಈವರೆಗೆ ನಡೆದಿರುವ 11 ಚುನಾವಣೆಗಳಲ್ಲಿ 6 ಬಾರಿ ಕಾಂಗ್ರೆಸ್, 5 ಬಾರಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಹಾಗೆ ನೋಡಿದರೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ 1996ರಲ್ಲಿ ಬಿಜೆಪಿಯ ವಿಜಯ ಪತಾಕೆ ಹಾರಿಸಿದ್ದೇ ಭೀಮಸಮುದ್ರದ ಜಿ.ಮಲ್ಲಿಕಾರ್ಜುನಪ್ಪನವರು. ಅಲ್ಲಿಂದ ಕ್ಷೇತ್ರದಲ್ಲಿ ಆರಂಭವಾದ ಕುಟುಂಬ ರಾಜಕಾರಣ 2014ರ ಸಾರ್ವತ್ರಿಕ ಚುನಾವಣೆವರೆಗೂ ನಡೆಯಿತು. ಜಿ.ಮಲ್ಲಿಕಾರ್ಜುನಪ್ಪ ಅವರ ನಿಧನದ ನಂತರ ಅವರ ಪುತ್ರ ಜಿ.ಎಂ.ಸಿದ್ದೇಶ್ವರ್ 2004ರಲ್ಲಿ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಗೆದ್ದು ಪ್ರಥಮ ಬಾರಿಗೆ ಲೋಕಸಭೆ ಪ್ರವೇಶಿಸಿದರು. 2009 ಹಾಗೂ 2014ರ ಚುನಾವಣೆಗಳಲ್ಲೂ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಜಯ ಗಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆಗೈದ ಅವರಿಗೆ, ಈ ಬಾರಿಯ ಚುನಾವಣೆಯಲ್ಲೂ ಎಸ್.ಎಸ್.ಮಲ್ಲಿಕಾರ್ಜುನ್ ಎದುರಾಳಿ ಆಗಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಇದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳ ಒತ್ತಾಸೆಯೂ ಆಗಿತ್ತು. ಆದರೆ, ಈ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಮೊದಲಿನಿಂದಲೂ ನಿರಾಸಕ್ತಿ ಹೊಂದಿದ್ದ ಮಲ್ಲಿಕಾರ್ಜುನ್ ಆಕಾಂಕ್ಷಿಗಳ ರೇಸ್‌ನಿಂದಲೇ ದೂರವಿದ್ದರು. ಆದರೂ ಕೈ ಪಡೆ ಅವರನ್ನೇ ಕಣಕ್ಕಿಳಿಸಲು ನಿರ್ಧರಿಸಿ ಕೆಲವಡೆ ಪ್ರಚಾರದ ಸಭೆ ಕೂಡ ನಡೆಸಿತ್ತು.
ಈ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಹುರಿಯಾಳಾಗಲು ಸಮ್ಮತಿಸದ ಕಾರಣ ಅವರ ತಂದೆ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರಿಗೆ ಹೈಕಮಾಂಡ್ ಟಿಕೆಟ್ ಪ್ರಕಟಿಸಿತು. ಆದರೆ, ಅವರೂ ಸ್ಪರ್ಧೆಗೆ ನಿರಾಕರಿಸಿದ್ದರಿಂದ ಪರ್ಯಾಯ ಅಭ್ಯರ್ಥಿ ಆಯ್ಕೆಗೆ ವರಿಷ್ಠರು ಕಾರ್ಯೋನ್ಮುಖರಾದರು. ಆ ನಿಟ್ಟಿನಲ್ಲಿ ಜಿಪಂ ಪಕ್ಷೇತರ ಸದಸ್ಯ ತೇಜಸ್ವಿ ವಿ.ಪಟೇಲ್‌ರನ್ನು ಬೆಂಗಳೂರಿಗೆ ಕರೆಯಿಸಿಕೊಂಡ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೊಂದಿಗೆ ಮಾತುಕತೆಯನ್ನೂ ನಡೆಸಿದ್ದರು.
ಈ ಮಧ್ಯೆ ಎಸ್.ಎಸ್.ಮಲ್ಲಿಕಾರ್ಜುನ್ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪರೊಂದಿಗೆ ಬೆಂಗಳೂರಿಗೆ ತೆರಳಿ, ವರಿಷ್ಠರಿಗೆ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದರಲ್ಲದೆ, ಅವರಿಗೇ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು. ಹಾಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ಹೊಂದಿದ್ದ ತೇಜಸ್ವಿ ಪಟೇಲ್ ಅಭ್ಯರ್ಥಿಯಾಗಲಿದ್ದಾರೋ, ಇಲ್ಲವೇ ಶಾಮನೂರು ಬೆಂಬಲಿತ ಎಚ್.ಬಿ.ಮಂಜಪ್ಪಗೆ ಬಿ ಫಾರಂ ಸಿಗಲಿದೆಯೋ ಎಂಬ ಕುತೂಹಲಕ್ಕೆ ಅಂತ್ಯ ಹಾಡಿರುವ ಹೈಕಮಾಂಡ್, ಎಚ್.ಪಿ.ಮಂಜಪ್ಪರನ್ನೇ ಕಣಕ್ಕಿಳಿಸಲು ನಿರ್ಧರಿಸಿದೆ. ಹಾಗಾಗಿ ಹ್ಯಾಟ್ರಿಕ್ ಗೆಲುವಿನ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್‌ಗೆ ಎಚ್.ಬಿ.ಮಂಜಪ್ಪ ಎದುರಾಳಿ.
– ಎನ್.ಆರ್.ನಟರಾಜ್