Advertisement

ಪಂಚಪೀಠಗಳಲ್ಲಿ ಏಕತೆ ಭಾವ ಮೂಡುವವರೆಗೂ ತಟಸ್ಥ ನೀತಿ

03:43 PM Jan 23, 2021 | Team Udayavani |

ಕಲಬುರಗಿ: ಪಂಚಪೀಠಗಳಲ್ಲಿ ಏಕತೆ ಮೂಡುವವರೆಗೂ ತಟಸ್ಥ ನೀತಿ ಅನುಸರಿಸಲು ವೀರಶೈವ ಶಿವಾಚಾರ್ಯರು ಮಹತ್ವದ ನಿರ್ಣಯ ಕೈಗೊಂಡಿದ್ದಾರೆ. ಪಂಚಪೀಠಗಳ ಜಗದ್ಗುರುಗಳಲ್ಲಿ ಏಕತೆ ಮೂಡುವವರೆಗೆ ಶಾಖಾ ಮಠಗಳ ಶಿವಾಚಾರ್ಯರು ಕಡ್ಡಾಯವಾಗಿ ಪಂಚಪೀಠಗಳು ಹಾಗೂ ಜಗದ್ಗುರುಗಳೊಂದಿಗೆ ತಟಸ್ಥ ನೀತಿ ಅನುಸರಿಸಬೇಕು ಎಂದು ನಗರದಲ್ಲಿ ಶುಕ್ರವಾರ ನಡೆದ ಅಖೀಲ ಭಾರತ ವೀರಶೈವ ಶಿವಾಚಾರ್ಯರ ಸಮಾಲೋಚನಾ ಸಭೆ ನಿರ್ಧರಿಸಿದ್ದು, 300ಕ್ಕೂ ಅಧಿಕ ಶಾಖಾ ಮಠಗಳ ಶಿವಾಚಾರ್ಯರು ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದರು ಎಂದು ಕಲಬುರಗಿ ಜಿಲ್ಲೆಯ ಪಾಳಾ ಮಠದ ಡಾ| ಗುರುಮೂರ್ತಿ ಶಿವಾಚಾರ್ಯರು ಸಭೆಯ ಬಳಿಕ ತಿಳಿಸಿದರು.

Advertisement

ಈಗಾಗಲೇ ಉಜ್ಜಯಿನಿ, ಶ್ರೀಶೈಲ, ಕಾಶಿ ಪೀಠಗಳ ಜಗದ್ಗುರುಗಳು ಏಕತೆಗೆ ಸಮ್ಮತಿ ಸೂಚಿಸಿದ್ದಾರೆ. ರಂಭಾಪುರಿ ಹಾಗೂ ಕೇದಾರ ಪೀಠಗಳವರು ತಮ್ಮ ಮಧ್ಯದಲ್ಲಿ ಭಿನ್ನಾಭಿಪ್ರಾಯ ಮರೆತು ಒಂದಾಗಬೇಕೆಂದು ಸಭೆ ಬಯಸಿದೆ. ಮುಖ್ಯವಾಗಿ ಶಿವಾಚಾರ್ಯರಿಗೆ ಮತ್ತು ಅವರ ಮಠಗಳಿಗೆ ಶಿವಾಚಾರ್ಯರ ಬಂಧು ಬಳಗ, ಅನ್ಯ ಸಮುದಾಯದವರು, ಸಹವರ್ತಿಗಳು ತೊಂದರೆ ನೀಡುತ್ತಿದ್ದರೆ ವೀರಶೈವ ಶಿವಾಚಾರ್ಯ ಸಂಸ್ಥೆ ಮಧ್ಯಪ್ರವೇಶಿಸಬೇಕು. ಬೆಂಗಳೂರು ವಿಭೂತಿಪುರ ಮಠದಲ್ಲಿ ಸನಾತನ ಪರಂಪರೆ ಮತ್ತು ಆಧುನಿಕ ಶಿಕ್ಷಣಗಳನ್ನೊಳಗೊಂಡ ಗುರುಕುಲ ಸ್ಥಾಪಿಸಿ ಅದಕ್ಕೆ ವೀರಶೈವ ಗುರುಕುಲ ಎಂದು ನಾಮಕರಣ ಮಾಡಬೇಕು. ಒಳಪಂಗಡಗಳ ಜತೆಗೆ ಸಂಯಮದಿಂದ ವರ್ತಿಸುವುದು, ವೀರಶೈವ ಮಹಾಸಭೆ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧವಾಗಿರುವುದು ಸೇರಿದಂತೆ ಎಂಟು ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ : ಕಾಂಗ್ರೇಸ್ ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಸಿಎಂ ಸ್ಪರ್ಧೆ : ಈಶ್ವರಪ್ಪ ವ್ಯಂಗ್ಯ

ಸಮಾಜಮುಖೀ ಮಠಗಳಿಗೆ ನೆರವು:ಶಿವಾಚಾರ್ಯರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಬಡ ಮಕ್ಕಳು ಹಾಗೂ ಭಕ್ತರಿಗೆ ವಿದ್ಯಾದಾನ, ಅನ್ನದಾನ ಮಾಡುವ ರಾಜ್ಯದ ಸಮಾಜಮುಖೀ ಮಠಗಳಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜಾತಿ,ಮತ ಪರಿಗಣಿಸದೇ ಅಗತ್ಯ ನೆರವು ನೀಡಿದ್ದು, ಈ ಕಾರ್ಯ ಮುಂದುವರಿಯಲಿದೆ. ಸರ್ಕಾರದ ಸಮಾಜಮುಖೀ ಕಾರ್ಯಗಳನ್ನು ರಾಜ್ಯದ ಮಠಗಳುಮಾಡುತ್ತಿವೆ. ಆದ್ದರಿಂದ ರಾಜ್ಯದ ಮತದಾರರ ಬೆಂಬಲದ ಜೊತೆಗೆ ಹರ ಗುರು ಚರಮೂರ್ತಿಗಳ ಆಶೀರ್ವಾದದಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ನಾಡಿನ ಮಠಾಧೀಶರು ಯಡಿಯೂರಪ್ಪ ಅವರೊಂದಿಗೆ ನಿಂತಿದ್ದರಿಂದಲೇ ರಾಜ್ಯದ ಬಡವರ ಕಣ್ಣೀರು ಒರೆಸಲು ಸಾಧ್ಯವಾಗಿದೆ ಎಂದರು.

ಅಖೀಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಗೌರವ ಅಧ್ಯಕ್ಷರಾದ ಕಡಗಂಚಿ ಮಠದ ವೀರಭದ್ರ ಶಿವಾಚಾರ್ಯರು, ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಅಧ್ಯಕ್ಷರಾದ ಸಿಂದಗಿ ಡಾ| ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ, ಶಖಾಪುರದ ಡಾ| ಸಿದ್ದರಾಮ ಶಿವಾಚಾರ್ಯರು, ಕಡಕೋಳದ ಡಾ| ರುದ್ರಮುನಿ ಶಿವಾಚಾರ್ಯರು, ಸೂಗುರಿನ ಡಾ|ಚೆನ್ನರುದ್ರಮುನಿ ಶಿವಾಚಾರ್ಯರು, ಶಖಾಪುರ ಮಠದ ಸಿದ್ದರಾಮ ಶಿವಾಚಾರ್ಯರು, ಕಡಕೋಳದ ರುದ್ರಮುನಿ ಶಿವಾಚಾರ್ಯರು, ಕುಪುರ ಏತೇಶ್ವರ ಶಿವಾಚಾರ್ಯರು, ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯರು, ಮಾಗಣಗೇರಿ ವಿಶ್ವರಾಧ್ಯ ಶಿವಾಚಾರ್ಯರು, ಹೊಟಗಿ ಮಲ್ಲಿಕಾರ್ಜುನಶಿವಾಚಾರ್ಯರು, ಸೊಲ್ಲಾಪುರದ ಬ್ರಹ್ಮನಮಡು ಶ್ರೀಗಳು, ಚಿಟಗುಪ್ಪ ಶ್ರೀಗಳು ಇದ್ದರು. ಮುಂದಿನ ಸಭೆ ಮಾ.5ರಂದು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಶಿವಾಪುರದಲ್ಲಿ ನಡೆಯಲಿದೆ ಎಂದು ಸಮಾವೇಶದಲ್ಲಿ ತಿಳಿಸಲಾಯಿತು.

Advertisement

ಇದನ್ನೂ ಓದಿ : ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿಯಾಗಿ ಪ್ರೊ| ದಯಾನಂದ ಅಗಸರ ನೇಮಕ

Advertisement

Udayavani is now on Telegram. Click here to join our channel and stay updated with the latest news.

Next