ದಾವಣಗೆರೆ: ಕರ್ನಾಟಕದಲ್ಲಿ ಪ್ರವಾಹ ಬಂದು ಒಂದು ತಿಂಗಳು ಕಳೆದರೂ ನೆರೆ ಸಂತ್ರಸ್ತರ ನೆರವಿಗೆ ಕೇಂದ್ರ ಸರ್ಕಾರ ಬಂದಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಸಮಿತಿ ಇಲ್ಲಿನ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿತು.
ಪ್ರಧಾನಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರನ್ನು ಸಂತೈಸಲಿಲ್ಲ. ಕನಿಷ್ಠ ಪಕ್ಷ ಅಧಿಕಾರಿಗಳಿಂದ ಮಾಹಿತಿ ಕೂಡ ಪಡೆಯಲಿಲ್ಲ. ಬಂದ ಪುಟ್ಟ, ಹೋದ ಪುಟ್ಟ ಎಂದು ಇಸ್ರೋಗೆ ಬಂದು ಹೋದರು ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಟೀಕಿಸಿದರು.
ಪ್ರವಾಹದಿಂದಾಗಿ ಲಕ್ಷಾಂತರ ಮಂದಿ ಬೀದಿಗೆ ಬಿದ್ದಿದ್ದಾರೆ. ರಸ್ತೆ ಬದಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಅವರಿಗೆ ಮೂಲ ಸೌಕರ್ಯ ಕಲ್ಪಿಸುತ್ತಿಲ್ಲ. ಯಡಿಯೂರಪ್ಪ ಅಧಿಕಾರದ ಆಸೆಗಾಗಿ ಸುಭದ್ರ ಸರ್ಕಾರವನ್ನು ಬೀಳಿಸಿದರು. ಈಗ ವರ್ಗಾವಣೆಗಳ ಮೂಲಕ ದುಡ್ಡು ಮಾಡುವುದರಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದರು.
ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ರಾಜ್ಯದಲ್ಲಿ ಪ್ರವಾಹ ಬಂದಿತ್ತು. ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ವೀಕ್ಷಣೆ ಮಾಡಿದ್ದ ಸಿಂಗ್ ಅವರು ಅಂದು ಕೂಡಲೇ ಹಣ ಬಿಡುಗಡೆ ಮಾಡಿದ್ದರು. ‘ಸಬ್ ಕಾ ವಿಕಾಸ್’ ಎಂದು ಹೇಳಿಕೊಂಡು ಬಂದ ನರೇಂದ್ರ ಮೋದಿ ಅವರು ಪ್ರತಿಷ್ಠೆ, ಮೋಜು ಮಸ್ತಿಗಾಗಿ ರಷ್ಯಾಕ್ಕೆ ಸಾಲ ಕೊಡುತ್ತಾರೆ. ಆದರೆ ಇಲ್ಲಿನ ಸಂತ್ರಸ್ತರಿಗೆ ನೀಡುತ್ತಿಲ್ಲ ಎಂದು ಕಿಡಿಕಾರಿದರು.
ವರ್ಷಕ್ಕೆ 3 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಅಧಿಕಾರಕ್ಕೆ ನರೇಂದ್ರಮೋದಿ ಬಂದರು. ಈಗ ಉದ್ಯೋಗ ಸೃಷ್ಟಿ ಇರಲಿ, ಇರುವ ಉದ್ಯೋಗವನ್ನೇ ಉಳಿಸಿಕೊಳ್ಳುವುದು ಜನರಿಗೆ ಸವಾಲಾಗಿದೆ. 8.7 ಇದ್ದ ಜಿಡಿಪಿ ಈಗ 5ರ ಕೆಳಗೆ ಇಳಿದಿದೆ ಎಂದರು. ನೆರೆ ಸಂತ್ರಸ್ತರ ನೆರವಿಗೆ ಬಾರದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಮತ್ತು ಮುಂಬರುವ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.