ದಾವಣಗೆರೆ: ದಾವಣಗೆರೆ ಮಹಾನಗರಪಾಲಿಕೆಯ 45 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 40 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ನಗರಪಾಲಿಕೆ ಅಭ್ಯರ್ಥಿಗಳ ಆಯ್ಕೆ ಸಮಿತಿ ಸದಸ್ಯ, ಮಾಜಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಎಸ್.ಎಸ್. ಮಲ್ಲಿಕಾರ್ಜುನ್ ಜನಸಂಪರ್ಕ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಉತ್ತರದಲ್ಲಿ 25, ದಕ್ಷಿಣದಲ್ಲಿ 20 ವಾರ್ಡ್ ಸೇರಿ 45 ವಾರ್ಡ್‌ನಲ್ಲಿ ಕಾಂಗ್ರೆಸ್ 40 ವಾರ್ಡ್‌ಗಳಲ್ಲಿ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.
ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಆಡಳಿತದಲ್ಲಿ ದಾವಣಗೆರೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆದಿವೆ. 1977- 78 ರಲ್ಲಿ ನಾನು ಇಲ್ಲಿ ವಿದ್ಯಾರ್ಥಿಯಾಗಿದ್ದಾಗ ಇದ್ದಂತಹ ದಾವಣಗೆರೆಗೂ ಈಗಿನ ದಾವಣಗೆರೆಗೆ ಹೋಲಿಕೆ ಮಾಡಿದರೆ ಒಳ್ಳೆಯ ಕಾಂಕ್ರಿಟ್ ರಸ್ತೆ, ಅತ್ಯಾಧುನಿಕ ಬೀದಿದಿಪ, ಅನೇಕ ಮೂಲಭೂತ ಸೌಲಭ್ಯದ ಕೆಲಸ ಆಗಿವೆ ಎಂದು ತಿಳಿಸಿದರು.
ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ದಾವಣಗೆರೆಯ ಸರ್ವತೋಮುಖ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಇಬ್ಬರು ಸಾಕಷ್ಟು ಅನುದಾನ ತಂದು ದಾವಣಗೆರೆಯನ್ನು ಅಭಿವೃದ್ಧಿಯಲ್ಲಿ ಇಡೀ ರಾಜ್ಯಕ್ಕೆ ಮಾದರಿ ನಗರವನ್ನಾಗಿ ಮಾಡಿದ್ದಾರೆ ಎಂದು ತಿಳಿಸಿದರು.
ದಾವಣಗೆರೆಯ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿರುವಂತಹ ಎಸ್.ಎಸ್. ಮಲ್ಲಿಕಾರ್ಜುನ್ ಅವರು ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದು ಒಂದು ಕೆಟ್ಟ ಗಳಿಗೆ. ಅವರು ಮಾಡಿರುವಂತಹ ಅಭಿವೃದ್ಧಿ ಕೆಲಸ ನೋಡಿದರೆ ವಿರೋಧ ಪಕ್ಷಗಳಿಗೆ ಠೇವಣಿಯೂ ದೊರೆಯದಂತೆ ಜನರು ಆಶೀರ್ವಾದ ಮಾಡಬೇಕಿತ್ತು. ನ.12 ರಂದು ನಡೆಯುವ ಮಹಾನಗರಪಾಲಿಕೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಗೆ ಆಶೀರ್ವದಿಸುವರು ಎಂಬ ವಿಶ್ವಾಸ ಇದೆ ಎಂದರು.
ದಾವಣಗೆರೆಯ ಮಹಾನ್ ಜನರು ಅಭಿವೃದ್ಧಿಯ ಪರವಾಗಿ, ಶಾಂತಿ, ಸುವ್ಯವಸ್ಥೆ, ಒಳ್ಳೆಯ ವಾತಾವರಣಕ್ಕೆ ಕಾಂಗ್ರೆಸ್‌ನ್ನು ಬೆಂಬಲಿಸಬೇಕು. ದಾವಣಗೆರೆಯ ಅಭಿವೃದ್ದಿ ದೃಷ್ಟಿಯಿಂದ ಶಾಸಕ ಶಾಮನೂರು ಶಿವಶಂಕರಪ್ಪ. ಎಸ್.ಎಸ್.ಮಲ್ಲಿಕಾರ್ಜುನ್ ಅವರ ಕೈ ಬಲಪಡಿಸಬೇಕು. ಅವರಿಬ್ಬರು ಮಾಡಿರುವ ಕೆಲಸದಿಂದ ದಾವಣಗೆರೆಗೆ ಸ್ಮಾರ್ಟ್‌ಸಿಟಿ ಯೋಜನೆ ಬಂದಿರುವುದು. ದಾವಣಗೆರೆಯ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಶಾಮನೂರು ಶಿವಶಂಕರಪ್ಪ. ಎಸ್.ಎಸ್. ಮಲ್ಲಿಕಾರ್ಜುನ್, ತಾವು ಎಲ್ಲರೂ ಚರ್ಚಿಸಿ 2-3 ದಿನಗಳಲ್ಲಿ ಸಭೆ ನಡೆಸಿ ನಗರಪಾಲಿಕೆ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ದಿನೇಶ್ ಕೆ.
ಶೆಟ್ಟಿ, ಡಿ.ಎನ್. ಜಗದೀಶ್, ನಗರಸಭೆ ಮಾಜಿ ಉಪಾಧ್ಯಕ್ಷ ಎ. ನಾಗರಾಜ್, ಡಾ| ಎಚ್.ಬಿ. ಅರವಿಂದ್ ಇತರರು ಇದ್ದರು.