ದಾವಣಗೆರೆ: ಜಿಲ್ಲೆಯಿಂದ ವಿದೇಶ ಪ್ರವಾಸ ಕೈಗೊಂಡ ಪ್ರವಾಸಿಗರನ್ನು ಆರೋಗ್ಯ ಇಲಾಖೆ ನಿರ್ದೇಶನದಂತೆ ಮಂಗಳವಾರ ಚೀಗಟೇರಿ ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಲಾಯಿತು.
ಹಾಂಕಾಂಗ್, ಸಿಂಗಾಪೂರ್, ಥೈಲ್ಯಾಂಡ್, ಮಲೇಶಿಯಾ, ಜಪಾನ್, ಕೊರಿಯಾ, ವಿಯೆಟ್ನಾಂ, ಇಂಡೋನೇಶಿಯಾ, ನೇಪಾಳ, ಇಟಲಿ, ಇರಾನ್, ಯು.ಎ.ಇ. ಸೇರಿದಂತೆ ಒಟ್ಟು 12 ದೇಶಗಳಿಗೆ ಪ್ರವಾಸ ಕೈಗೊಂಡಿದ್ದ 14 ಜನ ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸಲಾಗಿದೆ.
ವಿದೇಶಿ ಪ್ರವಾಸ ಕೈಗೊಂಡಿದ್ದ ಪ್ರವಾಸಿಗರ ಪಟ್ಟಿಯನ್ನಾಧರಿಸಿ ಅವರ ಮನೆಗಳಿಗೆ ಭೇಟಿ ನೀಡಿ, ಕೊರೊನಾ ಸೋಂಕಿನ ತಪಾಸಣೆಗೆ ಒಳಪಡಿಸಲಾಗಿದ್ದು, ಪ್ರಯಾಣಿಕರನ್ನು 14 ದಿನಗಳ ಕಾಲ ಮನೆಯೊಳಗೇ ಇರಿಸಿ ತೀವ್ರ ನಿಗಾ ವಹಿಸಲಾಗುತ್ತಿದೆ. ತಪಾಸಣೆಗೊಳಪಟ್ಟ ಯಾವುದೇ ವ್ಯಕ್ತಿಯಲ್ಲೂ ಸೋಂಕು ಕಂಡುಬಂದಿಲ್ಲ.
ಜಿಲ್ಲಾದ್ಯಂತ ಎಲ್ಲಾ ವೈದ್ಯರು, ಸಿಬ್ಬಂದಿಗೆ ಕೊರೊನಾ ಸೋಂಕಿನ ಬಗ್ಗೆ ಮಾಹಿತಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಚಿಗಟೇರಿ ಜಿಲ್ಲಾ ಆಸ್ಪತ್ರೆ, ಬಾಪೂಜಿ ಆಸ್ಪತ್ರೆ ಮತ್ತು ಎಸ್. ಎಸ್.ಐ.ಎಂ ಮತ್ತು ಆರ್.ಸಿ ಆಸ್ಪತ್ರೆಗಳಲ್ಲಿ ತಲಾ 5 ಬೆಡ್‌ಗಳನ್ನು ಪ್ರತ್ಯೇಕವಾಗಿ ಕಾಯ್ದಿರಿಸಲಾಗಿದೆ. ಅಲ್ಲದೆ ತಜ್ಞರನ್ನು ಸಹ ನೇಮಿಸಲಾಗಿದೆ.ಪ್ರತಿ ತಿಂಗಳು ವಿದೇಶ ಪ್ರವಾಸಿಗರನ್ನು ತಪಾಸಣೆ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ| ಎಚ್. ಎಸ್. ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಜಿ.ಡಿ. ರಾಘವನ್ ಮತ್ತು ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ|ಕೆ.ಎಚ್ ಯತೀಶ್ ಇದ್ದರು.