Advertisement

ಗದ್ದುಗೆ ಗುದ್ದಾಟದಲ್ಲಿ ಯಾರಿಗೆ ಜಯದ ಹಾರ?

02:43 PM Feb 08, 2021 | Team Udayavani |

ದಾವಣಗೆರೆ: ಮಹಾನಗರ ಪಾಲಿಕೆ ಮೇಯರ್‌-ಉಪ ಮೇಯರ್‌ ಚುನಾವಣೆ ಫೆ. 24 ರಂದು ನಡೆಯಲಿದ್ದು,
ಕುತೂಹಲಕ್ಕೆ ಕಾರಣವಾಗಿದೆ.
ಮಹಾನಗರ ಪಾಲಿಕೆ ಮೇಯರ್‌- ಉಪ ಮೇಯರ್‌ ಯಾರಾಗಬಹುದು ಎಂಬುದಕ್ಕಿಂತಲೂ ಮೇಯರ್‌-ಉಪ ಮೇಯರ್‌ ಸ್ಥಾನ ಆಡಳಿತಾರೂಢ ಬಿಜೆಪಿಗೆ ಇಲ್ಲವೇ ಪ್ರತಿ ಪಕ್ಷ ಕಾಂಗ್ರೆಸ್‌ಗೆ ದೊರೆಯುವುದೇ ಎಂಬ ಕೌತುಕದ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಕಾರಣ ಮತದಾರರ ಪಟ್ಟಿಯಲ್ಲಿ ವಿಧಾನ ಪರಿಷತ್‌ ಸದಸ್ಯರ ಹೆಸರು ಸೇರ್ಪಡೆ ವಿಷಯವಾಗಿ ಬಿಜೆಪಿ, ಕಾಂಗ್ರೆಸ್‌ ಅನುಸರಿಸುತ್ತಿರುವ ರಾಜಕೀಯ ನಡೆ.

Advertisement

ಮೇಯರ್‌- ಉಪ ಮೇಯರ್‌ ಪಟ್ಟಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ಜಿದ್ದಾಜಿದ್ದಿ ನಡೆಸುತ್ತಿವೆ. ಕಳೆದ ಬಾರಿ ಚುನಾವಣಾ ಸಂದರ್ಭದಲ್ಲಿ ಬಿಜೆಪಿ
ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ 7 ಜನ ವಿಧಾನ ಪರಿಷತ್‌ ಸದಸ್ಯರ ಹೆಸರು ಸೇರಿಸಿರುವ ಜೊತೆಗೆ ಈಗ ಸಚಿವ ಆರ್‌. ಶಂಕರ್‌, ವಿಧಾನ ಪರಿಷತ್‌ ಸದಸ್ಯ ಚಿದಾನಂದ ಗೌಡರ ಹೆಸರು ಸೇರಿಸಿದೆ ಎಂಬುದು ಕಾಂಗ್ರೆಸ್‌ನ ಪ್ರಬಲ ಆರೋಪ.

ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರು ಸೇರಿಸುವ ಮಾತೇ ಇಲ್ಲ. ಪರಿಷತ್‌ ಸದಸ್ಯರು ಅಧಿಕೃತ ಹಾಗೂ ಸಂವಿಧಾನತ್ಮಕವಾಗಿಯೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಂಡಿದ್ದಾರೆ. ಮತದಾರರ ಪಟ್ಟಿಯಲ್ಲಿ ಪರಿಷತ್‌ ಸದಸ್ಯರ ಹೆಸರು ಸೇರ್ಪಡೆ ಚುನಾವಣಾಧಿಕಾರಿಗಳಿಗೆ ಸಂಬಂಧಿತ ವಿಷಯ ಎನ್ನುವುದು ಬಿಜೆಪಿ ವಾದ. ಮೇಯರ್‌- ಉಪ ಮೇಯರ್‌ ಚುನಾವಣಾ ಮತದಾರರ ಪಟ್ಟಿಯಲ್ಲಿ ವಿಧಾನ ಪರಿಷತ್‌ ಸದಸ್ಯರ ಹೆಸರು ಸೇರ್ಪಡೆ ವಿಷಯವಾಗಿ ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸಿದೆ. ಮಾತ್ರವಲ್ಲ, ಉಚ್ಚ ನ್ಯಾಯಾಲಯದ ಮೊರೆ ಹೋಗಿದೆ. ಹಾಗಾಗಿ ಮೇಯರ್‌-ಉಪ ಮೇಯರ್‌ ಚುನಾವಣೆ ಕುತೂಹಲ ಮೂಡಿಸಿದೆ. ಮಹಾನಗರ ಪಾಲಿಕೆಯಲ್ಲಿ ಅಧಿಕಾರ
ಕಳೆದುಕೊಂಡಿರುವ ಕಾಂಗ್ರೆಸ್‌ ಈ ಬಾರಿ ಮೇಯರ್‌-ಉಪ ಮೇಯರ್‌ ಪಟ್ಟ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಕಾನೂನು ಹೋರಾಟದ ಜೊತೆಗೆ ಎಲ್ಲಾ
ರಾಜಕೀಯ ತಂತ್ರಗಳನ್ನೂ ಅನುಸರಿಸುತ್ತಿದೆ. ಏನಾದರೂ ಸರಿ, ಮೇಯರ್‌-ಉಪ ಮೇಯರ್‌ಗಿರಿ ದಕ್ಕಿಸಿಕೊಳ್ಳಲೇಬೇಕು ಎನ್ನುವ ನಿಟ್ಟಿನಲ್ಲಿ ಶತ ಪ್ರಯತ್ನ ನಡೆಸಿದೆ.

ಒಟ್ಟಾರೆ 58 ಜನರು ಮೇಯರ್‌-ಉಪ ಮೇಯರ್‌ ಚುನಾವಣೆಗೆ ಮತದಾನ ಮಾಡಲಿದ್ದಾರೆ. ಮೇಯರ್‌-ಉಪ ಮೇಯರ್‌ ಸ್ಥಾನಕ್ಕೇರಲು 30 ಮತ ಪಡೆಯಬೇಕಾಗುತ್ತದೆ. ಸದ್ಯ ಬಿಜೆಪಿ ಆಗತ್ಯ ಸಂಖ್ಯಾಬಲ ಹೊಂದಿದೆ. ಹಾಗಾಗಿ ಈ ಬಾರಿಯೂ ಬಿಜೆಪಿಯೇ ಮೇಯರ್‌-ಉಪ ಮೇಯರ್‌ ಪಟ್ಟ ಅಲಂಕರಿಸಬಹುದು ಎಂಬ ಲೆಕ್ಕಾಚಾರ ಇದೆ. ಆದರೆ ಮೇಯರ್‌-ಉಪ ಮೇಯರ್‌ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್‌ನ ನಡೆ ಬಹಳ ಪ್ರಮುಖ ನಿರ್ಣಾಯಕ ಪಾತ್ರ ವಹಿಸಲಿದೆ. ಕಾಂಗ್ರೆಸ್‌ನ ಮುಂದಿನ ರಾಜಕೀಯ ನಡೆ ಏನು ಎಂಬುದು ಚಿದಂಬರ ರಹಸ್ಯವಾಗಿದೆ. ಒಟ್ಟಾರೆ ಬಿಜೆಪಿ-ಕಾಂಗ್ರೆಸ್‌ ರಣತಂತ್ರ ರೂಪಿಸುವಲ್ಲಿ ನಿರತವಾಗಿವೆ. ಯಾವ ಪಕ್ಷದ ತಂತ್ರಗಾರಿಕೆ ಯಶ ಕಾಣಲಿದೆ ಎಂಬುದಕ್ಕೆ 24 ರವರೆಗೆ ಕಾಯಬೇಕಾಗಿದೆ.

*ರಾ. ರವಿಬಾಬು

Advertisement

ಓದಿ: ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ತಾರತಮ್ಯ  

Advertisement

Udayavani is now on Telegram. Click here to join our channel and stay updated with the latest news.

Next