Advertisement

ಇಂದಿನಿಂದ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ ಸಂಭ್ರಮ

02:32 PM Feb 08, 2021 | Team Udayavani |

ಹರಿಹರ: ಆದಿಗುರು ಮಹರ್ಷಿ ವಾಲ್ಮೀಕಿ ಜಾತ್ರೆಗೆ ತಾಲೂಕಿನ ರಾಜನಹಳ್ಳಿ ಹಾಗೂ ಶ್ರೀಮಠ ಸಂಪೂರ್ಣ ಸಜ್ಜಾಗಿದ್ದು, ಫೆ. 8 ಮತ್ತು 9 ರಂದು ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳ ಆಯೋಜನೆಯಾಗಿದೆ. ನಾಡಿನ ಕೋಟೆ, ಕೊತ್ತಲಗಳನ್ನು ಕಟ್ಟಿದ, ಸ್ವತಃ ಪಾಳೆಗಾರರು, ರಾಜರಾಗಿ ಆಡಳಿತ ನಡೆಸಿದ ನಾಯಕ ಸಮಾಜದವರ ಸ್ವಾಭಿಮಾನದ ಸಂಕೇತವಾಗಿರುವ ವಾಲ್ಮೀಕಿ ಜಾತ್ರೆ ಈ ಬಾರಿ ಸಮುದಾಯದ ಸಾಂಸ್ಕೃತಿಕ ಪರಂಪರೆಯ ಹೆಗ್ಗುರುತಾಗಲಿದೆ ಎಂದು ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದಾರೆ.

Advertisement

ಈ ಹಿಂದಿನ ಎರಡು ಜಾತ್ರೆಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಮೂರನೇ ಜಾತ್ರೆಯಲ್ಲೂ ರಾಜ್ಯದ ಎಲ್ಲಾ ಪ್ರದೇಶದ ನಾಯಕ ಸಮಾಜದವರ ಮಹಾ ಸಮಾಗಮ ಯಶಸ್ವಿಯಾಗಲಿದೆ. ಕೊರೊನಾ ನಿಬಂಧನೆಗಳ ಮಧ್ಯೆಯೂ ಲಕ್ಷಾಂತರ ಜನರು ನಿಯಮಾನುಸಾರ ಭಾಗವಹಿಸಲಿದ್ದಾರೆಂದು ಆಯೋಜನಕರು ತಿಳಿಸಿದ್ದಾರೆ.

ವಾಹನ ನಿಲುಗಡೆಗೆ 50 ಎಕರೆ ಜಾಗ, ಒಮ್ಮೆಗೆ ನಾಲ್ಕು ಹೆಲಿಕ್ಯಾಪ್ಟರ್‌ಗಳಲ್ಲಿ ವಿಐಪಿಗಳು ಆಗಮಿಸಿದರೆ ತೊಂದರೆಯಾಗದಿರಲಿ ಎಂದು ನಾಲ್ಕು ಹೆಲಿಪ್ಯಾಡ್‌ ಗಳನ್ನು ಸಿದ್ಧಪಡಿಸಲಾಗಿದೆ. ಎರಡೂ ದಿನ 24×7 ಮಾದರಿಯಲ್ಲಿ ಬರೋಬ್ಬರಿ 100 ಕೌಂಟರ್‌ಗಳಲ್ಲಿ ಅನ್ನ ದಾಸೋಹ, ಮಹಿಳೆಯರು, ಪುರುಷರಿಗೆ ಸ್ನಾನ ಗೃಹ, ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ. 60×60 ಅಡಿ ಅಳತೆಯ ಶಾಶ್ವತ ವೇದಿಕೆ, 250×450 ಅಳತೆಯ ಮಹಾಮಂಟಪ ನಿರ್ಮಿಸಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ಸೇರಿದಂತೆ 50 ಸಾವಿರ ಆಸನ ವ್ಯವಸ್ಥೆ, ವೀಕ್ಷಣೆಗಾಗಿ 15 ದೊಡ್ಡ ಗಾತ್ರದ ಎಲ್‌ಇಡಿ ಟಿವಿ ವ್ಯವಸ್ಥೆ ಮಾಡಲಾಗಿದೆ.

ಫೆ. 8 ರಂದು ಬೆಳಿಗ್ಗೆ 9ಕ್ಕೆ ಧ್ವಜಾರೋಹಣದೊಂದಿಗೆ ಜಾತ್ರೆಗೆ ಚಾಲನೆ ದೊರೆಯಲಿದೆ. 10ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ, ಮಧ್ಯಾಹ್ನ 12ಕ್ಕೆ ರಾಜ್ಯ ಮಟ್ಟದ ಶಬರಿ ಮಹಿಳಾ ಜಾಗೃತಿ ಸಮಾವೇಶವಿದೆ. ಮಧ್ಯಾಹ್ನ 3ಕ್ಕೆ ರಾಜ್ಯ ಎಸ್‌ಟಿ ನೌಕರರ ಸಮಾವೇಶ, ಸಂಜೆ 5ಕ್ಕೆ ಬುಡಕಟ್ಟು ಸಮುದಾಯಗಳ ಸಂಘಟನೆ ಮತ್ತು ಸವಾಲುಗಳ ಸಮಾವೇಶ, ರಾತ್ರಿ 7ಕ್ಕೆ ರಾಷ್ಟ್ರಮಟ್ಟದ ಕಲಾತಂಡಗಳ ಸಾಂಸ್ಕೃತಿಕ ಕಾರ್ಯಕ್ರಮವಿದ್ದು,
ರಾತ್ರಿ 11ಕ್ಕೆ “ಸಂಪೂರ್ಣ ರಾಮಾಯಣ’ ನಾಟಕ ಪ್ರದರ್ಶನವಿದೆ.

ಫೆ. 9 ರಂದು ಬೆಳಿಗ್ಗೆ 7 ರಿಂದ 8ರವರೆಗೆ ಸ್ವತ್ಛತಾ ಕಾರ್ಯಕ್ರಮ. 9ಕ್ಕೆ ಆದಿಕವಿ ಮಹರ್ಷಿ ವಾಲ್ಮೀಕಿ ರಥೋತ್ಸವ, 10ಕ್ಕೆ ವಿವಿಧ ಮಠಾ ಧೀಶರ ಸಾನ್ನಿಧ್ಯದಲ್ಲಿ ಧರ್ಮಸಭೆ ಆಯೋಜನೆಯಾಗಿದೆ. ಮಧ್ಯಾಹ್ನ 12ಕ್ಕೆ ಬೃಹತ್‌ ಜನ ಜಾಗೃತಿ ಸಮಾವೇಶ ನಡೆಯಲಿದ್ದು, ಸಿಎಂ ಯಡಿಯೂರಪ್ಪ, ಡಿಸಿಎಂ ಡಾ| ಅಶ್ವತ್ಥನಾರಾಯಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಸಚಿವ ಎಚ್‌.ಡಿ. ರೇವಣ್ಣ, ಸಚಿವರಾದ ರಮೇಶ ಜಾರಕಿಹೊಳಿ, ಬಿ. ಶ್ರೀರಾಮುಲು, ಬಸವರಾಜ ಬೊಮ್ಮಾಯಿ, ಆನಂದ್‌ ಸಿಂಗ್‌ ಮೊದಲಾದವರು ಭಾಗವಹಿಸುವರು. ಚಲನಚಿತ್ರ ನಟ ಸುದೀಪ್‌ ಅವರಿಗೆ “ವಾಲ್ಮೀಕಿ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

Advertisement

ಓದಿ: ಭಾರತದ ಮಾರುಕಟ್ಟೆಗೆ ಬರಲಿದೆ ಜಾಗ್ವಾರ್ ಐ ಪೇಸ್

Advertisement

Udayavani is now on Telegram. Click here to join our channel and stay updated with the latest news.

Next