Advertisement

ಕೈಗಾರಿಕಾ ವಸಾಹತು ನಿವೇಶನ ದರ ಪರಿಷ್ಕರಣೆ ಪ್ರಸ್ತಾವನೆ ಸಲ್ಲಿಸಿ

03:59 PM Feb 07, 2021 | Team Udayavani |

ದಾವಣಗೆರೆ: ಹರಿಹರ ತಾಲೂಕು ಸಾರಥಿ- ಕುರುಬರಹಳ್ಳಿ ಕೈಗಾರಿಕಾ ವಸಾಹತುವಿನಲ್ಲಿ ಅಭಿವೃದ್ಧಿಪಡಿಸಲಾಗಿರುವ ನಿವೇಶನಗಳ ದರ ಪರಿಷ್ಕರಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಕರ್ನಾಟಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹರಿಹರ ತಾಲೂಕು ಕುರುಬರಹಳ್ಳಿ ಬಳಿ ಕೆಎಸ್‌ಎಸ್‌ಐಡಿಸಿ ವತಿಯಿಂದ ಕೈಗಾರಿಕಾ ವಸಾಹತು ಸ್ಥಾಪಿಸಿ 95 ನಿವೇಶನಗಳನ್ನು ಅಭಿವೃದ್ಧಿಪಡಿಸಿದ್ದು, ಇದುವರೆಗೆ 26 ನಿವೇಶನಗಳನ್ನು ಮಾತ್ರ ಹಂಚಿಕೆ ಮಾಡಲಾಗಿದೆ. 57 ನಿವೇಶನಗಳು ಖಾಲಿ ಇವೆ. ಈ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗೆ ನಿವೇಶನ ಪಡೆಯಲು ಪ್ರತಿ ಎಕರೆಗೆ ಸುಮಾರು 2.20 ಕೋಟಿ ರೂ. ವೆಚ್ಚವನ್ನು ಉದ್ಯಮಿಗಳು ಭರಿಸಬೇಕಿದೆ. ಇಷ್ಟೊಂದು ದೊಡ್ಡ ಮೊತ್ತ ನೀಡಿ ನಿವೇಶನ ಪಡೆಯಲು ಯಾರೂ ಮುಂದೆ ಬಾರದ ಕಾರಣ ಖಾಲಿ ಉಳಿದಿವೆ. ದರ ಕಡಿಮೆಗೊಳಿಸಿದರೆ ತ್ವರಿತವಾಗಿ ಉದ್ಯಮಗಳು ಸ್ಥಾಪನೆಯಾಗಿ ಉದ್ಯೋಗ ಸೃಷ್ಟಿಯ ಜೊತೆಗೆ ಜಿಲ್ಲೆಯ ಅಭಿವೃದ್ಧಿಯಾಗಿ, ಬಂಡವಾಳ ಹರಿದುಬರಲಿದೆ.

ಆದ್ದರಿಂದ ನಿವೇಶನದ ದರ ಪರಿಷ್ಕರಿಸುವಂತೆ ಸಣ್ಣ ಕೈಗಾರಿಕೆಗಳ ಮಾಲೀಕರ ಸಂಘದ ಕಾರ್ಯದರ್ಶಿ ಹನುಮಂತ ರಾವ್‌ ಸೇರಿದಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು, ದರ ಪರಿಷ್ಕರಣೆ ಕೋರಿ ಸರ್ಕಾರಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ದಾವಣಗೆರೆಯ ಕರೂರು ಕೈಗಾರಿಕಾ ಪ್ರದೇಶಕ್ಕೆ ಕಳೆದ ನಾಲ್ಕು ತಿಂಗಳಿನಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ. ವಾಷಿಂಗ್‌ ಯುನಿಟ್‌, ಕುಡಿಯುವ ನೀರು ಹಾಗೂ ಬಳಕೆಗೂ ನೀರು ಇಲ್ಲದ ಕಾರಣ ಗಾರ್ಮೆಂಟ್‌ ಉದ್ದಿಮೆ ನಡೆಸುವುದು ದುಸ್ತರವಾಗಿದೆ. ಮಹಾನಗರಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎಂದು ಗಾರ್ಮೆಂಟ್‌ ಉದ್ಯಮಿಗಳು ಸಭೆಯ ಗಮನಕ್ಕೆ ತಂದರು.

ಜಿಲ್ಲಾಧಿಕಾರಿಗಳು ಸ್ಪಂದಿಸಿ ಕೆಐಎಡಿಬಿ ಅಧಿಕಾರಿಗಳು ಕೂಡಲೆ ಮಹಾನಗರಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ ನೀರಿನ ಪೂರೈಕೆಗೆ ತಕ್ಷಣ ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.

Advertisement

ಗೃಹ ಕೈಗಾರಿಕೆಗೆ ನಿರಾಕ್ಷೇಪಣೆ ಪತ್ರ ಕೊಡಿ: ಗೃಹ ಆಧಾರಿತ ಜವಳಿ ಉದ್ಯಮವನ್ನು ಜಿಲ್ಲೆಯಲ್ಲಿ ವಸತಿಗೃಹ ಪ್ರದೇಶದಲ್ಲಿ ನಡೆಸಲಾಗುತ್ತಿದ್ದು, ಸಬ್ಸಿಡಿ ಪಡೆಯಲು ಪರಿಸರ ಇಲಾಖೆಯಿಂದ ನಿರಾಕ್ಷೇಪಣೆ ಪತ್ರದ ಅಗತ್ಯವಿದೆ. ಆದರೆ ಪರಿಸರ ಅಧಿಕಾರಿಗಳು ಎನ್‌ಒಸಿ ನೀಡುತ್ತಿಲ್ಲ ಎಂದು ಜವಳಿ ಉದ್ಯಮಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪರಿಸರ ಅಧಿಕಾರಿಗಳು, ಜವಳಿ ಉದ್ಯಮವನ್ನು ಕೈಗಾರಿಕಾ ಪ್ರದೇಶದಲ್ಲಿ ನಡೆಸಬೇಕು, ವಸತಿಗೃಹ ಪ್ರದೇಶದಲ್ಲಿ ಅವಕಾಶವಿಲ್ಲ. ಹೀಗಾಗಿ ನೀಡಿಲ್ಲ ಎಂದು ಉತ್ತರಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಗೃಹ ಕೈಗಾರಿಕೆಗಳು ಗೃಹದಲ್ಲಿಯೇ ನಡೆಯುತ್ತವೆ. ದೊಡ್ಡ ಪ್ರಮಾಣದಲ್ಲಿ ಮಾಡುವುದಿಲ್ಲ. ಅವರಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಕೂಡಲೆ ಅಂತಹವರಿಗೆ ನಿರಾಕ್ಷೇಪಣೆ ಪತ್ರ ನೀಡುವಂತೆ ಪರಿಸರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್‌ ವೀರಮಲ್ಲಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಎಚ್‌.ಎಸ್‌. ಜಯಪ್ರಕಾಶ್‌ ನಾರಾಯಣ್‌, ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಸುರೇಶ್‌, ಕೆಐಎಡಿಬಿ ಅಧಿಕಾರಿ ಶ್ರೀಧರ್‌ ಸೇರಿದಂತೆ ವಿವಿಧ  ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next