ಜಗಳೂರು: ಕೃಷಿ ಕಾಯ್ದೆ ತಿದ್ದುಪಡಿ ರದ್ದುಗೊಳಿಸುವಂತೆ ಒತ್ತಾಯಿಸಿ ವಿವಿಧ ರೈತ ಸಂಘಟನೆಗಳು ಕರೆ ನೀಡಿದ್ದ ಹೆದ್ದಾರಿ ಬಂದ್ ಬೆಂಬಲಿಸಿ ತಾಲೂಕು ರೈತ ಸಂಘದ ( ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ವತಿಯಿಂದ ತಾಲೂಕಿನ ದೊಣ್ಣೆಹಳ್ಳಿ, ಹಿರೆಮಲ್ಲನಹೊಳೆ, ಕಲ್ಲೇದೇವರಪುರ,
ಕಾನನಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಯಿತು. ಸೊಕ್ಕೆ ಹೊಬಳಿಯ ಚಿಕ್ಕಬಂಟನಹಳ್ಳಿ ಬಳಿ ಚಳ್ಳಕೆರೆ-ಅರಭಾವಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಡಾ| ನಾಗವೇಣಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಲ್ಲನಹೊಳೆ ಚಿರಂಜೀವಿ, ಕೇಂದ್ರ ಸರ್ಕಾರ ವಿದ್ಯುತ್ಛಕ್ತಿ, ಗುತ್ತಿಗೆ ಬೇಸಾಯ ಹಾಗೂ ಎಪಿಎಂಸಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸುವವರ ಪರವಾನಗಿ ರದ್ದುಪಡಿಸಬೇಕು. ಬಂಡವಾಳಶಾಹಿಗಳ ಕೈಗೊಂಬೆಯಾಗಿ ಖಾಸಗೀಕರಣ ಜಾರಿ ಹುನ್ನಾರ ಕೈಬಿಡಬೇಕು. ರೈತರ ಪರವಾಗಿರುವುದಾಗಿ ಹೇಳುವ ಸರ್ಕಾರಗಳು, ರೈತರಿಗೆ ಮಾರಕ ವಾಗಿರುವ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿರುವುದು ಖಂಡನೀಯ ಎಂದರು.
ಸಿಪಿಐ ಡಿ. ದುರುಗಪ್ಪ ಹಾಗೂ ಪಿಎಸ್‌ಐ ಸಂತೋಷ್ ಭಾಗೋಜಿ ಸೂಕ್ತ ಬಂದೋಬಸ್ತ್ ಮಾಡಿದ್ದರು. ರೈತ ಸಂಘದ ಪ್ರಮುಖರಾದ ಗೌಡಗೊಂಡನಹಳ್ಳಿ ಸತೀಶ್, ಶರಣಪ್ಪ, ಕೆಂಚಪ್ಪ, ರಾಜು ಮತ್ತಿತರರು ಇದ್ದರು.
ಓದಿ :
ಉತ್ತರಾಖಂಡ್ ನಲ್ಲಿ ಹಿಮ ಸ್ಪೋಟ: ಹರಿದ್ವಾರ- ಋಷಿಕೇಶದಲ್ಲಿ ಪ್ರವಾಹ ಭೀತಿ