Advertisement

ಹೆದ್ದಾರಿ ಬಂದ್‌ಗೆ ವ್ಯಾಪಕ ಬೆಂಬಲ

03:42 PM Feb 07, 2021 | Team Udayavani |

ದಾವಣಗೆರೆ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಶನಿವಾರ ದೇಶವ್ಯಾಪಿ ವಿವಿಧ ರೈತ ಸಂಘಟನೆಗಳು ಕರೆ ನೀಡಿದ್ದ ಹೆದ್ದಾರಿ ಬಂದ್‌ಗೆ ಜಿಲ್ಲೆಯಲ್ಲಿಯೂ ವ್ಯಾಪಕ ಬೆಂಬಲ ವ್ಯಕ್ತವಾಯಿತು.

Advertisement

ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳನ್ನು ಕೆಲ ಕಾಲ ಬಂದ್‌ ಮಾಡಿ ವಾಹನ ಸಂಚಾರಕ್ಕೆ ಅಡ್ಡಿಯುನ್ನುಂಟು ಮಾಡಿದರು. ಇನ್ನು ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದರೆ, ಮತ್ತೆ ಕೆಲವು ಸಂಘಟನೆಗಳು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆಯುವ ಮೂಲಕ ರೈತರ ಹೋರಾಟಕ್ಕೆ ವಿಶಿಷ್ಟ ರೀತಿಯಲ್ಲಿ ಬೆಂಬಲ ಸೂಚಿಸಿದವು.

ರಾಷ್ಟ್ರೀಯ ಹೆದ್ದಾರಿ ತಡೆಯಿಂದ ಸಾವಿರಾರು ವಾಹನಗಳು ತಾಸುಗಟ್ಟಲೆ ಹೆದ್ದಾರಿಯಲ್ಲಿ ನಿಂತಲ್ಲೇ ನಿಲ್ಲುವಂತಾಯಿತು. ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು, ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಿದ್ದವರು, ವಿವಿಧ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಗೂಡ್ಸ್‌ ಲಾರಿಗಳು ಒಂದೂವರೆ ತಾಸಿಗೂ ಅಧಿಕ ಕಾಲ ಹೆದ್ದಾರಿಯಲ್ಲಿಯೇ ಸಾಲುಗಟ್ಟಿ ನಿಲ್ಲುವಂತಾಯಿತು. ಅಂಬ್ಯುಲೆನ್ಸ್‌ನಲ್ಲಿರುವ ರೋಗಿಗಳು, ತುರ್ತಾಗಿ ಆಸ್ಪತ್ರೆಗೆ ಹೋಗುವ ಸಾರ್ವಜನಿಕರು ಬಂದ್‌ನಲ್ಲಿ ಸಿಲುಕಿ ಪರಿತಪಿಸಬೇಕಾಯಿತು.

ಹೆದ್ದಾರಿ ತಡೆ ಮಾಡದಂತೆ ತಡೆಯಲು ಮುಂದಾದ ಪೊಲೀಸರಿಗೂ ಹಾಗೂ ಪ್ರತಿಭಟನಾನಿರತರಿಗೂ ಕೆಲ ಕಾಲ ವಾಗ್ವಾದ ನಡೆಯಿತು. ದೇಶ ವ್ಯಾಪಿ ಹೆದ್ದಾರಿ ಬಂದ್‌ಗೆ ಕರೆ ನೀಡಲಾಗಿದ್ದು, ಮಧ್ಯಾಹ್ನ 12ಗಂಟೆಯಿಂದ 3 ಗಂಟೆವರೆಗೆ ಬಂದ್‌ ಮಾಡುವುದಾಗಿ ಮೊದಲೇ ಘೋಷಿಸಲಾಗಿದೆ. ಹೀಗಾಗಿ ಮೂರು ತಾಸು ಬಂದ್‌ಗೆ ಪೊಲೀಸರು ಸಹಕರಿಸಬೇಕು ಎಂದು ರೈತರು ಪಟ್ಟು ಹಿಡಿದರು.

ಕೊನೆಗೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸುವ ಮೂಲಕ ಹೆದ್ದಾರಿ ಬಂದ್‌ ಅನ್ನು ಒಂದೂವರೆ ತಾಸಿಗೆ ಮೊಟಕುಗೊಳಿಸುವಲ್ಲಿ ಯಶಸ್ವಿಯಾದರು.

Advertisement

ನಿಂತಲ್ಲೇ ನಿಂತ ವಾಹನಗಳು: ರೈತರು ಎಚ್‌. ಕಲ್ಪನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣಿ ನಡೆಸುವ ಮೂಲಕ ವಾಹನ ಸಂಚಾರಕ್ಕೆ ತಡೆಯೊಡ್ಡಿದರು. ಬೆಂಗಳೂರು-ಪೂನಾ ಮಾರ್ಗದ ದಾವಣಗೆರೆ-ಚಿತ್ರದುರ್ಗ ಸೇರಿದಂತೆ ಇತರೆ ಭಾಗದ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ ಬಂದ್‌ ಆಗಿದ್ದರಿಂದ ಒಂದೂವರೆ ತಾಸು ವಾಹನ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು. ಇದೇ ರೀತಿ ತಾಲೂಕಿನ ಕೈದಾಳೆ ಕ್ರಾಸ್‌ ಸೇರಿದಂತೆ ವಿವಿಧೆಡೆ ರೈತ ಸಂಘಟನೆಗಳಿಂದ ರಸ್ತೆ ನಡೆ ನಡೆಯಿತು. ಈ ಸಂದರ್ಭದಲ್ಲಿ ರೈತರು, ಬೆಂಬಲ ಬೆಲೆಯಡಿ ಮೆಕ್ಕೆಜೋಳ, ಭತ್ತ ಖರೀದಿಸಲು ಆಗ್ರಹಿಸಿದರು.

ಕೇಂದ್ರದ ವಿರುದ್ಧ ಘೋಷಣೆ: ಕಳೆದ 70ದಿನಗಳಿಂದ ದೆಹಲಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ರೈತರ ಮನವಿಗೆ ಸ್ಪಂದಿಸುತ್ತಿಲ್ಲ. ಸುಪ್ರೀಂ ಕೋರ್ಟ್‌ ಈ ಕಾಯ್ದೆಗಳಿಗೆ ತಾತ್ಕಾಲಿಕ ತಡೆ ನೀಡಿದ್ದರೂ ನರೇಂದ್ರ ಮೋದಿಯವರು ಈ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯದೆ ಮೊಂಡುತನ ಪ್ರದರ್ಶನ ಮಾಡುತ್ತಿದ್ದಾರೆ. ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಸರ್ಕಾರ ಕೂಡಲೇ ಸಂಪೂರ್ಣವಾಗಿ ವಾಪಸ್‌ ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ
ಘೋಷಣೆ ಕೂಗಿದರು.

ಓದಿ : ಕೃಷಿ ಕಾಯ್ದೆ ಹಿಂದೆ ಕಾರ್ಪೊರೆಟ್‌ ಕಂಪನಿಗಳ ಹುನ್ನಾರ

Advertisement

Udayavani is now on Telegram. Click here to join our channel and stay updated with the latest news.

Next