ದಾವಣಗೆರೆ: ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಶುಕ್ರವಾರ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಕಾರ್ಯಕರ್ತರು ಗಾಂಧಿ ವೃತ್ತದಲ್ಲಿ ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕೈದಾಳೆ ಮಾತನಾಡಿ, ದೇಶದ ಜನ ಸಾಮಾನ್ಯರು ಆರ್ಥಿಕ ಸಂಕಷ್ಟ ಮತ್ತು ಸಾಂಕ್ರಾಮಿಕ ರೋಗದ ಆಘಾತದಿಂದ ಕಂಗಾಲಾಗಿ ಜೀವನ ನಿರ್ವಹಣೆಗಾಗಿ ಸರ್ಕಾರದಿಂದ ಆರ್ಥಿಕ ಬೆಂಬಲಕ್ಕಾಗಿ ಕಾತರದಿಂದ ಕಾಯುತ್ತಿರುವಾಗ, ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದು ಜನ ವಿರೋಧಿ ನೀತಿ ಎಂದು ದೂರಿದರು.
ಕೇಂದ್ರ ಸರ್ಕಾರದ ಬಜೆಟ್ ಆರ್ಥಿಕ ಪುನಶ್ಚೇತನ ಮತ್ತು ಬೆಳವಣಿಗೆಯ ಕುರಿತು ಹುಸಿ ಪ್ರತಿಪಾದನೆಗಳಿಂದ ತುಂಬಿ ಹೋಗಿದೆ.
ಆತ್ಮ ನಿರ್ಭರ ಭಾರತ ನಿರ್ಮಿಸುವ ಹೆಸರಿನಲ್ಲಿ ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್, ವಿಮೆ ಮುಂತಾದ ಸಮಾಜ ಕಲ್ಯಾಣ ಮತ್ತು ಸೇವಾ ವಲಯಗಳು ಒಳಗೊಂಡಂತೆ ಎಲ್ಲ ರಂಗಗಳ ಸಂಪೂರ್ಣ ಖಾಸಗೀಕರಣದ ನೀಲಿ ನಕ್ಷೆ ಬಿಚ್ಚಿಡಲಾಗಿದೆ. ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಕ್ಷೇತ್ರದಲ್ಲಿ ವಾಸ್ತವದಲ್ಲಿ ಬಜೆಟ್ ಕಡಿತಗೊಂಡಿದ್ದರೂ ಗೊಂದಲಗಳಿಂದ ಕೂಡಿರುವ ಅಂಕಿ ಅಂಶಗಳಲ್ಲಿ ಬಜೆಟ್ ಹೆಚ್ಚು ಮಾಡಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕರಾಳ ಕೃಷಿ ಮತ್ತು ಇತರ ಬಂಡವಾಳ ಶಾಹಿ ಕಂಪನಿಗಳ ಪರ ಕಾಯ್ದೆಗಳ ವಿರುದ್ಧ ದೇಶದ ಶೇ.70 ರಷ್ಟಿರುವ ಅನ್ನದಾತರಾದ ರೈತರು ನಡೆಸುತ್ತಿರುವ ಐತಿಹಾಸಿಕ ಹೋರಾಟ ನಡೆಯುತ್ತಿದೆ. ವಿತ್ತ ಸಚಿವರು ಸರ್ಕಾರದ ಸರ್ವಾಧಿ ಕಾರಿ ಧೋರಣೆಗೆ ತಕ್ಕಂತೆ ಕೃಷಿಕರ ನ್ಯಾಯಯುತ ಹೋರಾಟದ ಬೇಡಿಕೆಗಳ ಬಗ್ಗೆ ಜಾಣ ಮೌನ ವಹಿಸಿದ್ದಾರೆ. ಆತ್ಮ ನಿರ್ಭರ ಭಾರತ ಎಂಬುದು ವಾಸ್ತವದಲ್ಲಿ ಕಾರ್ಪೋರೇಟ್ ಅವಲಂಬಿತ ಭಾರತ ಎಂಬ ಪದಕ್ಕೆ ಪರ್ಯಾಯವಾಗಿದೆ. ತೀವ್ರ ಬಿಕ್ಕಟ್ಟಿನ ಸಂದರ್ಭದಲ್ಲೂ ಬಂಡವಾಳಶಾಹಿಗಳ ಆದೇಶಕ್ಕೆ ತಕ್ಕಂತೆ ರೂಪಿತವಾದ ಬಜೆಟ್ ಮಂಡಿಸಲಾಗಿದೆ. ಕೂಡಲೇ ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಹಾಗೂ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಮಿತಿ ಸದಸ್ಯರಾದ ತಿಪ್ಪೇಸ್ವಾಮಿ, ಕೆ. ಭಾರತಿ, ಪುಷ್ಪ, ಕಾವ್ಯ, ಸ್ಮಿತಾ, ಜ್ಯೋತಿ, ಸೌಮ್ಯ ಇತರರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.
ಓದಿ :
ಉಲ್ಲಾಸ್ ಯುವ ಕಾಂಗ್ರೆಸ್·ಗೆ ಅಧ್ಯಕ