Advertisement

ಅಂಗನವಾಡಿ ಕಾರ್ಯಕರ್ತೆಯರಿಂದ ಮಾರ್ಚ್‌ನಲ್ಲಿ ಪ್ರತಿಭಟನೆ

12:56 PM Feb 05, 2021 | Team Udayavani |

ದಾವಣಗೆರೆ : ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರ ವಿವಿಧ ಬೇಡಿಕೆ  ಈಡೇರಿಕೆಗೆ ಒತ್ತಾಯಿಸಿ ಮಾರ್ಚ್‌ನಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ
ಫೆಡರೇಷನ್‌( ಎಐಟಿಯುಸಿ) ಅಧ್ಯಕ್ಷ ಎಚ್‌.ಕೆ. ರಾಮಚಂದ್ರಪ್ಪ ತಿಳಿಸಿದ್ದಾರೆ.

Advertisement

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಎದುರಿಸುತ್ತಿರುವ ಹಲವಾರು ಸಮಸ್ಯೆ, ಬೇಡಿಕೆಗಳ ಬಗ್ಗೆ ಫೆ. 7 ರಂದು
ಬೆಂಗಳೂರಿನ ಎಐಟಿಯುಸಿ ಕಚೇರಿಯಲ್ಲಿ ನಡೆಯುವ ಮುಖಂಡರ ಸಭೆಯಲ್ಲಿ ಚರ್ಚಿಸಿ, ಮಾರ್ಚ್‌ನಲ್ಲಿ ಹೋರಾಟ ನಡೆಸಲಾಗುವುದು
ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊರೊನಾ ವಾರಿಯರ್ಸ್‌ಗಳಾಗಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ದಾವಣಗೆರೆ ಜಿಲ್ಲೆಯ 6 ಜನರು ಸೇರಿದಂತೆ ರಾಜ್ಯದಲ್ಲಿ 36 ಕಾರ್ಯಕರ್ತೆಯರು ಮೃತಪಟ್ಟಿದ್ದಾರೆ. ಆವರ ಕುಟುಂಬಗಳಿಗೆ ಈವರೆಗೆ ಸರ್ಕಾರ 30 ಲಕ್ಷ ರೂ. ಪರಿಹಾರ ನೀಡಿಲ್ಲ. ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎನ್‌.ಕೆ. ಪಾಟೀಲ್‌ ಅಧ್ಯಕ್ಷತೆಯಲ್ಲಿನ ಸಮಿತಿ ರಾಜ್ಯದಾದ್ಯಾಂತ
ಸಮೀಕ್ಷೆ ನಡೆಸಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಬೆಳಗ್ಗೆ 9:30 ರಿಂದ ಸಂಜೆ 4 ರವರೆಗೆ ಕೆಲಸದ ಅವಧಿ ನಿಗದಿಗೊಳಿಸಿದ್ದಲ್ಲದೆ ಐಸಿಡಿಎಸ್‌ ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ನಿಯೋಜನೆ ಮಾಡದಂತೆ ಶಿಫಾರಸು ಮಾಡಿತ್ತು. ಅದನ್ನು ಒಪ್ಪಿಕೊಂಡಿರುವ
ಸರ್ಕಾರವೇ ಉಚ್ಚ ನ್ಯಾಯಾಲಯದ ಆದೇಶವನ್ನೇ ಉಲ್ಲಂಘಿಸುತ್ತಿದೆ. ಐಸಿಡಿಎಸ್‌ ಅಲ್ಲದೆ ಬೇರೆ ಬೇರೆ ಇಲಾಖೆಗಳ ಕೆಲಸಕ್ಕೆ
ಬಳಸಿಕೊಳ್ಳಲಾಗುತ್ತಿದೆ.ಕೂಡಲೇ ನಿಲ್ಲಿಸಬೇಕು ಎಂದರು.

ಅನೇಕ ಅಂಗನವಾಡಿಗಳಲ್ಲಿ ಮೂಲಭೂತ ಸೌಲಭ್ಯಗಳೇ ಇಲ್ಲ. ಸರ್ಕಾರ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಬೇಕು. ಕಳೆದ
ಹಲವಾರು ವರ್ಷದಿಂದ ಕೆಲಸ ಮಾಡುತ್ತಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಹೊಸದಾಗಿ ಸೇರಿದವರಿಗೂ ಒಂದೇ ವೇತನ ನೀಡಲಾಗುತ್ತಿದೆ. ಕೆಲಸದ ಆಧಾರದಲ್ಲಿ ವೇತನ ನೀಡಬೇಕು. ಎಸ್ಸೆಸ್ಸೆಲ್ಸಿ ಆದಂತಹವರಿಗೆ ಬಡ್ತ ನೀಡಬೇಕು. ಮೊಟ್ಟೆಗಳನ್ನ ಸರ್ಕಾರವೇ ಪೂರೈಕೆ ಮಾಡಬೇಕು. ಇಲ್ಲವೇ ಕಾರ್ಯಕರ್ತೆಯರ ಬ್ಯಾಂಕ್‌ ಖಾತೆಗೆ ಮುಂಗಡವಾಗಿ ಹಣ ಬಿಡುಗಡೆ ಮಾಡಬೇಕು. ಕಳೆದ 3-4 ತಿಂಗಳನಿಂದ ಬಾಕಿ ಇರುವ ವೇತನ ಬಿಡುಗಡೆ ಮಾಡಬೇಕು. ಪೌಷ್ಠಿಕತೆ ಸದಾ ಮಾತನಾಡುವ ಸರ್ಕಾರ ಅಂಗನವಾಡಿ ಕೇಂದ್ರಗಳಿಗೆ ಅತೀ ಕಳಪೆ ಗುಣಮಟ್ಟದ ಪದಾರ್ಥಗಳ ಪೂರೈಕೆ ಮಾಡುತ್ತಿದೆ. ಕೇಂದ್ರಕ್ಕೆ ಬರುವಂತಹವರಿಗೆ ಅದನ್ನೇ ನೀಡಬೇಕಾಗುವುದರಿಂದ ಮಕ್ಕಳು,
ಗರ್ಭಿಣಿ ಮತ್ತು ಮಹಿಳೆಯರಲ್ಲಿ ಅಪೌಷ್ಠಿಕತೆ ಕಂಡು ಬರುತ್ತಿದೆ. ಉತ್ತಮ ಗುಣಮಟ್ಟದ ಪದಾರ್ಥಗಳ ಪೂರೈಕೆ ಮಾಡಬೇಕು. ಕೊರೊನಾ
ಕಾರಣಕ್ಕೆ ಕೇಂದ್ರಗಳನ್ನು ಮುಚ್ಚಿರುವುದರಿಂದ ರಾಜ್ಯದಾದ್ಯಾಂತ 62,199 ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬರುತ್ತಿದೆ. ಕೂಡಲೇ ಅಂಗನವಾಡಿ
ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

Advertisement

ಫೆಡರೇಷನ್‌ ರಾಜ್ಯ ಖಜಾಂಚಿ ಎಂ.ಬಿ. ಶಾರದಮ್ಮ, ಆವರಗೆರೆ ಚಂದ್ರು, ಆವರಗೆರೆ ವಾಸು, ವಿಶಾಲಾಕ್ಷಿ, ಎಸ್‌.ಎಸ್‌. ಮಲ್ಲಮ್ಮ, ಜಿ. ರೇಣುಕಮ್ಮ, ಸಿ.ಬಿ. ಕಾಳಮ್ಮ, ಸರೋಜಾ ಇತರರು ಇದ್ದರು.

ಓದಿ : ದಾವಣಗೆರೆಯಿಂದ ಹುಬ್ಬಳ್ಳಿಗೆ ವಾಹನ ಜಾಥಾ

Advertisement

Udayavani is now on Telegram. Click here to join our channel and stay updated with the latest news.

Next