Advertisement

ದಾವಣಗೆರೆಯಿಂದ ಹುಬ್ಬಳ್ಳಿಗೆ ವಾಹನ ಜಾಥಾ

12:47 PM Feb 05, 2021 | Team Udayavani |

ದಾವಣಗೆರೆ: ಹುಬ್ಬಳ್ಳಿ-ಧಾರವಾಡ ಬೈಪಾಸ್‌ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಂದ ರಸ್ತೆ ಸುರಕ್ಷತಾ
ಜಾಗೃತಿಗಾಗಿ ಫೆ. 6 ರಂದು ದಾವಣಗೆರೆಯಿಂದ ಹುಬ್ಬಳ್ಳಿ-ಧಾರವಾಡ ಬೈಪಾಸ್‌ನ ಇಟಿಗಟ್ಟಿವರೆಗೆ ವಾಹನ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಡಾ. ರವಿಕುಮಾರ್‌ ತಿಳಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪಘಾತದಲ್ಲಿ ಮೃತಪಟ್ಟ ಕುಟುಂಬದವರೆಲ್ಲ ಫೆ. 6 ರಂದು ಬೆಳಗ್ಗೆ 7 ಗಂಟೆಗೆ ನಗರದ
ಭಾರತೀಯ ವೈದ್ಯಕೀಯ ಸಂಸ್ಥೆ ಸಭಾಂಗಣದಲ್ಲಿ ಸೇರಿ ಅಲ್ಲಿಂದ ಕಾರುಗಳ ಮೂಲಕ ಜಾಥಾ ಆರಂಭಿಸಲಾಗುವುದು.
ಅಪಘಾತದಲ್ಲಿ ಗಾಯಗೊಂಡವರು, ಮೃತರ ಕುಟುಂಬದವರು, ಸ್ನೇಹಿತರು ಸೇರಿ ಜಾಥಾದಲ್ಲಿ 200 ಜನರು ಭಾಗವಹಿಸುವ ಸಾಧ್ಯತೆ ಇದೆ. ವಾಹನ ಜಾಥಾಕ್ಕಾಗಿ ಅಗತ್ಯ ಸುರಕ್ಷತಾ ಕ್ರಮ ಹಾಗೂ ಪೊಲೀಸ್‌ ಭದ್ರತಾ ಕ್ರಮ ವಹಿಸಲಾಗಿದೆ. ಜಾಥಾ ಇಟಿಗಟ್ಟಿಗೆ 10 ಗಂಟೆಗೆ ತಲುಪಲಿದ್ದು ಅಲ್ಲಿ ಸ್ಥಳೀಯ ಸಂಘ ಸಂಸ್ಥೆಗಳಿಂದ ಅಪಘಾತದಲ್ಲಿ ಮಡಿದವರಿಗೆ ನುಡಿ, ಚಿತ್ರಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ ಎಂದರು.

ಧಾರವಾಡ ಬೈಪಾಸ್‌ ಬಳಿ ಸಂಭವಿಸಿದ ದುರ್ಘ‌ಟನೆ ಮರುಕಳಿಸದಿರಲು ಜನತೆಯಲ್ಲಿ ಅರಿವು ಮೂಡಿಸಬೇಕು. ಹೆದ್ದಾರಿಯಲ್ಲಿ ಅಪಘಾತಗಳು
ನಡೆಯದಂತೆ ಕ್ರಮ ಕೈಗೊಳ್ಳಲು ಸರ್ಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಾರಿಗೆ ಇಲಾಖೆಗಳನ್ನು ಒತ್ತಾಯಿಸಬೇಕು ಎಂಬ ಉದ್ದೇಶದಿಂದ ಜಾಥಾ ಹಮ್ಮಿಕೊಳ್ಳಲಾಗಿದ್ದು ಅಂದು ಈ ವಿಚಾರವಾಗಿ ಅಲ್ಲಿಯ ಜಿಲ್ಲಾಡಳಿತಕ್ಕೂ ಮನವಿ ಸಹ ಸಲ್ಲಿಸಲಾಗುವುದು ಎಂದು
ತಿಳಿಸಿದರು.

ಅಪಘಾತದಲ್ಲಿ ಮಡಿದವರ ಕುಟುಂಬ ಸದಸ್ಯರಲ್ಲೋರ್ವರಾದ ನಟೇಶ್‌ ಮಾತನಾಡಿ, ಸಾರ್ವಜನಿಕರ ಪ್ರವಾಸಕ್ಕೆ ಕರೆದೊಯ್ಯುವ
ಟ್ರಾವೆಲ್‌ ಏಜೆನ್ಸಿಯವರೂ ಈ ಘಟನೆಯಿಂದ ಎಚ್ಚೆತ್ತು ಜಾಗೃತರಾಗಬೇಕು. ಹಣದಾಸೆಗಾಗಿ ಚಾಲಕರರನ್ನು ವಿಶ್ರಾಂತಿರಹಿತವಾಗಿ
ದುಡಿಸಿಕೊಳ್ಳುವುದನ್ನು ತಪ್ಪಿಸಬೇಕು. ದೂರದ ಪ್ರಯಾಣಕ್ಕೆ ವಾಹನ ಕಳುಹಿಸುವಾಗ ವಾಹನ ಸುಸ್ಥಿತಿ, ದಾಖಲೆ ಪತ್ರ ವ್ಯವಸ್ಥೆ ಎಲ್ಲವೂ ಸರಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಜೀವಿನಿ ಟ್ರಸ್ಟ್‌ನ ವಿನಯಚಂದ್ರ ಮಾತನಾಡಿ, ಹೆದ್ದಾರಿಗಳಲ್ಲಿ ಅನಗತ್ಯವಾಗಿ ವಾಹನ ನಿಲ್ಲಿಸುವುದನ್ನು ತಡೆಯಬೇಕು. 30 ಕಿಮೀಗೆ ಒಂದರಂತೆ ಪ್ರಾಧಿಕಾರದಿಂದ ಅಂಬ್ಯುಲೆನ್ಸ್‌ ವ್ಯವಸ್ಥೆ ಇಡಬೇಕು. ದುರಸ್ತಿ ಕಾಮಗಾರಿ ವಿಳಂಬ ಮಾಡಬಾರದು. ಸೂಚನಾ ಫಲಕಗಳು ಸರಿಯಾಗಿರುವಂತೆ ನೋಡಿಕೊಳ್ಳಬೇಕು. ಚಾಲಕರಿಗೆ ಸಂಚಾರಿ ನಿಯಮಗಳ ಬಗ್ಗೆ ಆಗಾಗ ತಿಳಿವಳಿಕೆ ಮೂಡಿಸುವ ಕೆಲಸ ಆಗಬೇಕು ಎಂದು
ಸರ್ಕಾರವನ್ನು ಒತ್ತಾಯಿಸಿದರು. ಅಪಘಾತದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡವರ ಕುಟುಂಬಸ್ಥರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

ಓದಿ : ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅರಶಿನ ಹಾಲಿನ ಕಷಾಯ ಉತ್ತಮ  

Advertisement

Udayavani is now on Telegram. Click here to join our channel and stay updated with the latest news.

Next