ಚನ್ನಗಿರಿ: ಸಾವಿತ್ರಿಬಾಯಿ ಫುಲೆ ದೇಶದಲ್ಲಿ ಮಹಿಳಾ ಶಿಕ್ಷಣದ ಕ್ರಾಂತಿ ಜ್ಯೋತಿಯಾಗಿದ್ದಾರೆ ಎಂದು ತಾಲೂಕು ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಸಿ. ಸಿದ್ದಪ್ಪ ಹೇಳಿದರು.
ಪಟ್ಟಣದ ರಾಮ ಮನೋಹರ ಲೋಹಿಯಾ ಭವನದಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿಯಿಂದ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಹಾಗೂ ಅಂರ್ತಜಾತಿ ವಿವಾಹಿತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದ ಇತಿಹಾಸದ ಪುಟದಲ್ಲಿ ಮಹಿಳಾ ಶಿಕ್ಷಣದ ಪರ ದನಿ ಎತ್ತಿದ ಮೊದಲಿಗರಾಗಿ ಸಾವಿತ್ರಿಬಾಯಿ ಹೆಸರು ಗಳಿಸಿದ್ದಾರೆ. ಹಿಂದೂ ಸ್ತ್ರೀಯೊಬ್ಬಳು ವಿದ್ಯೆ ಕಲಿತು ಶಿಕ್ಷಕಿಯಾಗಿ ಸಮಾಜ ಹಾಗೂ ಧರ್ಮವನ್ನು ಹಾಳು ಮಾಡುತ್ತಿದ್ದಾಳೆ ಎಂಬ ಆಪಾದನೆ ಹೊತ್ತುಕೊಂಡು ಎಷ್ಟೋ ಅಸಹಾಯಕ ಹೆಣ್ಣುಮಕ್ಕಳ ಬಾಳಿನಲ್ಲಿ ಜ್ಞಾನದ ದೀಪ ಬೆಳಗಿಸಿದ ಅಸಾಮಾನ್ಯ ಮಹಿಳೆಯಾಗಿದ್ದಾರೆ ಎಂದು ಸ್ಮರಿಸಿದರು.
ಅನೇಕ ಮಹಿಳೆಯರನ್ನು ದಾಸ್ಯದ ಸಂಕೋಲೆಯಿಂದ ಬಿಡಿಸಿ ಸ್ತ್ರೀ ಸ್ವಾತಂತ್ರದ ಕಹಳೆ ಊದಿದರು. ಮಹಿಳೆ ನಾಲ್ಕು ಗೋಡೆಗಳಿಂದ
ಹೊರಬಂದು ವಿದ್ಯೆ ಕಲಿಯುವುದು ಅಪರಾಧವಲ್ಲ ಎನ್ನುವುದನ್ನು ಗಟ್ಟಿ ದನಿಯಲ್ಲಿ ತಿಳಿಸಿದರು.
ಅವರು ನಡೆದ ಪ್ರತಿ ಹೆಜ್ಜೆಯೂ ಕಲ್ಲು ಮುಳ್ಳಿನ ಹಾದಿಯಾಗಿತ್ತು. ಅದೊಂದು ಮಹಾನ್ ಚರಿತ್ರೆ ಎಂದರು. ದಸಂಸ ರಾಜ್ಯ ಸಂಚಾಲಕ ಗುರುಮೂರ್ತಿ ಮಾತನಾಡಿ, ಜ್ಯೋತಿಬಾ ಫುಲೆ ಹಾದಿಯಲ್ಲೇ ನಡೆದ ಸಾವಿತ್ರಿಬಾಯಿ ಸಮಾಜಕ್ಕೆ ಪುಷ್ಪ ಸುಗಂಧ ನೀಡಿದರು. 19ನೇ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಬದಲಾವಣೆಯ ಬಿರುಗಾಳಿ ಬೀಸಲು ಕಾರಣವಾದರು ಎಂದು ತಿಳಿಸಿದರು.
ಜಾನಪದ ಕಲಾವಿದ ಯುಗಧರ್ಮ ರಾಮಣ್ಣ, ದಲಿತ ಸಂಘರ್ಷ ಸಮಿತಿ ಹಿರಿಯ ಮುಖಂಡ ಬುಳುಸಾಗರದ ಸಿದ್ದರಾಮಪ್ಪ, ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲ ಗಾಂಧಿನಗರ ಚಿತ್ರಲಿಂಗಪ್ಪ, ತಾಲೂಕು ಮಾದಿಗ ಸಮಾಜದ ಅಧ್ಯಕ್ಷ ಬಿ. ಮಂಜುನಾಥ್, ಪುರಸಭೆ ಸದಸ್ಯ ಗೌಸ್‌ಪೀರ್, ಪ್ರವೀಣ್ ಚಿಕ್ಕೋಡಿ, ವೀರೇಶ್ ನಾಯ್ಕ, ಲೀಲಮ್ಮ, ಶಿವರುದ್ರಮ್ಮ ಮತ್ತಿತರರು ಇದ್ದರು.
ಓದಿ :
ಮುಡಿಪು ಗುಡ್ಡೆಯಲ್ಲಿ ಅನ್ಯ ಕೋಮಿನ ಜೋಡಿ: ಹಿಡಿದು ಪೊಲೀಸರಿಗೊಪ್ಪಿಸಿದ ಸಂಘಟನೆ ಕಾರ್ಯಕರ್ತರು