Advertisement

ವದಂತಿ ನಂಬಿ ಶೆಡ್‌ ನಿರ್ಮಾಣಕ್ಕೆ ಯತ್ನ

02:56 PM Jan 31, 2021 | Team Udayavani |

ಚನ್ನಗಿರಿ: ವದಂತಿಗೆ ಬೇಸ್ತು ಬಿದ್ದ ಸಾರ್ವಜನಿಕರು ಅರಣ್ಯಕ್ಕೆ ಕಾಯ್ದಿರಿಸಿದ ಜಾಗದಲ್ಲಿ ಶೆಡ್‌ ನಿರ್ಮಾಣ ಮಾಡಿಕೊಳ್ಳಲು ಮುಂದಾದ ಘಟನೆ ತಾಲೂಕಿನ ಚಿಕ್ಕುಲಿಕೆರೆ ಸರ್ವೆ ನಂ. 91 ಹಾಗೂ ಲಕ್ಷ್ಮೀಸಾಗರ ಸರ್ವೆ ನಂ. 15ರಲ್ಲಿ ಶನಿವಾರ ನಡೆದಿದೆ.

Advertisement

ಪುರಸಭೆಯಿಂದ ನಿರ್ಮಾಣಗೊಂಡಿರುವ ಕಸ ತ್ಯಾಜ ವಿಲೇವಾರಿ ಘಟಕದ ಸಮೀಪದಲ್ಲಿ ಅರಣ್ಯ ಇಲಾಖೆಗೆ ಸಂಬಂ ಧಿಸಿದ ಸುಮಾರು 150 ಎಕರೆ ಸರ್ಕಾರಿ ಜಾಗವಿದೆ. ಈ ಜಾಗದಲ್ಲಿ ಶೆಡ್‌ಗಳನ್ನು ನಿರ್ಮಿಸಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ ಎಂಬ ವದಂತಿ ಹರಡಿತ್ತು. ಸಾವಿರಾರು ಜನರು ಗುಂಪು ಗುಂಪಾಗಿ ಸ್ಥಳಕ್ಕೆ ಆಗಮಿಸಿ ಶೆಡ್‌ಗಳನ್ನು ನಿರ್ಮಿಸಲು ಮುಂದಾದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ, ಅರಣ್ಯ ಇಲಾಖೆ ಮತ್ತು ಗೋಮಾಳಕ್ಕೆ ಮೀಸಲಿಟ್ಟಿರುವ ಪ್ರದೇಶವಾಗಿದೆ. ಇಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳುವಂತಿಲ್ಲ
ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರು.

ಕೆಲವರು ಜಾಗಕ್ಕೆ ಶೆಡ್‌ ಹಾಕಿಯೇ ತೀರುತ್ತೇವೆ ಎಂದು ಪಟ್ಟು ಹಿಡಿದಿದ್ದರು. ಯಾರು ಕೂಡ ಶೆಡ್‌ ನಿರ್ಮಾಣ ಮಾಡುವಂತಿಲ್ಲ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಾಕೀತು ಮಾಡಿದರಲ್ಲದೆ, ಜನರನ್ನು ಚದುರಿಸಿದರು.

ಸರ್ಕಾರದಿಂದ ಪುಕ್ಕಟೆ ಜಾಗ ಸಿಗುತ್ತದೆ ಎಂಬ ವದಂತಿ ಹರಡಿದ್ದರಿಂದ ಚನ್ನಗಿರಿ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಇಷ್ಟು ಜಾಗ
ನನ್ನದು ಎಂದು ಹಾರೆ, ಗುದ್ದಲಿ ತಂದು ಮರದ ಗೂಟಗಳನ್ನು ನೆಟ್ಟು ಅದಕ್ಕೆ ಹಳೆಯ ಸೀರೆಗಳನ್ನು ಸುತ್ತಲೂ ಕಟ್ಟಿಕೊಂಡು ಇಷ್ಟು ಜಾಗ ನನ್ನದು ಎಂದು ಬಿಂಬಿಸುತ್ತಿದ್ದರು. ಮತ್ತೂಂದೆಡೆ ಮನೆ ನಿರ್ಮಾಣ ಮಾಡಿಕೊಳ್ಳಲು ಜಾಗ ಸಿಗುತ್ತದೆ ಎಂದು ಮನೆಯಿಲ್ಲದ ಜನರು ತಮ್ಮ ಕೆಲಸ ಕಾರ್ಯ ಬಿಟ್ಟು ಕುಟುಂಬ ಸಮೇತರಾಗಿ ಬಂದಿದ್ದರು. ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಕಂಡು ಅಲ್ಲಿಂದ ಕಾಲ್ಕಿತ್ತರು.

ಪುರಸಭೆ ಸದಸ್ಯನಿಂದ ವದಂತಿ?: ಕಸ ವಿಲೇವಾರಿ ಘಟಕದ ಸುತ್ತಮುತ್ತ ಸರ್ಕಾರಿ ಜಾಗವಿದೆ, ಅಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಿ, ಯಾರೂ ಏನೂ ಮಾಡುವುದಿಲ್ಲ ಎಂದು ಪುರಸಭೆ ಸದಸ್ಯನೊಬ್ಬ ವದಂತಿ ಹಬ್ಬಿಸಿದ್ದಾನೆ ಎನ್ನಲಾಗಿದೆ. ಆದರೆ ಆತ ಯಾರೆಂಬುದು ಇದುವರೆಗೂ ತಿಳಿದುಬಂದಿಲ್ಲ ಎಂದು ಅ ಧಿಕಾರಿಗಳು ಹೇಳಿದ್ದಾರೆ.

Advertisement

ಓದಿ : “ಕಮಲ-ದಳ ಸಖ್ಯ ಒದ್ದು ಬಂದವರ ಜತೆ ಮದುವೆಯಾದಂತಿದೆ”

Advertisement

Udayavani is now on Telegram. Click here to join our channel and stay updated with the latest news.

Next