ದಾವಣಗೆರೆ: ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಫೆಬ್ರವರಿ 8 ಹಾಗೂ 9 ರಂದು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಮೂರನೇ ವರ್ಷದ ವಾಲ್ಮಕೀ ಜಾತ್ರೆ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಾತ್ರಾ ಸಮಿತಿ ಸಮಿತಿ ಸಂಚಾಲಕ ಹೊದಿಗೆರೆ ರಮೇಶ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 8ರಂದು ಸರ್ವಧರ್ಮ ಸಾಮೂಹಿಕ ವಿವಾಹ ನಡೆಯಲಿದೆ. ಇದರಲ್ಲಿ ವಿವಾಹವಾಗಲು
ಇಚ್ಛಿಸುವವರು ಫೆ. 6 ರೊಳಗೆ ಶ್ರೀಮಠದ ಕಚೇರಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಮೊ: 87922 90513 ಸಂಪರ್ಕಿಸಬೇಕು ಎಂದರು.
ಫೆ. 8 ರಂದು ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ, 8:30ಕ್ಕೆ ರಾಜನಹಳ್ಳಿ ಗ್ರಾಮದಿಂದ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಜರುಗಲಿದೆ. ಬೆಳಗ್ಗೆ 10 ಗಂಟೆಗೆ ಸಾಮೂಹಿಕ ವಿವಾಹ, ಮಧ್ಯಾಹ್ನ 12 ಗಂಟೆಗೆ ಮಾತೆ ಶಬರಿ ಮಹಿಳಾ ಜಾಗೃತಿ ಸಮಾವೇಶ, ಮಧ್ಯಾಹ್ನ 3 ಗಂಟೆಗೆ ವಾಲ್ಮೀಕಿ ನಾಯಕ ನೌಕರರ ಸಮಾವೇಶ, ಸಂಜೆ 5 ಗಂಟೆಗೆ ಸಮಾಜದ ಬಗ್ಗೆ ಚಿಂತನ-ಮಂಥನ ನಡೆಯಲಿದೆ. ಇದರಲ್ಲಿ ಮೀಸಲಾತಿ ಹೆಚ್ಚಳಕ್ಕಾಗಿ ಮಾಡುವ ಹೋರಾಟ, ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ಮಂದಿರ ನಿರ್ಮಾಣಕ್ಕೆ ಒತ್ತಾಯ ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಲಾಗುವುದು. ಅದೇ ದಿನ ರಾತ್ರಿ 7 ಗಂಟೆಯಿಂದ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 11 ಗಂಟೆಗೆ ಹಾಸನದ ಸಮಾಜದ ಕಲಾವಿದರಿಂದ “ಸಂಪೂರ್ಣ ರಾಮಾಯಣ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು. –
ಧಾರ್ಮಿಕ ಸಮಾವೇಶ: ಫೆ. 9 ರಂದು ಬೆಳಗ್ಗೆ ಧರ್ಮ ಗುರುಗಳಿಂದ ಧಾರ್ಮಿಕ ಸಭೆ, ಮಧ್ಯಾಹ್ನ 12 ಗಂಟೆಗೆ ವಾಲೀ¾ಕಿ ಜಾತ್ರಾ ಸಮಿತಿ ಅಧ್ಯಕ್ಷ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಜಾತ್ರಾ ಸಮಾವೇಶ ನಡೆಯಲಿದೆ.
ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ| ಅಶ್ವತ್ಥ ನಾರಾಯಣ, ಸಚಿವ ಬಿ. ಶ್ರೀರಾಮುಲು, ಕೆಪಿಸಿಸಿ ಅಧ್ಯಕ್ಷ ಡಿ.ಕೆ..ಶಿವಕುಮಾರ್, ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಎಂ.ಬಿ. ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಸ್.ಎ. ರವೀಂದ್ರನಾಥ್, ಪ್ರಮುಖರಾದ ಎಸ್.ಎಸ್. ಮಲ್ಲಿಕಾರ್ಜುನ್, ಎಚ್.ಡಿ. ರೇವಣ್ಣ, ಮಧು ಬಂಗಾರಪ್ಪ, ಯತೀಂದ್ರ ಸಿದ್ದರಾಮಯ್ಯ, ಚಲನಚಿತ್ರ ನಟ ಸುದೀಪ್, ಶಶಿಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು ಎಂದರು.
ಜಾತ್ರಾ ಸಮಿತಿಯ ಪ್ರೊ| ಎ.ಬಿ. ರಾಮಚಂದ್ರಪ್ಪ, ಸಮಾಜದ ಪ್ರಮುಖರಾದ ಎನ್. ಲೋಕೇಶ್ವರ್, ಜಿಗಳಿ ಪ್ರಕಾಶ್, ವಿನಾಯಕ ಪೈಲ್ವಾನ್, ರಾಘು ದೊಡ್ಡಮನಿ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.
ಓದಿ :
ಯತ್ನಾಳ್ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳಲ್ಲ