Advertisement

ಕೆರೆಬಿಳಚಿ ಪ್ರೌಢಶಾಲೆಯಲ್ಲಿ ವಿಜ್ಙಾನ ರಂಗೋಲಿ!

03:26 PM Jan 29, 2021 | Team Udayavani |

ಚನ್ನಗಿರಿ: ಪ್ರೌಢಶಾಲಾ ಹಂತದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಖಾಸಗಿ ಶಾಲೆಗಳು ಇನ್ನಿಲ್ಲದ ಕಸರತ್ತು ನಡೆಸುವುದು ಸಾಮಾನ್ಯ. ಆದರೆ ಇಲ್ಲೊಂದು ಸರ್ಕಾರಿ ಶಾಲೆಯಲ್ಲಿ ಪ್ರೌಢಶಾಲಾ ಮಕ್ಕಳಿಗೆ ಪಠ್ಯದಲ್ಲಿನ ವಿಷಯವನ್ನು ಮನದಟ್ಟು ಮಾಡಲು ರಂಗೋಲಿ ಪಾಠ ಮಾಡಲಾಗುತ್ತಿದೆ.ಪ್ರೌಢಶಾಲಾ ಶಿಕ್ಷಕಿಯೊಬ್ಬರು ಈ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

ತಾಲೂಕಿನ ಕೆರೆಬಿಳಚಿ ಗ್ರಾಮದ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಈ ರಂಗೋಲಿ ಪಾಠ ನಡೆಯುತ್ತಿದ್ದು, ರಂಗೋಲಿ ಬಿಡಿಸುವ ಮೂಲಕ
ಮಕ್ಕಳಿಗೆ ವಿಷಯದ ಮನದಟ್ಟು ಮಾಡಿ ಅವರ ಕ್ರಿಯಾಶೀಲತೆ ಹೆಚ್ಚಿಸುವ ವಿನೂತನ ಕಾರ್ಯ ಮಾಡಲಾಗುತ್ತಿದೆ.

ಏನಿದು ರಂಗೋಲಿ ಪಾಠ: ರಂಗೋಲಿಯನ್ನು ಮನೆ, ದೇವಾಲಯಗಳ ಎದುರು ಬಿಡಿಸೋದು ಸಾಮಾನ್ಯ. ಶಾಲೆಗಳಲ್ಲೂ ಸಹ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಮುಂತಾದ ರಾಷ್ಟ್ರೀಯ ಹಬ್ಬಗಳಲ್ಲಿ ಬಿಡಿಸಲಾಗುತ್ತದೆ. ಆದರೆ ಇಲ್ಲಿನ ಶಿಕ್ಷಕಿ ವಜೀಹಾ ಖಾನಂ ಈ ರಂಗೋಲಿ ಕಲೆಯನ್ನು ಪಾಠಕ್ಕೂ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ವಿಜ್ಞಾನ ವಿಷಯದ ಪಠ್ಯವನ್ನು ಮಕ್ಕಳಿಗೆ ಮನದಟ್ಟು ಮಾಡಲು ಹಾಗೂ ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಿಸಲು ರಂಗೋಲಿ ಬಿಡಿಸಿ ಬೋಧಿಸಲಾಗುತ್ತದೆ.

ಶಾಲಾ ವರಾಂಡದಲ್ಲಿ ವಿಜ್ಞಾನ ಮಾದರಿ ರಂಗೋಲಿ: ಶಿಕ್ಷಕಿ ತಮ್ಮ ಸ್ವಂತ ಖರ್ಚಿನಲ್ಲಿ ರಂಗೋಲಿ ಪುಡಿ ಇದಕ್ಕೆ ಬೇಕಾದ ಬಣ್ಣ ಎಲ್ಲವನ್ನೂ ತಂದು ಮಕ್ಕಳಿಂದಲೇ ರಂಗೋಲಿ ಹಾಕಿಸುತ್ತಾರೆ. ಪ್ರತಿನಿತ್ಯ ಶಾಲೆಯ ಮುಂಭಾಗದ ಕಾರಿಡಾರ್‌ ಮೇಲೆ ವಿಜ್ಞಾನ ವಿಷಯಕ್ಕೆ ಸಂಬಂ ಧಿಸಿದ
ಚಿತ್ರಗಳನ್ನು ಮಕ್ಕಳೇ ಬಿಡಿಸಿ ಅದಕ್ಕೆ ಬಣ್ಣ ತುಂಬುತ್ತಾರೆ. ನಂತರ ಇದಕ್ಕೆ ಸಂಬಂಧಿಸಿದ ಪೂರಕ ಮಾಹಿತಿಯನ್ನು ಶಿಕ್ಷಕಿಯರು ಬೋಧಿಸುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಪಾಠ ಬಹುಬೇಗ ಮನದಟ್ಟಾಗುತ್ತದೆ. ಅಲ್ಲದೆ ಚಿತ್ರ ಬಿಡಿಸುತ್ತ ಪಾಠ ಕೇಳಿದ್ದರಿಂದ ಅದು ಮಕ್ಕಳಲ್ಲಿ ಸದಾಕಾಲ ನೆನಪಿನಲ್ಲಿ ಉಳಿಯಲಿದೆ.
ಈ ಪ್ರೌಢಶಾಲೆಯ ಶಿಕ್ಷಕರ ಕಾರ್ಯವೈಖರಿಯಿಂದ 117 ಮಕ್ಕಳು ಈ ಬಾರಿ ದಾಖಲಾಗಿದ್ದಾರೆ. ಈ ಸರ್ಕಾರಿ ಪ್ರೌಢಶಾಲೆಯಲ್ಲಿ 8 ರಿಂದ 10ನೇ ತರಗತಿವರೆಗೆ ಒಟ್ಟು 560 ವಿದ್ಯಾರ್ಥಿಗಳಿದ್ದು, ಅವರಿಗೆ ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ನೀಡಲಾಗಿದ್ದು, ಜಿಲ್ಲೆಯಲ್ಲಿಯೇ ಮಾದರಿ ಶಾಲೆ ಎನ್ನಿಸಿಕೊಂಡಿದೆ.

ಶಶೀಂದ್ರ ಸಿ.ಎಸ್‌.

Advertisement

ಓದಿ : ಅಕ್ರಮ ಕಸಾಯಿಖಾನೆ ತೆರವಿಗೆ ಆಗ್ರಹ

 

Advertisement

Udayavani is now on Telegram. Click here to join our channel and stay updated with the latest news.

Next