ಹೊನ್ನಾಳಿ: ಕೆರೆಯಲ್ಲಿ ನೀರು ಕುಡಿಯಲು ತೆರಳಿದ ಸಂದರ್ಭದಲ್ಲಿ ಎರಡು ಎತ್ತುಗಳು ಜಲಸಮಾಧಿ ಯಾಗಿರುವ ದುರ್ಘಟನೆ ತಾಲೂಕಿನ ಕತ್ತಿಗೆ ಗ್ರಾಮದ ಅಗಸಿ ಬಾಗಿಲಿನ ಸಮೀಪದ ಕೆರೆಯಲ್ಲಿ ಬುಧವಾರ ಸಂಭವಿಸಿದೆ. ಕತ್ತಿಗೆ ಗ್ರಾಮದ ಎರೆಹಳ್ಳೇರ ಮಹಾಲಿಂಗಪ್ಪ ಎಂಬುವವರಿಗೆ ಎತ್ತುಗಳು ಸೇರಿದವಾಗಿವೆ. ಎತ್ತುಗಳ ಬೆಲೆ 1.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಜಮೀನಿನಲ್ಲಿ ಕೃಷಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುವ ವೇಳೆ ದಾರಿಯಲ್ಲಿ ಸಿಗುವ ಕೆರೆಯಲ್ಲಿ ನೀರು ಕುಡಿಯಲು ಎತ್ತುಗಳು ತೆರಳಿವೆ. ಬಿಸಿಲ ಬೇಗೆಯಿಂದ ಬಳಲಿದ್ದ ಎತ್ತುಗಳು ಕೆರೆಯ
ನೀರಿನಲ್ಲಿ ಈಜುತ್ತಾ, ಈಜುತ್ತಾ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಗೊಂಡಿರುವ ಕೆರೆಯ ಮಧ್ಯಭಾಗಕ್ಕೆ ತೆರಳಿವೆ.
ಆ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ನೀರು ಸೇವಿಸಿ, ಈಜಲು ಆಗದಂಥ ಸ್ಥಿತಿ ತಲುಪಿವೆ. ಬಹಳ ಹೊತ್ತಾದರೂ ಎತ್ತುಗಳು ನೀರಿನಿಂದ ಹೊರಗೆ ಬಾರದಿದ್ದದನ್ನು ಗಮನಿಸಿದ ಗ್ರಾಮದ ಜನರು ಹಾಗೂ ಎತ್ತುಗಳ ಮಾಲೀಕ ಸಂರಕ್ಷಿಸಲು ಎಷ್ಟೇ ಪ್ರಯತ್ನಿಸಿದರೂ ಎತ್ತುಗಳು ಬದುಕುಳಿಯಲಿಲ್ಲ. ಹೊನ್ನಾಳಿ ಠಾಣೆ ಸಿಬ್ಬಂದಿ ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮಾದೇನಹಳ್ಳಿ ಪಶು ಚಿಕಿತ್ಸಾಲಯದ ಪ್ರಭಾರ ಪಶು ವೈದ್ಯ ಡಾ.ಹರೀಶ್ ಎತ್ತುಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ : ಹೊಸಬರ ‘ಪ್ರೇಮನ್’ ಟೀಸರ್ ಔಟ್