Advertisement

2ಜಿ ಇಥೆನಾಲ್‌ ಘಟಕ ಶೀಘ್ರ ಆರಂಭಿಸಿ

11:28 AM Dec 19, 2019 | Naveen |

ದಾವಣಗೆರೆ: ಹರಿಹರ ತಾಲೂಕಿನ ಹನಗವಾಡಿಯಲ್ಲಿ ಈಗಾಗಲೇ ನೀಡಿರುವ ಪ್ರದೇಶದಲ್ಲಿ ಭಾರತದ ಅತೀ ದೊಡ್ಡ 2ಜಿ ಇಥೆನಾಲ್‌ ಉತ್ಪಾದನಾ ಘಟಕಕ್ಕೆ ಇನ್ನು 3 ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಬೇಕು. ಆ ಕಾರ್ಯಕ್ಕೆ ಬಾಕಿ ಇರುವ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಕಂಪನಿಯವರಿಗೆ ಸಂಸದ ಜಿ.ಎಂ. ಸಿದ್ದೇಶ್ವರ್‌ ಸೂಚಿಸಿದ್ದಾರೆ.

Advertisement

ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ನ‌ವರು ಹನಗವಾಡಿ ಗ್ರಾಮದ ಬಳಿ 60 ಕೆಎಲ್‌ಪಿಡಿ 2ಜಿ ಇಥೆನಾಲ್‌ ಉತ್ಪಾದನಾ ಘಟಕ ಸ್ಥಾಪಿಸುವ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಶಂಕುಸ್ಥಾಪನಾ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸೋಣ. ಸಾಧ್ಯವಾದರೆ ಪ್ರಧಾನಿ ಮೋದಿಯವರನ್ನು ಇಲ್ಲದಿದ್ದರೆ ಕೇಂದ್ರದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ಆಹ್ವಾನಿಸೋಣ ಎಂದು ತಿಳಿಸಿದರು.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ 2ಜಿ ಇಥನಾಲ್‌ ಕೇಂದ್ರ ಸ್ಥಾಪಿಸಲು ಅವಕಾಶ ದೊರೆತಿದೆ. ಕೇಂದ್ರ ಆರಂಭಿಸಲು ಅವಶ್ಯವಾದ ತಯಾರಿ ಮಾಡಿಕೊಂಡು ಆದಷ್ಟು ಬೇಗ ಕಾರ್ಯೋನ್ಮುಖರಾಗಿ 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಹೇಳಿದರು.

ಆರಂಭದಲ್ಲಿ ಮಾತನಾಡಿದ ಎಂಆರ್‌ಪಿಎಲ್‌ ಪ್ರಧಾನ ವ್ಯವಸ್ಥಾಪಕ ಗಿರೀಶ್‌, ಈ ರೀತಿಯ ಘಟಕವು ದಕ್ಷಿಣ ಭಾರತದಲ್ಲಿ ಎಲ್ಲಿಯೂ ಇಲ್ಲ. 1200 ಕೋಟಿ ರೂ. ವೆಚ್ಚದಲ್ಲಿ ಘಟಕ ಸ್ಥಾಪನೆಯಾಗಲಿದೆ. ಜನವರಿಯಲ್ಲಿ ಬಜೆಟ್‌ಗೆ ಅನುಮೋದನೆ ಸಿಗುವ ನಿರೀಕ್ಷೆಯಿದೆ. 2023ರ ಮಾರ್ಚ್‌ 31ರ ವೇಳೆ ಘಟಕವು ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ತಿಳಿಸಿದರು.

ಭಾರತವು ಪೆಟ್ರೋಲ್‌ಗೆ ಬೇರೆ ದೇಶಗಳ ಮೇಲೆ ಅವಲಂಬಿಸಿರುವುದನ್ನ ಕಡಿಮೆ ಮಾಡಲು 2ಜಿ ಇಥೆನಾಲ್‌ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ಸಂಸ್ಥೆಯು ಎಲ್‌ಪಿಜಿ, ಡಿಸೇಲ್‌, ಪೆಟ್ರೋಲ್‌, ನೆಪ್ತಾ, ಬಿಲಿಯಮ್‌ ಆಯಿಲ್‌ಗ‌ಳನ್ನು ತಯಾರಿಸುತ್ತಿದ್ದು, ಕರ್ನಾಟಕ ಸರ್ಕಾರಕ್ಕೆ 1000 ಕೋಟಿ ರೂ. ಹಾಗೂ ಭಾರತ ಸರ್ಕಾರಕ್ಕೆ 11,000 ಕೋಟಿ ರೂ. ತೆರಿಗೆ ನೀಡುತ್ತಿದೆ ಎಂದು ತಿಳಿಸಿದರು.

Advertisement

2ಜಿ ತಂತ್ರಜ್ಞಾನದಲ್ಲಿ ಇಂಧನ ತಯಾರಿಕೆಗಾಗಿ ಕೃಷಿ ತ್ಯಾಜ್ಯ ವಸ್ತುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಮೆಕ್ಕೆಜೋಳದ ದಂಟು, ಬೆಂಡು, ಭತ್ತದ ಹುಲ್ಲು, ಹತ್ತಿಯ ಕಡ್ಡಿಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದಾಗ, ಸಂಸದರು ಬೆಳೆಯ ತ್ಯಾಜ್ಯಗಳನ್ನು ನೇರವಾಗಿ ರೈತರಿಂದ ಖರೀದಿಸುತ್ತೀರಾ ? ಎಂದು ಪ್ರಶ್ನಿಸಿದರು. ಅವರು, ಕೆಲವು ಏಜೆನ್ಸಿಗಳನ್ನು ಗುರುತಿಸಿದ್ದು, ರೈತರಿಂದ ಖರೀದಿಸಿ ತಮಗೆ ನೀಡುತ್ತಾರೆ ಎಂದು ಮಾಹಿತಿ ನೀಡಿದರು.

ಘಟಕ ದಿನಕ್ಕೆ 60,000 ಲೀಟರ್‌ ಆಯಿಲ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಇದರ ತಯಾರಿಕೆಗೆ ಬೇಕಾಗುವ 250 ರಿಂದ 300 ಟನ್‌ ಪ್ರಮಾಣದ ಕಚ್ಚಾ ಪದಾರ್ಥಗಳನ್ನು ರೈತರಿಂದ ಸಂಗ್ರಹಿಸಲಾಗುವುದು. ನೀರಿಗಾಗಿ ಶಾಂತಿಸಾಗರದ ಕೆರೆ ಗುರುತಿಸಿದ್ದು, ಸರ್ಕಾರದಿಂದ ಅಧಿಕೃತ ಆದೇಶ ಬಂದ ನಂತರ ತುಂಗಭದ್ರ ನದಿ ನೀರು ಬಳಸುತ್ತೇವೆ ಎಂದಾಗ ಪ್ರತಿಕ್ರಿಯಿಸಿದ ಸಂಸದ ಸಿದ್ದೇಶ್ವರ್‌, ಶಾಂತಿಸಾಗರದ ನೀರು ಕುಡಿಯಲು ಬಳಸಲಾಗುತ್ತದೆ. ನೀವು ಆ ನೀರು ಬೇಡ. ಬದಲಾಗಿ ತುಂಗಭದ್ರ ನದಿ ನೀರನ್ನು ಬಳಸುವಂತೆ ಸಲಹೆ ನೀಡಿದರು.

2ಜಿ ಇಥೆನಾಲ್‌ ಕಟ್ಟಡ ಕಾಮಗಾರಿಗೆ ಕೇಂದ್ರ ಸರ್ಕಾರದ ಪ್ರಧಾನ್‌ ಮಂತ್ರಿ ಜೀವನ್‌ ಯೋಜನೆಯಲ್ಲಿ ಶೇ.20ರಷ್ಟು ಅನುದಾನ ನೀಡುತ್ತಾರೆ. ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಇಲ್ಲ, ರಾಜ್ಯ ಸರ್ಕಾರದ ಅನುದಾನಕ್ಕೆ ಅರ್ಜಿ ಸಲ್ಲಿಸುತ್ತೇವೆ ಎಂದಾಗ ಸಂಸದರು ರಾಜ್ಯದಿಂದ ಭೂಮಿ, ನೀರು, ವಿದ್ಯುತ್‌ ನೀಡುತ್ತಿದ್ದೇವೆ. ಅನುದಾನ ನೀಡಲು ಕಷ್ಟ ಆಗುತ್ತದೆ ಎಂದರು.

ಸರ್ಕಾರ 2 ವರ್ಷಗಳ ಹಿಂದೆಯೇ ನಿಮಗೆ ಭೂಮಿ ನೀಡಿದೆ. ಆದರೆ ನೀವು ಇನ್ನೂ ಕಟ್ಟಡ ಕಾಮಗಾರಿ ಏಕೆ ಆರಂಭಿಸಿಲ್ಲ ಎಂದು ಪ್ರಶ್ನಿಸಿದಾಗ, ಸಂಸ್ಥೆಯ ಮ್ಯಾನೇಜರ್‌ ಪರಿಸರ ಮಾಲಿನ್ಯ ಸಂಬಂಧದ ಸರ್ಟಿಫಿಕೇಟ್‌ ಸಿಕ್ಕ ಕೂಡಲೇ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.

ಸಂಸದರು, 2020ರ ಫೆಬ್ರವರಿ ಒಳಗೆ ಸಂಬಂಧಿಸಿದ ಎಲ್ಲಾ ಸರ್ಟಿಫಿಕೇಟ್‌ಗಳನ್ನು ಪಡೆದುಕೊಂಡು ಕಾಮಗಾರಿ ಆರಂಭಿಸಬೇಕು. 2023ರ ಏಪ್ರಿಲ್‌ ಅಂತ್ಯದ ವೇಳೆಗೆ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಬೇಕೆಂದು ಸೂಚಿಸಿದರಲ್ಲದೆ, ಕಟ್ಟಡ ಕಾಮಗಾರಿಗೆ ಈ ವ್ಯಾಪ್ತಿಯಲ್ಲಿನ ಕುಟುಂಬಗಳನ್ನು ಗುರುತಿಸಲಾಗಿದ್ದು, ಅವರನ್ನು ತೆಗೆದುಕೊಳ್ಳಿ. ಸಂಸ್ಥೆ ಕೆಲಸ ಆರಂಭಿಸಿದ ನಂತರ ಉದ್ಯೋಗದಲ್ಲಿ ದಾವಣಗೆರೆಯ ಸ್ಥಳೀಯ ಜನರಿಗೆ ಆದ್ಯತೆ ನೀಡಬೇಕು. ಅರ್ಹತೆ ಅನುಗುಣವಾಗಿ ಕೆಲಸ ನೀಡಿ. ವಾಚಮ್ಯಾನ್‌ನಿಂದ ಹಿಡಿದು ತಂತ್ರಜ್ಞಾನದ ಕೆಲಸ ಮಾಡುವ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪ್ರಭಾರ ಅಪರ ಜಿಲ್ಲಾ ಧಿಕಾರಿ ನಜ್ಮಾ.ಜಿ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ಎಂ.ಆರ್‌.ಪಿ.ಎಲ್‌. ಸಂಸ್ಥೆಯ ಇಂಡಿಪೆಂಡೆಂಟ್‌ ಡೈರೆಕ್ಟರ್‌ ಮಂಜುಳಾ, ಹರಿಹರ ತಹಶೀಲ್ದಾರ್‌ ರಾಮಚಂದ್ರಪ್ಪ, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳು, ಎಂಆರ್‌ಪಿಎಲ್‌ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ಥಳೀಯರಿಗೆ ಆದ್ಯತೆ ಕೊಡಿ ಕಟ್ಟಡ ಕಾಮಗಾರಿಗೆ ಈ ವ್ಯಾಪ್ತಿಯಲ್ಲಿನ ಕುಟುಂಬಗಳನ್ನು ಗುರುತಿಸಲಾಗಿದ್ದು, ಅವರನ್ನು ತೆಗೆದುಕೊಳ್ಳಿ. ಸಂಸ್ಥೆ ಕೆಲಸ ಆರಂಭಿಸಿದ ನಂತರ ಉದ್ಯೋಗದಲ್ಲಿ ದಾವಣಗೆರೆಯ ಸ್ಥಳೀಯ ಜನರಿಗೆ ಆದ್ಯತೆ ನೀಡಬೇಕು. ಅರ್ಹತೆ ಅನುಗುಣವಾಗಿ ಕೆಲಸ ನೀಡಿ. ವಾಚಮ್ಯಾನ್‌ ನಿಂದ ಹಿಡಿದು ತಂತ್ರಜ್ಞಾನದ ಕೆಲಸ ಮಾಡುವ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು.
.ಜಿ.ಎಂ. ಸಿದ್ದೇಶ್ವರ್‌, ಸಂಸದರು.

Advertisement

Udayavani is now on Telegram. Click here to join our channel and stay updated with the latest news.

Next