Advertisement

ಸಂಕಷ್ಟದಲ್ಲಿರುವವರಿಗೆ ನೆರವಾಗಿ : ಅರುಣ್‌ಕುಮಾರ್‌

09:57 PM Jun 14, 2021 | Team Udayavani |

ದಾವಣಗೆರೆ: ಸಂಕಷ್ಟದಲ್ಲಿನ ಜನರಿಗೆ ನೆರವಾಗುವುದೇ ಮೊದಲ ಆದ್ಯತೆ ಆಗಲಿ ನ್ಯಾಯವಾದಿ ಎಲ್‌.ಎಚ್‌. ಅರುಣ್‌ ಕುಮಾರ್‌ ಹೇಳಿದರು. ಭಾನುವಾರ ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿಯಿಂದ ಬಂಬೂ ಬಜಾರ್‌, ಬಾಷಾ ನಗರ, ಶಿವನಗರ, ಎಚ್‌ಕೆಜಿಎನ್‌ ನಗರದಲ್ಲಿ ಸ್ಲಂ ನಿವಾಸಿಗಳಿಗೆ ದಿನಸಿ ಕಿಟ್‌ ವಿತರಿಸಿ ಅವರು ಮಾತನಾಡಿದರು.

Advertisement

ಕೊರೊನಾ, ಲಾಕ್‌ ಡೌನ್‌ನಿಂದ ಸಂಕಷ್ಟದಲ್ಲಿರುವ ಇರುವವರಿಗೆ ನೆರವಾಗುವುದು ಇಂದಿನ ದಿನಮಾನಗಳಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳ ಮೊದಲ ಆದ್ಯತೆ ಆಗಬೇಕು. ಉಳ್ಳವರು ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು. ಮಹಾಮಾರಿ ಕೊರೊನಾದಂತಹ ಸಾಂಕ್ರಾಮಿಕ ರೋಗದಿಂದ ಕಳೆದ ಎರಡು ವರ್ಷದಿಂದ ಬಡವರು, ಶ್ರಮಿಕರು ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ಲಾಕ್‌ಡೌನ್‌ ಪರಿಣಾಮ ಮನೆಯಿಂದ ಹೊರಗೆ ಬರುವಂತಿಲ್ಲ. ಹಾಗಾಗಿ ಅಂದೇ ದುಡಿದು ಜೀವನ ನಡೆಸುವಂತಹವರಿಗೆ ಕೆಲಸ ಇಲ್ಲದೆ ದೈನಂದಿನ ಜೀವನ ನಿರ್ವಹಿಸುವುದೇ ತುಂಬಾ ದುಸ್ತರವಾಗಿದೆ. ದಿನಗೂಲಿ ಕಾರ್ಮಿಕರು, ಕೃಷಿಕರು, ಸ್ಲಂ ನಿವಾಸಿಗಳು ಅತ್ಯಂತ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಅಂತಹ ಜನರ ನೆರವಿಗೆ ಬರುವುದು ಸಂಘ-ಸಂಸ್ಥೆಗಳ ಮೊದಲ ಜವಾಬ್ದಾರಿ ಆಗಬೇಕು ಎಂದು ತಿಳಿಸಿದರು.

ಸ್ಲಂ ಜನಾಂದೋಲನ ಸಂಘಟನೆ ಕಳೆದ 15 ವರ್ಷಗಳಿಂ ಕೊಳಗೇರಿ ಪ್ರದೇಶಗಳಲ್ಲಿನ ಬಡಜನರ ಬದುಕು, ವಸತಿ, ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ನಿರಂತರವಾದ ಹೋರಾಟ ಮಾಡುತ್ತಾ ಮೂಲಭೂತ ಹಕ್ಕುಗಳನ್ನು ಕೊಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸ್ಲಂ ಜನರ ಪರವಾದ ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರಕುವಂತೆ ಶ್ರಮಿಸುತ್ತಿದೆ. ಹೋರಾಟದ ಜೊತೆಗೆ ಕೊರೊನಾ, ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಸ್ಲಂ ಜನರ ಬದುಕಿಗೆ ಅಗತ್ಯವಾದ ದಿನಸಿ ಕಿಟ್‌ಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಲಂ ಜನಾಂದೋಲನ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ ಮಾತನಾಡಿ, ಸ್ಲಂ ಜನಾಂದೋಲನ ಸಂಘಟನೆ ದಾವಣಗೆರೆಯಲ್ಲಿ ಸ್ಲಂ ಜನರ ಮೂಲಭೂತ ಹಕ್ಕುಗಳ ಪರವಾಗಿ ನಿರಂತರವಾಗಿ ಹೋರಾಟ ಮಾಡುತ್ತಿದೆ. ಜನಪರ ಕಾರ್ಯಕ್ರಮ, ವಿಚಾರ ಸಂಕಿರಣಗಳನ್ನು ಏರ್ಪಡಿಸುವ ಮೂಲಕ ಅರಿವು ಮೂಡಿಸುವ ಕೆಲಸ ಮಾಡಿದೆ. ಸ್ಲಂ ಜನರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಸಂಘಟನೆ ಅವಶ್ಯಕವಾದ ದಿನಸಿ ಕಿಟ್‌ಗಳನ್ನು ಅಜಿತ್‌ಪ್ರೇಮ್‌ಜೀ ಫೌಂಡೇಷನ್‌ ಸಹಕಾರದೊಂದಿಗೆ ದಿನಸಿ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ದಿನಸಿ ಕಿಟ್‌ ವಿತರಣಾ ಕಾರ್ಯ ಮುಂದುವರೆಯಲಿದೆ ಎಂದರು.

ಸ್ಲಂ ಜನಾಂದೋಲನ ಸಮಿತಿ ಜಿಲ್ಲಾಧ್ಯಕ್ಷ ಶಬ್ಬೀರ್‌ ಸಾಬ್‌, ಅಧ್ಯಕ್ಷೆ ಶಾಹೀನಾ ಬಾನು, ಪದಾಧಿ ಕಾರಿಗಳಾದ ಸಾವಿತ್ರಮ್ಮ, ಬಾಲಪ್ಪ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next