Advertisement

ಕುಸುಮ ರೋಗಿಗಳಿಗೂ ಕೊರೊನಾ ಲಸಿಕೆ

08:59 PM Jun 13, 2021 | Team Udayavani |

„ಎಚ್‌.ಕೆ. ನಟರಾಜ

Advertisement

ದಾವಣಗೆರೆ: ಸಂಪೂರ್ಣವಾಗಿ ಗುಣಪಡಿಸಲಾಗದ ಹಾಗೂ ವಿರಳ ರೋಗಗಳಲ್ಲೊಂದಾದ ಕುಸುಮ (ಹಿಮೋಫಿಲಿಯಾ) ರೋಗಿಗಳಿಗೆ ಆದ್ಯತಾ ಗುಂಪಿನಡಿ ಕೋವಿಡ್‌-19 ಲಸಿಕೆ ನೀಡಲು ಸರ್ಕಾರ ಸೂಚಿಸಿದೆ. ಈ ವಿಶೇಷ ಫಲಾನುಭವಿಗಳಿಗೆ ಅತಿ ಜಾಗರೂಕತೆಯಿಂದ ಹಾಗೂ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಲಸಿಕಾರಣ ನಡೆಸಲು ರಾಜ್ಯಾದ್ಯಂತ ತಯಾರಿ ನಡೆದಿದೆ.

ಕುಸುಮ ರೋಗಿಗಳನ್ನು ಲಸಿಕಾ ಕೇಂದ್ರಕ್ಕೆ ಹೇಗೆ ಕರೆಸಿಕೊಳ್ಳಬೇಕು, ಅವರಿಗಾಗಿ ಎಷ್ಟು ಗೇಜ್‌ನ ಸೂಜಿ ಬಳಸಬೇಕು ಸೇರಿದಂತೆ ಏನೆಲ್ಲ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು, ಲಸಿಕೆ ನೀಡುವ ಸಂದರ್ಭ ಯಾರೆಲ್ಲ ತಜ್ಞರು ಸ್ಥಳದಲ್ಲಿರಬೇಕು, ಹೇಗೆ ಲಸಿಕೆ ನೀಡಬೇಕು ಹಾಗೂ ಹಿಮೋಫಿಲಿಯಾ ರೋಗಿಗಳ ಅನುಕೂಲಕ್ಕಾಗಿ ಶ್ರಮಿಸುತ್ತಿರುವ ಸಂಘಟನೆಗಳ ಸಹಕಾರವನ್ನು ಯಾವ ರೀತಿ ಪಡೆಯಬೇಕು ಎಂಬುದರ ಬಗ್ಗೆ ಯೋಜನೆ ರೂಪಿಸಲು ಚಿಂತನೆ ನಡೆದಿದೆ.

ಈ ಬಗ್ಗೆ ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಜಿಲ್ಲಾಡಳಿತಗಳಿಗೆ ನಿರ್ದೇಶನವನ್ನೂ ನೀಡಿದ್ದು, ಅದರನ್ವಯ ಲಸಿಕಾರಣಕ್ಕೆ ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಆರೋಗ್ಯ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ 2445 ಕುಸುಮ ರೋಗಿಗಳಿದ್ದಾರೆ. ಇವರಲ್ಲಿ 763 ಮಂದಿ 17 ವರ್ಷದೊಳಗಿನವರಿದ್ದಾರೆ. 1055 ಜನ 18-45 ವರ್ಷದೊಳಗಿನವರಿದ್ದಾರೆ. 246 ಜನ 46 ವರ್ಷ ಮೇಲ್ಪಟ್ಟವರಾಗಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 565 ಕುಸುಮ ರೋಗಿಗಳಿದ್ದಾರೆ. ಇನ್ನು ಮೈಸೂರು ಜಿಲ್ಲೆಯಲ್ಲಿ 157, ಬಳ್ಳಾರಿ ಜಿಲ್ಲೆಯಲ್ಲಿ 104, ದಾವಣಗೆರೆ ಜಿಲ್ಲೆಯಲ್ಲಿ 128, ಧಾರವಾಡ ಜಿಲ್ಲೆಯಲ್ಲಿ 129, ಹಾವೇರಿ ಜಿಲ್ಲೆಯಲ್ಲಿ 101 ಕುಸುಮ ರೋಗಿಗಳಿದ್ದು, ಉಳಿದ ಜಿಲ್ಲೆಗಳಲ್ಲಿ ಕುಸುಮ ರೋಗಿಗಳ ಸಂಖ್ಯೆ 100ಕ್ಕಿಂತ ಕಡಿಮೆ ಇದೆ. ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸೂಚನೆ ನೀಡಿದ್ದರಿಂದ ಪ್ರಸ್ತುತ 1301 ಕುಸುಮರೋಗಿಗಳಿಗೆ ಕೋವಿಡ್‌ ಲಸಿಕೆ ನೀಡಬೇಕಾಗಿದೆ.

Advertisement

ವಿಶೇಷ ಕ್ರಮ: ಕುಸುಮ ರೋಗಿಗಳಿಗೆ ಕೋವಿಡ್‌ -19 ಲಸಿಕೆಯನ್ನು ಜಿಲ್ಲಾಸ್ಪತ್ರೆಗಳಲ್ಲಿರುವ ರಕ್ತಸ್ರಾವ ತಡೆಗಟ್ಟುವಿಕೆಯ ಡೇ ಕೇರ್‌ ಕೇಂದ್ರ(ಹಿಮೋμಲಿಯಾ ಮತ್ತು ಹಿಮೋಕೋಯಾಗುಲೋಪತಿ ಸಂಯೋಜಿತ ಕೇಂದ್ರ -ಐ.ಸಿ.ಎಚ್‌.ಎಚ್‌)ಗಳಲ್ಲಿ ಪ್ರತ್ಯೇಕವಾಗಿ ನೀಡಲು ವ್ಯವಸ್ಥೆ ಮಾಡಬೇಕು. ರಕ್ತ ಕೋಶಾಧಿಕಾರಿ ಮೇಲ್ವಿಚಾರಣೆಯಲ್ಲಿ ಲಸಿಕಾರಣ ನಡೆಸಬೇಕು. ಹಿಮೋಫಿಲಿಯಾ ಮತ್ತು ಹಿಮೋಕೋಯಾಗುಲೋಪತಿ ಸಂಯೋಜಿತ ಕೇಂದ್ರದ ನರ್ಸ್‌ಗಳನ್ನು ಮಾತ್ರ ಲಸಿಕಾರಣಕ್ಕೆ ಬಳಸಿಕೊಳ್ಳಬೇಕು.

ಲಸಿಕಾರಣ ನಡೆಸುವ ಮುನ್ನ ಫ್ಯಾಕ್ಟರ್‌-8 ಇಂಜೆಕ್ಷನ್‌ ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಲಸಿಕೆ ನೀಡುವ 10 ನಿಮಿಷಗಳ ಮುನ್ನ ಫ್ಯಾಕ್ಟರ್‌-8 ಇಂಜೆಕ್ಷನ್‌ ನೀಡಬೇಕು. ಲಸಿಕೆ ನೀಡಿದ ಬಳಿಕ ಫಲಾನುಭವಿಗಳನ್ನು ಕಡ್ಡಾಯವಾಗಿ 45 ನಿಮಿಷ ವೀಕ್ಷಣಾ ಕೊಠಡಿಯಲ್ಲಿರಿಸಿ ಯಾವುದೇ ರಕ್ತಸ್ರಾವ ಆಗದೇ ಇರುವುದನ್ನು ಖಚಿತಪಡಿಸಿಕೊಳ್ಳಬೇಕು.

ಲಸಿಕೆ ಪಡೆದ ಎರಡು ದಿನಗಳ ಒಳಗಾಗಿ ಜ್ವರ ಕಾಣಿಸಿಕೊಂಡರೆ ತಕ್ಷಣ ರಕ್ತಕೋಶದ ನೋಡಲ್‌ ಅಧಿಕಾರಿಗೆ ತಿಳಿಸಬೇಕು ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next