Advertisement

2ನೇ ಡೋಸ್‌ಗೆ ಬರುತ್ತೆ ಫೋನ್‌ ಕರೆ

10:04 PM Jun 08, 2021 | Team Udayavani |

„ಎಚ್‌.ಕೆ. ನಟರಾಜ

Advertisement

ದಾವಣಗೆರೆ: ಕೊವ್ಯಾಕ್ಸಿನ್‌ ಲಸಿಕೆಯ ಮೊದಲ ಡೋಸ್‌ ಹಾಕಿಸಿಕೊಂಡು ಆರು ವಾರವಾದರೂ ಎರಡನೇ ಡೋಸ್‌ ಹಾಕಿಸಿಕೊಳ್ಳದ ಫಲಾನುಭವಿಗಳಿಗೆ ಆರೋಗ್ಯ ಇಲಾಖೆಯೇ ದೂರವಾಣಿ ಕರೆ ಮಾಡಿ ಲಸಿಕಾ ಕೇಂದ್ರಕ್ಕೆ ಕರೆಸಿ ಲಸಿಕೆ ನೀಡಲು ಮುಂದಾಗಿದೆ.

ಕೊವ್ಯಾಕ್ಸಿನ್‌ ಎರಡನೇ ಡೋಸ್‌ ಲಸಿಕಾಕರಣದಲ್ಲಿ ನಿಗದಿತ ಪ್ರಗತಿ ಕಾಣದೇ ಇರುವುದರಿಂದ ಆರೋಗ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದ್ದು, ಈ ಕುರಿತು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸುತ್ತೋಲೆ ಮೂಲಕ ನಿರ್ದೇಶನ ನೀಡಿದ್ದಾರೆ.

ಕೊವ್ಯಾಕ್ಸಿನ್‌ ಲಸಿಕೆ ಕೊರತೆ ಇರುವ ಕಾರಣಕ್ಕಾಗಿ ಆರೋಗ್ಯ ಇಲಾಖೆಯು ಕೊವ್ಯಾಕ್ಸಿನ್‌ನ ಎರಡನೇ ಡೋಸ್‌ ಕೊಡಲು ಬಾಕಿ ಇರುವ ಫಲಾನುಭವಿಗಳಿಗೆ ಮಾತ್ರ ಚುಚ್ಚುಮದ್ದು ನೀಡಲು ಮೇ ತಿಂಗಳ ಆರಂಭದಲ್ಲಿಯೇ ಸೂಚನೆ ನೀಡಿತ್ತು.

ಆದರೆ ಮೇ ತಿಂಗಳು ಕೊನೆಯಲ್ಲಿ ಕೊವ್ಯಾಕ್ಸಿನ್‌ ಎರಡನೇ ಡೋಸ್‌ ಲಸಿಕಾರಣದಲ್ಲಿ ನಿಗದಿತ ಪ್ರಗತಿ ಸಾಧಿಸದೆ ಇರುವುದರಿಂದ ಆರೋಗ್ಯ ಇಲಾಖೆ, ಈಗ ಫಲಾನುಭವಿಗಳನ್ನು ವೈಯಕ್ತಿವಾಗಿ ದೂರವಾಣಿ ಇಲ್ಲವೇ ಎಸ್‌ಎಂಎಸ್‌ ಸಂದೇಶದ ಮೂಲಕ ಸಂಪರ್ಕಿಸಿ ಅವರಿಗೆ ಲಸಿಕಾಕರಣದ ಸ್ಥಳ ಹಾಗೂ ಸಮಯ ನಿಗದಿಪಡಿಸುತ್ತಿದೆ. ಜತೆಗೆ ಎರಡನೇ ಡೋಸ್‌ ಹಾಕಿಕೊಳ್ಳಲು ಮನವೊಲಿಸುತ್ತಿದೆ.

Advertisement

ಆರೋಗ್ಯ ಇಲಾಖೆಯ ಮೇ 31ರ ಅಂಕಿ-ಅಂಶದ ಪ್ರಕಾರ ರಾಜ್ಯದಲ್ಲಿ 3.36 ಲಕ್ಷ ಜನ ಕೊವ್ಯಾಕ್ಸಿನ್‌ ಎರಡನೇ ಡೋಸ್‌ ಪಡೆಯುವುದು ಬಾಕಿ ಇದೆ. ಇದರಲ್ಲಿ ಆರು ವಾರ ಪೂರ್ಣಗೊಂಡವರು 59,722, ಏಳು ವಾರ ಪೂರೈಸಿದವರು 46,676, ಎಂಟು ವಾರ ಪೂರೈಸಿದವರು 44,512, ಒಂಭತ್ತು ವಾರ ಪೂರ್ಣಗೊಳಿಸಿದವರು 1,35,098, ಹಾಗೂ ಒಂಭತ್ತು ತಿಂಗಳಿಗಿಂತ ಹಿಂದೆ ಪಡೆದವರು 1,01,944 ಜನ ಇದ್ದಾರೆ. ಇವರನ್ನೆಲ್ಲ ದೂರವಾಣಿ ಇಲ್ಲವೇ ಎಸ್‌ ಎಂಎಸ್‌ ಮೂಲಕ ಸಂಪರ್ಕಿಸಲಾಗುತ್ತಿದೆ.

ಜಿಲ್ಲಾವಾರು ಬಾಕಿ ವಿವರ: ಬಾಗಲಕೋಟೆ 28,635, ಬೆಂಗಳೂರು ಗ್ರಾಮಾಂತರ 4196, ಬೆಂಗಳೂರು ನಗರ 4391, ಬಿಬಿಎಂಪಿ ವ್ಯಾಪ್ತಿಯಲ್ಲಿ 40,151, ಬೆಳಗಾವಿ 5357, ಬಳ್ಳಾರಿ 19,303, ಬೀದರ್‌ 7257, ಚಾಮರಾಜನಗರ 13779, ಚಿಕ್ಕಮಗಳೂರು ಜಿಲ್ಲೆಯಲ್ಲಿ 4174 ಜನರು ಕೊವ್ಯಾಕ್ಸಿನ್‌ ಎರಡನೇ ಲಸಿಕೆ ಪಡೆಯುವುದು ಬಾಕಿ ಇದೆ. ಚಿಕ್ಕಬಳ್ಳಾಪುರ 9688, ಚಿತ್ರದುರ್ಗ 11,873, ದಕ್ಷಿಣಕನ್ನಡ 11,752, ದಾವಣಗೆರೆ 11,675, ಧಾರವಾಡ 2871, ಗದಗ 7532, ಕಲಬುರಗಿ 7355, ಹಾಸನ 15,619, ಹಾವೇರಿ 4898, ಕೊಡಗು 1797, ಕೋಲಾರ ಜಿಲ್ಲೆಯಲ್ಲಿ 13,072 ಮಂದಿ ಕೊವ್ಯಾಕ್ಸಿನ್‌ ಎರಡನೇ ಲಸಿಕೆ ಪಡೆಯಬೇಕಾಗಿದೆ. ಕೊಪ್ಪಳ 17,620, ಮಂಡ್ಯ 6852, ಮೈಸೂರು 8723, ರಾಯಚೂರು 20,451, ರಾಮನಗರ 10,507, ಶಿವಮೊಗ್ಗ 5529, ತುಮಕೂರು 3852, ಉಡುಪಿ 6878, ಉತ್ತರಕನ್ನಡ 1934, ವಿಜಯಪುರ 20,832 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 8427 ಜನ ಕೊವ್ಯಾಕ್ಸಿನ್‌ ಎರಡನೇ ಲಸಿಕೆ ಪಡೆಯಬೇಕಾಗಿದೆ.

ಏಕೆ ಹಿನ್ನಡೆ?: ರಾಜ್ಯದಲ್ಲಿ ಮೂರು ಲಕ್ಷಕ್ಕೂ ಅಧಿಕ ಜನ ಕೊವ್ಯಾಕ್ಸಿನ್‌ ಎರಡನೇ ಡೋಸ್‌ ಸಕಾಲದಲ್ಲಿ ಹಾಕಿಸಿಕೊಳ್ಳದೆ ಇರಲು ಲಸಿಕೆ ಕೊರತೆಯೇ ಪ್ರಮುಖ ಕಾರಣ. ಮೊದ ಮೊದಲು ನಾಲ್ಕು ವಾರ ಬಳಿಕ ಎರಡನೇ ಡೋಸ್‌ ಹಾಕಲಾಗುತ್ತದೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ನಿಗದಿತ ಅವಧಿಯಲ್ಲಿ ಹಲವು ಬಾರಿ ಲಸಿಕಾ ಕೇಂದ್ರಕ್ಕೆ ಬಂದ ಫಲಾನುಭವಿಗಳು ಲಸಿಕೆ ಇಲ್ಲದೇ ವಾಪಸ್ಸಾಗಿದ್ದರು.

ಈ ನಡುವೆ ಸರ್ಕಾರ ಎರಡನೇ ಡೋಸ್‌ ಲಸಿಕೆ ಹಾಕಿಸಿಕೊಳ್ಳುವ ಅವಧಿಯನ್ನು ಆರು ವಾರಗಳವರೆಗೂ ವಿಸ್ತರಿಸಿತು. ಈ ಅವಧಿ ವಿಸ್ತರಣೆ ಕೂಡ ಹಲವರಲ್ಲಿ ಗೊಂದಲ ಸೃಷ್ಟಿಸಿತು. ಹೀಗಾಗಿ ಎರಡನೇ ಡೋಸ್‌ ಹಾಕಿಸಿಕೊಳ್ಳಲು ಹಲವರು ಲಸಿಕಾ ಕೇಂದ್ರಗಳಿಗೆ ಬರಲೇ ಇಲ್ಲ. ಇದರಲ್ಲಿ ಕೆಲವರು ಮೂರ್‍ನಾಲ್ಕು ತಾಸು ಲಸಿಕಾ ಕೇಂದ್ರದ ಬಳಿ ಸರದಿ ನಿಲ್ಲುವುದಕ್ಕೆ ಬೇಸತ್ತು ಎರಡನೇ ಲಸಿಕೆ ಹಾಕಿಸಿಕೊಂಡಿಲ್ಲ. ಮತ್ತೆ ಕೆಲವರು ಮೊದಲ ಡೋಸ್‌ನಿಂದಾದ ಜ್ವರ, ಮೈಕೈ ನೋವಿನಂಥ ಸಾಮಾನ್ಯ ಲಕ್ಷಣಗಳಿಗೆ ಬೆದರಿ ಎರಡನೇ ಡೋಸ್‌ ಹಾಕಿಸಿಕೊಳ್ಳಲು ಬಂದಿಲ್ಲ. ಹೀಗಾಗಿ ಕೊವ್ಯಾಕ್ಸಿನ್‌ ಎರಡನೇ ಡೋಸ್‌ ಲಸಿಕಾರಣಕ್ಕೆ ಹಿನ್ನಡೆಯಾಗಿತ್ತು. ಈಗ ಫಲಾನುಭವಿಗಳಿಗೆ ಕರೆ ಮಾಡುವ ಮೂಲಕ ಕೊವ್ಯಾಕ್ಸಿನ್‌ ಎರಡನೇ ಡೋಸ್‌ ಲಸಿಕಾರಣ ಯಶಸ್ವಿಗೊಳಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next