ಹರಿಹರ: ಪಂಚಲಕ್ಷ ಪಾದಯಾತ್ರೆ ಅಂಗವಾಗಿ ಜ.28 ರಂದು ಹರಿಹರ ನಗರದ ಗಾಂಧಿ ಮೈದಾನದಲ್ಲಿ ನಡೆಯುವ ಜನಜಾಗೃತಿ
ಸಮಾವೇಶದಿಂದ ವಚನಾನಂದ ಶ್ರೀಗಳು ದೂರ ಉಳಿಯಲಿದ್ದಾರೆ ಎಂದು ಪೀಠದ ಧರ್ಮದರ್ಶಿ ಚಂದ್ರಶೇಖರ ಪೂಜಾರ ಹೇಳಿದರು.
ಸಮೀಪದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆಯುತ್ತಿರುವ ಪಾದಯಾತ್ರೆಗೆ ಹರಿಹರ ಪೀಠದ ಹಾಗೂ ಸ್ವಾಮೀಜಿಯವರ ಸಂಪೂರ್ಣ ಬೆಂಬಲವಿದ್ದರೂ ಸ್ಥಳೀಯ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ ಎಂದರು.
ಹರಪನಹಳ್ಳಿಯಲ್ಲಿ ಕೂಡಲ ಸಂಗಮ ಶ್ರೀಗಳೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡು, ಜಾಗೃತಿ ಸಮಾವೇಶದಲ್ಲೂ ವಚನಾನಂದ ಶ್ರೀಗಳು ಭಾಗವಹಿಸುತ್ತಿದ್ದಾರೆ. ನಂತರ ಜ.28 ರಂದು ಹರಿಹರ ತಾಲೂಕಿನ ಗಡಿ ಭಾಗ ದುಗ್ಗಾವತ್ತಿ ಗ್ರಾಮದಿಂದ ಶ್ರೀಗಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುವುದು.
ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಶ್ರೀಗಳು ಅಂದು ನಗರದ ಗಾಂಧಿ ಮೈದಾನದಲ್ಲಿ ಜನಜಾಗೃತಿ ಸಮಾವೇಶ ಮುಗಿಸಿಕೊಂಡು ಹರಿಹರದ ಪಂಚಮಸಾಲಿ ಪೀಠದಲ್ಲಿ ವಾಸ್ತವ್ಯ ಮಾಡುವರು. ಆ.29 ರಂದು ಬೆಳಗ್ಗೆ ನಗರದಿಂದ ಪಾದಯಾತ್ರೆಯು ದಾವಣಗೆರೆಗೆ ಮಾರ್ಗವಾಗಿ ಸಾಗಲಿದೆ ಎಂದರು.
ತಾಲೂಕು ಪಂಚಮಸಾಲಿ ಸಮಾಜ ಅಧ್ಯಕ್ಷ ಗುಳದಳ್ಳಿ ಶೇಖಪ್ಪ, ಭಾನುವಳ್ಳಿ ಆರ್. ಸಿ. ಪಟೇಲ್, ಎಂ.ಜಿ.ಕೊಟ್ರಪ್ಪ, ತಾಪಂ ಮಾಜಿ ಸದಸ್ಯ ಹಾಲೇಶ್ ಗೌಡ, ದೇವರಬೆಳಕೆರೆ ಸದಾಶಿವಪ್ಪ, ಎಚ್.ಎಂ.ಪರಮೇಶ್ವರಪ್ಪ, ಕುಣೆಬೆಳಕೆರೆ ಡಿ.ಬವಸರಾಜಪ್ಪ, ಸಾಲಕಟ್ಟಿ ಮಂಜಣ್ಣ, ಸಂಕ್ಲೀಪುರ ಹಾಲನಗೌಡ, ಗುತ್ತೂರು ಕರಿಬಸಪ್ಪ ಇತರರಿದ್ದರು.
ಓದಿ : ಸ್ಮಾರ್ಟ್‌ಸಿಟಿ ವಾಸ್ತವಾಂಶ ಜನರಿಗೆ ತಿಳಿಸಿ