Advertisement

ಜನರ ಕಾಡುತ್ತಿದೆ ಕೊವ್ಯಾಕ್ಸಿನ್‌ ಕೊರತೆ

09:23 PM May 05, 2021 | Team Udayavani |

„ಎಚ್‌.ಕೆ. ನಟರಾಜ

Advertisement

ದಾವಣಗೆರೆ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಕೊವ್ಯಾಕ್ಸಿನ್‌ ಕೊರೊನಾ ಲಸಿಕೆ ಪಡೆದ ಜಿಲ್ಲೆಯ ಸಾವಿರಾರು ಜನರು ಎರಡನೇ ಹಂತದ ಲಸಿಕೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದು, ಸಕಾಲಕ್ಕೆ ಎರಡನೇ ಹಂತದ ಲಸಿಕೆ ಸಿಗುತ್ತದೆಯೋ ಇಲ್ಲವೋ ಎಂಬ ಆತಂಕಕ್ಕೊಳಗಾಗಿದ್ದಾರೆ.

ಕೊರೊನಾದಿಂದ ರಕ್ಷಿಸಿಕೊಳ್ಳಲು ಕೊವ್ಯಾಕ್ಸಿನ್‌ ಹಾಗೂ ಕೋವಿಶೀಲ್ಡ್‌ ಹೆಸರಿನ ಎರಡು ಲಸಿಕೆಗಳು ಮಾರುಕಟ್ಟೆಗೆ ಬಂದಿದ್ದು ಇವುಗಳಲ್ಲಿ ಕೊವ್ಯಾಕ್ಸಿನ್‌ ಲಸಿಕೆ ಪ್ರಸ್ತುತ ಸಮರ್ಪಕ ಪ್ರಮಾಣದಲ್ಲಿ ಹಾಗೂ ಸಕಾಲದಲ್ಲಿ ರಾಜ್ಯಕ್ಕೆ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಜಿಲ್ಲೆಯ 22 ಸಾವಿರಕ್ಕೂ ಅಧಿಕ ಜನರು ಎರಡನೇ ಹಂತದ ಲಸಿಕೆ ಸಕಾಲಕ್ಕೆ ಸಿಗದೆ ಸಮಸ್ಯೆ ಎದುರಿಸುವಂತಾಗಿದೆ. ಕೊವ್ಯಾಕ್ಸಿನ್‌ ಮೊದಲ ಲಸಿಕೆಯಾಗಿ ಪಡೆದವರು 40 ದಿನಗಳ ಬಳಿಕ ಎರಡನೇ ಲಸಿಕೆ ಪಡೆಯಬೇಕಿದೆ.

ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿ ಕೊವ್ಯಾಕ್ಸಿನ್‌ ಲಸಿಕೆ ಪಡೆದವರಿಗೆ ಮೇ ತಿಂಗಳಲ್ಲಿ ಎರಡನೇ ಹಂತದ ಲಸಿಕೆ ಕೊಡಬೇಕು. ಆದರೆ ಎರಡನೇ ಹಂತದ ಲಸಿಕೆ ಅವಧಿ ಬಂದರೂ ಕೊವ್ಯಾಕ್ಸಿನ್‌ ಲಸಿಕೆ ಸಿಗುತ್ತಿಲ್ಲ. ಲಸಿಕೆ ಹಾಕಿಸಿಕೊಳ್ಳಲು ಒಂದು ವಾರ ತಡವಾದರೂ ತೊಂದರೆಯಾಗದು ಎಂದು ವೈದ್ಯರು ಸಮಾಧಾನದ ಮಾತುಗಳನ್ನು ಹೇಳುತ್ತಿದ್ದಾರೆ.

ಆದರೆ ಒಂದು ವಾರವಾದರೂ ಕೊವ್ಯಾಕ್ಸಿನ್‌ ಲಸಿಕೆ ಬಾರದೆ ಇದ್ದರೆ ಏನು ಮಾಡಬೇಕು ಎಂಬುದು ಮೊದಲ ಹಂತದ ಲಸಿಕೆಯಾಗಿ ಕೊವ್ಯಾಕ್ಸಿನ್‌ ಪಡೆದವರ ಪ್ರಶ್ನೆಯಾಗಿದೆ. ಮೊದಲ ಹಂತದಲ್ಲಿ ಕೊವ್ಯಾಕ್ಸಿನ್‌ ಹಾಕಿಸಿಕೊಂಡವರಲ್ಲಿ 60ವರ್ಷ ಮೇಲ್ಪಟ್ಟವರೇ ಹೆಚ್ಚಾಗಿದ್ದು ಇವರಿಗೆ ಸಕಾಲದಲ್ಲಿ ಎರಡನೇ ಹಂತದ ಲಸಿಕೆ ಸಿಗದೆ ಇದ್ದರೆ ಕೊರೊನಾ ಎರಡನೇ ಅಲೆಯಿಂದ ರಕ್ಷಿಸಿಕೊಳ್ಳಲು ಆಗದೇ ಇರಬಹುದು. ಲಸಿಕೆ ಪೂರೈಕೆಯಲ್ಲಿ ವಿಳಂಬವಾದರೆ ಮೊದಲ ಹಂತದಲ್ಲಿ ಹಾಕಿಸಿಕೊಂಡ ಲಸಿಕೆ ನಿಷ್ಟ್ರಯೋಜಕವಾಗಬಹುದು ಎಂಬ ಆತಂಕ ವಯೋವೃದ್ಧರಾದಿಯಾಗಿ ಕೊವ್ಯಾಕ್ಸಿನ್‌ ಪಡೆದವರನ್ನೆಲ್ಲ ಕಾಡುತ್ತಿದೆ.

Advertisement

ವಿಳಂಬವಾದರೆ ನಿಷ್ಪ್ರಯೋಜಕ: ಮೊದಲ ಹಂತದಲ್ಲಿ ಯಾವ ಲಸಿಕೆ ಪಡೆಯುತ್ತಾರೋ ಎರಡನೇ ಹಂತದಲ್ಲಿಯೂ ಅದೇ ಲಸಿಕೆ ಪಡೆಯಬೇಕು ಅಂದಾಗ ಮಾತ್ರ ಅದು ಹೆಚ್ಚು ಪರಿಣಾಮಕಾರಿಯಾಗುತ್ತದೆ. ಮೊದಲ ಹಂತದಲ್ಲಿ ಕೊವ್ಯಾಕ್ಸಿನ್‌ ಲಸಿಕೆ ಪಡೆದು, ಎರಡನೇ ಹಂತದಲ್ಲಿ ಕೋವಿಶೀಲ್ಡ್‌ ಲಸಿಕೆ ಪಡೆದರೆ ಅದು ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರದೇ ಇದ್ದರೂ ಕೊರೊನಾದಿಂದ ರಕ್ಷಿಸಿಕೊಳ್ಳುವ ವಿಚಾರದಲ್ಲಿ ಪರಿಣಾಮ ಮಾತ್ರ ನಗಣ್ಯ. ಅದೇ ರೀತಿ ಕೊವ್ಯಾಕ್ಸಿನ್‌ ಮೊದಲ ಲಸಿಕೆ ಪಡೆದ 40 ದಿನಗಳ ಬಳಿಕ ಒಂದೆರಡು ವಾರಗಳಲ್ಲಿ ಎರಡನೇ ಲಸಿಕೆ ಪಡೆದರೆ ಅದು ಪರಿಣಾಮಕಾರಿಯಾಗುತ್ತದೆ. ತಿಂಗಳಾನುಗಟ್ಟಲೆ ವಿಳಂಬ ಮಾಡಿದರೆ ಅದೂ ಕೂಡ ನಿಷ್ಪಯೋಜಕವಾಗಲಿದೆ ಎಂಬುದು ಆರೋಗ್ಯಾಧಿಕಾರಿಗಳ ಅಭಿಪ್ರಾಯ. ಕೊರೊನಾದಿಂದ ರಕ್ಷಿಸಿಕೊಳ್ಳುವಲ್ಲಿ ಕೋವಿಶಿಲ್‌ ಗಿಂತ ಕೊವ್ಯಾಕ್ಸಿನ್‌ ಹೆಚ್ಚು ಪರಿಣಾಮಕಾರಿ ಎಂಬ ಕಾರಣಕ್ಕಾಗಿ ಅನೇಕರು ಮೊದಲ ಹಂತದಲ್ಲಿ ಕೊವ್ಯಾಕ್ಸಿನ್‌ ಲಸಿಕೆಯನ್ನೇ ಕೇಳಿ ಹಾಕಿಸಿಕೊಂಡಿದ್ದರು.

ಈಗ ಕೊವ್ಯಾಕ್ಸಿನ್‌ ಲಸಿಕೆ ಕೊರತೆಯಾಗಿದ್ದರಿಂದ ಅವರೆಲ್ಲ ಕೋವಿಶೀಲ್ಡ್‌ ಹಾಕಿಸಿಕೊಳ್ಳಬೇಕಿತ್ತು ಎಂಬ ಪಶ್ಚಾತಾಪದ ಮಾತುಗಳನ್ನಾಡುತ್ತಿದ್ದಾರೆ. ಜಿಲ್ಲಾಡಳಿತ ಮಾತ್ರ ಆದಷ್ಟು ಶೀಘ್ರ ಕೊವ್ಯಾಕ್ಸಿನ್‌ ತರಿಸಿ ಕೊಡುವ ಭರವಸೆಯ ಮಾತುಗಳನ್ನಾಡಿ ಸಮಾಧಾನಪಡಿಸುತ್ತಿದೆ.

ಜಿಲ್ಲೆಯಲ್ಲಿ ಕೇವಲ 22 ಸಾವಿರ ಜನರಿಗೆ ಮಾತ್ರ ಕೊವ್ಯಾಕ್ಸಿನ್‌ ಲಸಿಕೆ ನೀಡಲಾಗಿದೆ. 1.70 ಲಕ್ಷ ಜನರಿಗೆ ಕೋವಿಶೀಲ್ಡ್‌ ಲಸಿಕೆ ಹಾಕಲಾಗಿದೆ. ಮಾರ್ಚ್‌, ಏಪ್ರಿಲ್‌ನಲ್ಲಿ ಮೊದಲ ಲಸಿಕೆ ಪಡೆದವರಿಗೆ ಈ ತಿಂಗಳು ಎರಡನೇ ಲಸಿಕೆ ಅವಧಿ ಬಂದಿದೆ. ಆದರೆ ಕೊವ್ಯಾಕ್ಸಿನ್‌ ಲಸಿಕೆ ಪೂರೈಕೆಯಾಗಿಲ್ಲ. ಎರಡನೇ ಹಂತದ ಲಸಿಕೆ ಒಂದು ವಾರ ವಿಳಂಬವಾದರೆ ತೊಂದರೆ ಏನೂ ಆಗಲ್ಲ. ಕೊವ್ಯಾಕ್ಸಿನ್‌ ಬರುವ ನಿರೀಕ್ಷೆಯಲ್ಲಿದ್ದು ಬಂದ ಕೂಡಲೇ ಎರಡನೇ ಹಂತದ ಲಸಿಕೆಯವರಿಗೆ ಆದ್ಯತೆ ನೀಡಲಾಗುವುದು.

ಡಾ| ಮೀನಾಕ್ಷಿ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next