ಮಲೇಬೆನ್ನೂರು: ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸೋಂಕಿತರ ಮಾಹಿತಿಯನ್ನು ಕಡ್ಡಾಯವಾಗಿ ಸಂಗ್ರಹಿಸಬೇಕು ಎಂದು ಹರಿಹರ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಸೂಚಿಸಿದರು. ಪಟ್ಟಣದ ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಬಿಎಲ್‌ಒ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಭೆಯಲ್ಲಿ ಅವರು ಮಾತನಾಡಿದರು.
ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ ಮಾಹಿತಿಯನ್ನು ಕಡ್ಡಾಯವಾಗಿ ಸಂಗ್ರಹಿಸಿ ಪ್ರತಿ ನಿತ್ಯ ಬೆಳಗ್ಗೆ 12 ಗಂಟೆಯೊಳಗೆ ಮಾಹಿತಿ ಅಪ್‌ಲೋಡ್ ಮಾಡಿಸಬೇಕು. ಸರ್ಕಾರದ ಮಾರ್ಗಸೂಚಿಯಂತೆ ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ದಂಡ ವಿ ಧಿಸುವ ಕ್ರಮ ಕೈಗೊಳ್ಳಬೇಕೆಂದರು. ಕಳೆದ ವರ್ಷ ನಾವು ಆರೋಗ್ಯ ಸಮೀಕ್ಷೆ ಕಾರ್ಯ ನಿರ್ವಹಿಸಿದ್ದೆವು. ಅದರ ಗಳಿಕೆ ರಜೆ ಇನ್ನೂ ಮಂಜೂರಾಗಿಲ್ಲ. ಕೂಡಲೇ ಮಂಜೂರು ಮಾಡುವಂತೆ ಬಿಎಲ್‌ಒ ದಂಡಿ ತಿಪೇಸ್ವಾಮಿ, ಪರಮೇಶ್ವರಪ್ಪ ಒತ್ತಾಯಿಸಿದರು.
ನಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಪಟ್ಟಣದ ಮನೆಗಳಿಗೆ ಹೋಗಿ ಆರೋಗ್ಯ ಸಮೀಕ್ಷೆ ಮತ್ತು ಪ್ರಥಮ ಹಂತದ ಹಾಗೂ ದ್ವಿತೀಯ ಹಂತದ ಸಂಪರ್ಕಿತರ ಮಾಹಿತಿ ಸಂಗ್ರಹ ಮಾಡುವುದು ಇನ್ನಿತರೆ ಕೆಲಸಗಳನ್ನು ಮಾಡುತ್ತೇವೆ. ಅಕಸ್ಮಾತ್ ನಮ್ಮಲ್ಲಿ ಯಾರಿಗೇನಾದರೂ ಆದರೆ ಅಧಿಕಾರಿಗಳು ನಿಮಗೆ ಸರ್ಕಾರದಿಂದ ನೀಡಿರುವ ಆದೇಶ ಪತ್ರ ಲಗತ್ತಿಸಿ ಎನ್ನುತ್ತಾರೆ. ನೀವು ನಮಗೆ ಆದೇಶ ಪತ್ರವನ್ನೇ ನೀಡಿಲ್ಲ. ಇದಕ್ಕೆ ಯಾರು ಹೊಣೆ, ಆದ್ದರಿಂದ ನಮಗೆ ಕೋವಿಡ್ ಕಾರ್ಯ ನಿರ್ವಹಿಸಲು ಸಂಬಂಧಿಸಿದ ಒ.ಎಂ (ಕೋವಿಡ್ ಕಾರ್ಯ ನಿರ್ವಹಿಸಲು ನೀಡುವ ಆದೇಶ ಪತ್ರ) ಕೊಡಿ ಎಂದು ತಹಶೀಲ್ದಾರರಲ್ಲಿ ಮನವಿ ಮಾಡಿದರು.
ಒ.ಎಂ ಪತ್ರ ನೀಡುವುದಾಗಿ ತಿಳಿಸಿದ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಅಂದಿನ ಕೆಲಸವನ್ನು ಅಂದೇ ಮಾಡಿ ಪೂರೈಸಬೇಕು ಎಂದು ತಾಕೀತು ಮಾಡಿದರು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಬಿಎಲ್‌ಒಗಳು ಒಟ್ಟಾಗಿ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ ಮಾಹಿತಿಯನ್ನು ಕಡ್ಡಾಯವಾಗಿ ಸಂಗ್ರಹಿಸಿ ಎಂದರು.
ಉಪತಹಶೀಲ್ದಾರ್ ಆರ್. ರವಿ, ಸಮುದಾಯ ಆರೋಗ್ಯಾಧಿ ಕಾರಿ ಡಾ| ಲಕ್ಷ್ಮೀದೇವಿ, ಪುರಸಭೆ ಮುಖ್ಯಾಧಿ ಕಾರಿ ದಿನಕರ್, ವಿ.ಎ. ಕೊಟ್ರೇಶ್, ಸಮೀರ್, ಪರಿಸರ ಅಭಿಯಂತರ ಉಮೇಶ್, ಹಿರಿಯ ಆರೋಗ್ಯ ನಿರೀಕ್ಷಕ ಗುರುಪ್ರಸಾದ್, ಕಂದಾಯ ಅ ಧಿಕಾರಿ ಪ್ರಭು, ನವೀನ್, ರಾಜಸ್ವ ನಿರೀಕ್ಷ ಆನಂದ್, ಪರಶುರಾಂ, ವಿನಯ್, ಬಿಎಲ್ ಒಗಳಾದ ಕರಿಬಸಪ್ಪ, ಖಲೀಲ್, ನಿರಂಜನ್, ಪ್ರೇಮಲೀಲಾಬಾಯಿ, ಶಿವಣ್ಣ, ಅಂಗನವಾಡಿ ಕಾರ್ಯಕರ್ತರಾದ ಮಂಜುಳ, ಉಮಾ, ಚಂದ್ರಮ್ಮ ಮತ್ತಿತರರು ಇದ್ದರು.