Advertisement

ರೋಗಿ ದಾಖಲಿಸುವ ಮುನ್ನ ಗಮನಕ್ಕೆ ತನ್ನಿ

05:46 PM Apr 25, 2021 | Team Udayavani |

ದಾವಣಗೆರೆ: ಬೆಂಗಳೂರಿನಲ್ಲಿ ಪ್ರಕರಣಗಳು ಹೆಚ್ಚಾಗಿ ಬೆಡ್‌ ಸಿಗದೇ ಇರುವ ಕಾರಣಕ್ಕೆ ಕೆಲವರು ದಾವಣಗೆರೆಗೆ ಬಂದು ಖಾಸಗಿ ಮತ್ತು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ವಿಷಯ ಗಮನಕ್ಕೆ ಬಂದಿದೆ. ಇನ್ನು ಮುಂದೆ ವೈದ್ಯಾಧಿಕಾರಿಗಳು ತಮ್ಮ ಗಮನಕ್ಕೆ ತಂದು ಅಂತಹ ರೋಗಿಗಳನ್ನು ದಾಖಲು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚಿಸಿದರು. ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ತುರ್ತು ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

Advertisement

ಮೊದಲು ಜಿಲ್ಲೆಯ ಅವಶ್ಯಕತೆಗಳನ್ನು ಪರಿಗಣಿಸಿ ನಂತರ ದಾಖಲಾತಿ ಮಾಡಲು ಕ್ರಮ ವಹಿಸಲಾಗುವುದು ಎಂದರು. ಕೋವಿಡ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡಿಸಿ ಆದಿಯಾಗಿ ಎಲ್ಲರೂ ಒಂದು ತಂಡದಲ್ಲಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಬೇಕು. ಮೊದಲನೆಯದಾಗಿ ಜಿಲ್ಲೆಯಲ್ಲಿ ಸಂಭವಿಸುವ ಕೋವಿಡ್‌ ಅಥವಾ ನಾನ್‌ ಕೋವಿಡ್‌ ಸಾವು ಕುರಿತು ವಿಶ್ಲೇಷಣೆ ನಡೆಸಲು ಈ ಹಿಂದೆ ರಚಿಸಲಾಗಿದ್ದ ಡೆತ್‌ ಆಡಿಟ್‌ ಸಮಿತಿಯನ್ನು ತಕ್ಷಣವೇ ಮರು ರಚಿಸಿ ಇಂದಿನಿಂದಲೇ ಸಂಭವಿಸುವ ಯಾವುದೇ ಸಾವಿನ ವರದಿಯನ್ನು ನೀಡಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ತಿಳಿಸಿದರು.

ತಜ್ಞರ ಸಮಿತಿ ಸಭೆ: ವೈದ್ಯಕೀಯ ತಜ್ಞರ ಸಮಿತಿಯ ಸದಸ್ಯರು ಪ್ರತಿ ಎರಡು ದಿನಗಳಿಗೊಮ್ಮೆ ಸಭೆ ನಡೆಸಿ, ಆಸ್ಪತ್ರೆಯ ಸಕ್ರಿಯ ಪ್ರಕರಣಗಳು, ಆಕ್ಸಿಜನ್‌ ಬೆಡ್‌ಗಳಲ್ಲಿ ಎಷ್ಟು ಜನ ರೋಗಿಗಳು ಯಾವ ಸ್ಥಿತಿಯಲ್ಲಿದ್ದಾರೆ. ಯಾರಿಗೆ ಏನು ಅವಶ್ಯಕತೆ ಇದೆ ಹಾಗೂ ಮುಂದಿನ ಹತ್ತು ದಿನಗಳ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಿ ಕ್ರಮ ವಹಿಸಬೇಕು ಎಂದರು.

ಜಿಲ್ಲಾಸ್ಪತ್ರೆ ಉಗ್ರಾಣ ಹಾಗೂ ಇತರೆ ಕೋವಿಡ್‌ ನಿರ್ವಹಿಸುತ್ತಿರುವ ಆಸ್ಪತ್ರೆಗಳ ಫಾರ್ಮಸಿಗಳಲ್ಲಿ ಔಷಧಗಳ ಲಭ್ಯತೆ ಹಾಗೂ ಔಷಧಗಳ ಬಳಕೆ, ಹೆಚ್ಚಿನ ಬಳಕೆ ಮತ್ತು ದುರ್ಬಳಕೆ ಕುರಿತು ಉಸ್ತುವಾರಿ ನೋಡಿಕೊಳ್ಳಲು ಫ್ಲೆಯಿಂಗ್‌ ಸ್ಕಾಡ್‌ ರಚಿಸಲಾಗುವುದು. ಜೊತೆಗೆ ಮೂರು ಆಂಬ್ಯುಲೆನ್ಸ್‌ ಖರೀದಿ ಹಾಗೂ ಶವ ವಾಹನ ಸಿದ್ಧಪಡಿಸಿಕೊಳ್ಳಲು ಸಂಬಂಧಿಸಿದ ಅಧಿ  ಕಾರಿಗಳಿಗೆ ಸೂಚನೆ ನೀಡಿದರು. ಕೋವಿಡ್‌ ಆಸ್ಪತ್ರೆಯಲ್ಲಿ ರೋಗಿಗಳು, ಬೆಡ್‌ಗಳು, ಆಕ್ಸಿಜನ್‌, ಪರೀಕ್ಷೆಗಳು, ಬಿಡುಗಡೆ ಕುರಿತಾಗಿ ವ್ಯವಸ್ಥಿತವಾಗಿ ನಿರ್ವಹಣೆ ಮಾಡಲು ಪ್ರತಿಯೊಂದು ವಿಭಾಗಕ್ಕೂ ಒಬ್ಬೊಬ್ಬ ನುರಿತ ಅಧಿಕಾರಿಯನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗುವುದು ಎಂದರು.

ಡಾಟಾ ಎಂಟ್ರಿ ಆಗಿಲ್ಲ: ಪ್ರಸ್ತುತ ಪ್ರೈಮರಿ ಮತ್ತು ಸೆಕೆಂಡರಿ ಸಂಪರ್ಕದ ಪರೀಕ್ಷೆಗಳು ಸಾಕಷ್ಟು ಆಗುತ್ತಿದ್ದರೂ ಡಾಟಾ ಎಂಟ್ರಿಯಲ್ಲಿ ಅದು ಸರಿಯಾಗಿ ಅಪ್‌ಡೇಟ್‌ ಮಾಡದೇ ಇರುವ ಕಾರಣ ರಾಜ್ಯ ವರದಿಯಲ್ಲಿ ಕಡಿಮೆ ತೋರಿಸುತ್ತಿದೆ. ಆದ ಕಾರಣ ಟಿಎಚ್‌ಒ ಸೇರಿದಂತೆ ಸಂಬಂಧಿ ಸಿದ ಅಧಿ ಕಾರಿಗಳು ಡಾಟಾ ಎಂಟ್ರಿ ಸಮರ್ಪಕವಾಗಿ ಮಾಡಿಸಲು ಕ್ರಮ ಕೈಗೊಳ್ಳಬೇಕು. ಸಿಜಿ ಆಸ್ಪತ್ರೆಯಲ್ಲಿ ಪ್ರಸ್ತುತ 2000 ಪೂಲಿಂಗ್‌ ಪರೀಕ್ಷೆ ಮಾಡಿಸುವ ಸಾಮರ್ಥ್ಯ ಇದೆ. ಸಕ್ರಿಯ ಪ್ರಕರಣದ 10 ಪಟ್ಟು ಟೆಸ್ಟ್‌ ಆಗಬೇಕಿದ್ದು, ಈ ಬಗ್ಗೆ ಕ್ರಮ ವಹಿಸಲಾಗುತ್ತಿದೆ. ಆಸ್ಪತ್ರೆಗೆ ಅಗತ್ಯವಿರುವ ಎಲ್ಲ ಅಗತ್ಯ ಔಷಧ ಮತ್ತು ಸುರಕ್ಷತಾ ಪರಿಕರ ಖರೀದಿಗೆ ಕ್ರಮ ವಹಿಸಲಾಗಿದೆ ಎಂದರು. ಎಸ್‌.ಎಸ್‌. ಆಸ್ಪತ್ರೆಯ ಡಾ| ಕಾಳಪ್ಪನವರ್‌ ಮಾತನಾಡಿ, ರೋಗಿಗಳಿಗೆ ಲಿಕ್ವಿಡ್‌ ಆಕ್ಸಿಜನ್‌ ಉತ್ತಮವಾಗಿದ್ದು, ಇದರ ಲಭ್ಯತೆ ಹೆಚ್ಚಿಸಬೇಕೆಂದರು.

Advertisement

ಬಾಪೂಜಿ ಆಸ್ಪತ್ರೆಯ ಡಾ| ರವಿ ಮಾತನಾಡಿ, ಲಿಕ್ವಿಡ್‌ ಆಕ್ಸಿಜನ್‌ ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ಮುಂಜಾಗ್ರತಾ ಕ್ರಮ ವಹಿಸುವುದು ಸೂಕ್ತ ಎಂದರು. ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಜಿಪಂ ಉಪ ಕಾರ್ಯದರ್ಶಿ ಆನಂದ್‌ ಸೇರಿದಂತೆ ತಾಲೂಕು ವೈದ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next