Advertisement
ತುರ್ತು ಅಗತ್ಯ ಸೇವೆಗಳಾದ ಆಸ್ಪತ್ರೆ, ಔಷಧ ಅಂಗಡಿ ಹಾಗೂ ಪೆಟ್ರೊಲ್ ಬಂಕ್‌ಗಳು ಮಾತ್ರ ತೆರೆದಿದ್ದವು. ಆಟೋ, ಖಾಸಗಿ ಬಸ್ ಸಂಚಾರ ಸಹ ಸಂಪೂರ್ಣ ಬಂದ್ ಆಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳು ಸೇವೆ ಸಿದ್ಧವಾಗಿದ್ದವು. ಆದರೆ ಸಂಚಾರಕ್ಕೆ ಪ್ರಯಾಣಿಕರೇ ಇರಲಿಲ್ಲ. ಹೀಗಾಗಿ ಬಸ್ ಸಂಚಾರವೂ ವಿರಳವಾಗಿತ್ತು. ಕಳೆದ ವರ್ಷ ಜಾರಿಯಾಗಿದ್ದ ಜನತಾ ಕರ್ಫ್ಯೂ ಬಗ್ಗೆ ಅನುಭವ ಹೊಂದಿದ್ದ ಜನತೆ, ವಾರಾಂತ್ಯದ ಕರ್ಫ್ಯೂವನ್ನೂ ಜನತಾ ಕರ್ಫ್ಯೂ ಥರ ಪರಿಗಣಿಸಿ ಮನೆಯಿಂದ ಹೊರಬರುವ ವಿಚಾರ ಮಾಡಲಿಲ್ಲ. ಇನ್ನು ರಸ್ತೆಯಲ್ಲಿ ಸುತ್ತಾಡುವ ರೂಢಿ ಇರುವ ಯುವ ಸಮೂಹ ಕಳೆದ ವರ್ಷ ಪೊಲೀಸರು ಬೀಸಿದ ಲಾಠಿ ರುಚಿಯನ್ನು ನೆನಪಿಸಿಕೊಂಡು ರಸ್ತೆಗಿಳಿಯುವ ಸಾಹಸ ಮಾಡಲಿಲ್ಲ.
Related Articles
Advertisement
ರಸ್ತೆಗಳೆಲ್ಲ ಭಣ ಭಣ: ಅಗತ್ಯ ವಸ್ತುಗಳ ಖರೀದಿಗೆ ನೀಡಲಾಗಿದ್ದ ಅವಧಿ ಮುಗಿಯುತ್ತಿದ್ದಂತೆ ಬೆಳಿಗ್ಗೆ 10 ಗಂಟೆ ಬಳಿಕ ಪೊಲೀಸರು ರಸ್ತೆಯಲ್ಲಿ ಸಂಚರಿಸುವವರನ್ನು ತಡೆದು ವಿಚಾರಣೆ ಮಾಡಲು ಶುರು ಮಾಡಿದರು. ಅಪರಾಹ್ನ 11 ಗಂಟೆ ಹೊತ್ತಿಗೆ ರಸ್ತೆಯಲ್ಲಿ ಜನ ಸಂಚಾರ, ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಯಿತು. ಮಹಾನಗರ ವ್ಯಾಪ್ತಿಯ ಜನದಟ್ಟಣೆಯ ಪ್ರದೇಶಗಳಾದ ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ, ಮಂಡಿಪೇಟೆ, ಚೌಕಿಪೇಟೆ, ಕಾಯಿಪೇಟೆ, ಚಾಮರಾಜಪೇಟೆ, ನರಸಿಂಹರಾಜ ರಸ್ತೆ, ಕಾಳಿಕಾಂಬಾದೇವಿ ರಸ್ತೆ, ವಿಜಯ ರಸ್ತೆ ಸೇರಿದಂತೆ ಜನದಟ್ಟಣೆಯಿಂದ ಕೂಡಿರುತ್ತಿದ್ದ ಪ್ರದೇಶಗಳು, ರಸ್ತೆಗಳು ಜನ, ವಾಹನ ಸಂಚಾರವಿಲ್ಲದೇ ಬಿಕೋ ಎಂದವು. ಕರ್ಫ್ಯೂನಿಂದಾಗಿ ಜನರು ಹೊರಗೆ ಎಲ್ಲಿಯೂ ಹೋಗದೆ ಮನೆಯಲ್ಲಿಯೇ ಸ್ವಯಂ ಬಂಧಿಯಾದರು.
ಕೆಲವರು ಮನೆಯಲ್ಲಿ ಪೇಪರ್ ಓದುತ್ತ, ಟಿವಿ ನೋಡುತ್ತ, ಮನೆಯಲ್ಲಿ ಹರಟೆ, ಚರ್ಚೆ ಮಾಡುತ್ತ ಕಾಲ ಕಳೆದರು. ಒಟ್ಟಾರೆ ವಾರಾಂತ್ಯ ಕರ್ಫ್ಯೂ ಮೊದಲ ದಿನ ಸಂಪೂರ್ಣ ಯಶಸ್ವಿಯಾಯಿತು.