ದಾವಣಗೆರೆ: ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ ವಿಧಿಸಿದ್ದು ರಾತ್ರಿ 9ಗಂಟೆಯೊಳಗಾಗಿ ವ್ಯಾಪಾರ ಮುಗಿಸಿ ಮನೆಗೆ ಹೋಗುವ ಯೋಜನೆಯೊಂದಿಗೆ ಗುರುವಾರ ಬೆಳಿಗ್ಗೆ ಮಳಿಗೆ ಬಾಗಿಲು ತೆಗೆಯುತ್ತಿದ್ದ ವರ್ತಕರಿಗೆ ಗುರುವಾರ ಬೆಳಿಗ್ಗೆ ಅಚ್ಚರಿ ಕಾದಿತ್ತು. ಅದೇನೆಂದರೆ ರಾತ್ರಿ ಬದಲಿಗೆ ಈಗಲೇ ಮಳಿಗೆ ಬಾಗಿಲು ಮುಚ್ಚಬೇಕು ಎಂಬ ಪೊಲೀಸರ ಆದೇಶ! ಗುರುವಾರ ಬೆಳಿಗ್ಗೆ ಕೆಲವರು ಇನ್ನೂ ಬಾಗಿಲು ತೆರೆಯುತ್ತಿದ್ದರು.
ಮತ್ತೆ ಕೆಲವರು ಈಗಷ್ಟೇ ಮಳಿಗೆ ಬಾಗಿಲು ತೆರೆದು ದೇವರಿಗೆ ಹಚ್ಚಿದ ಅಗರಬತ್ತಿ ಇನ್ನೂ ಆರಿರಲಿಲ್ಲ. ಆಗಲೇ ಪೊಲೀಸರು ಅಂಗಡಿಗಳ ಬಳಿ ಬಂದು ಬಟ್ಟೆ, ಚಿನ್ನಾಭರಣ, ಸ್ಟೆಷನರಿ, ಗೃಹೋಪಯೋಗಿ ಸೇರಿದಂತೆ ಎಲ್ಲ ಅಂಗಡಿಗಳನ್ನು ಮುಚ್ಚಿಸಿದರು. ಪೊಲೀಸರ ಈ ದಿಢೀರ್ ಆದೇಶ ವ್ಯಾಪಾರಿಗಳನ್ನು ದಿಗಾತರನ್ನಾಗಿಸಿತು. ಕೆಲ ಅಂಗಡಿಕಾರರು ಸರ್ಕಾರ ರಾತ್ರಿ 9 ಗಂಟೆ ನಂತರ ಲಾಕ್ ಡೌನ್ ಎಂದು ಹೇಳಿದೆ. ಈಗೇಕೆ ಮಳಿಗೆ ಮುಚ್ಚಿಸುತ್ತಿದೀªರಿ ಎಂದು ಪೊಲೀಸರನ್ನು ಪ್ರಶ್ನಿಸಿದರು.
ಮತ್ತೆ ಕೆಲವರು ವಾಗ್ವಾದಕ್ಕಿಳಿದರು. ಆದರೆ ಪೊಲೀಸರು ಮಾತ್ರ ಇದರ ಬಗ್ಗೆ ಸರಿಯಾದ ಸ್ಪಷ್ಟನೆ ನೀಡದೇ “ಇದು ಜಿಲ್ಲಾಧಿಕಾರಿಗಳ ಆದೇಶ’ ಎನ್ನುತ್ತ ಅಂಗಡಿಗಳ ಬಾಗಿಲು ಹಾಕಿಸಿಯೇ ಮುಂದೆ ನಡೆದರು. ನಗರದ ಬಹುತೇಕ ಎಲ್ಲ ಕಡೆಗಳಲ್ಲಿ ಪೊಲೀಸರು ಅವಶ್ಯ ವಸ್ತುಗಳ ಅಂಗಡಿ, ಕೃಷಿ ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿ ಹೊರತುಪಡಿಸಿ ಎಲ್ಲವನ್ನೂ ಪೊಲೀಸರು ತಂಡೋಪತಂಡವಾಗಿ ಸಂಚರಿಸಿ ಮುಚ್ಚಿಸುವಲ್ಲಿ ಯಶಸ್ವಿಯಾದರು.
ಅವಶ್ಯ ವಸ್ತುಗಳ ಮಾರಾಟ ಮಳಿಗೆ, ಕೃಷಿ ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿ ಮಾರಾಟ ಅಂಗಡಿ ಹೊರತುಪಡಿಸಿ ಉಳಿದೆಲ್ಲವನ್ನೂ ಮೇ 4 ರವರೆಗೆ ಬಂದ್ ಮಾಡಬೇಕು ಎಂದು ಸರ್ಕಾರ ಬುಧವಾರ ರಾತ್ರಿ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಇದರ ಪರಿಣಾಮ ಜಿಲ್ಲಾಧಿಕಾರಿ ಆದೇಶದಂತೆ ಪೊಲೀಸರು ಬಂದ್ ಕಾರ್ಯಾಚರಣೆಗೆ ಇಳಿದಿದ್ದರು. ಇದರ ಬಗ್ಗೆ ಅರಿವಿಲ್ಲದ ವರ್ತಕರು, ಗ್ರಾಹಕರಿಗೆ ಅಧಿಕಾರಿಗಳ ದಿಢೀರ್ ಆದೇಶ ಅಸಮಾಧಾನ ಮೂಡಿಸಿತು. ಒಟ್ಟಾರೆ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ವಿಧಿಸಿದ ಹೊಸ ಮಾರ್ಗಸೂಚಿಗಳ ಬಿಗಿ ಅನುಷ್ಠಾನಕ್ಕೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದ್ದು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ವಾತಾವರಣ ಸೃಷ್ಟಿಯಾಗಿದೆ.