ದಾವಣಗೆರೆ: ಕೇಂದ್ರ ಮತ್ತು ರಾಜ್ಯದಲ್ಲಿ ಸುಮಾರು ಒಂದೂವರೆ ಲಕ್ಷ ಹುದ್ದೆಗಳು ಖಾಲಿ ಇದ್ದರೂ ಎರಡೂ ಸರ್ಕಾರಗಳು ಹುದ್ದೆಗಳನ್ನು ಭರ್ತಿ ಮಾಡಿಲ್ಲ. ವಿದ್ಯಾವಂತ ಯುವಕರು ಸಂಘಟಿತರಾಗಿ ಹೋರಾಟ ನಡೆಸಿದಾಗ ಮಾತ್ರ ಸರ್ಕಾರಿ ಸೌಲಭ್ಯಗಳು ಸಿಗಲು ಸಾಧ್ಯ ಎಂದು ರಾಷ್ಟ್ರೀಯ ಮಾದಿಗ ದಂಡೋರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಬಿ. ನರಸಿಂಹ ಹೇಳಿದರು.
ಮಾದಿಗ ದಂಡೋರ ಜಿಲ್ಲಾ ಸಮಿತಿ ವತಿಯಿಂದ ನಗರದ ರೋಟರಿ ಬಾಲಭವನದಲ್ಲಿ ಜಿಲ್ಲೆಯ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಶನಿವಾರ ಆಯೋಜಿಸಿದ್ದ ಅಭಿನಂದನಾ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪರಿಶಿಷ್ಟ ವರ್ಗಗಳ ಅದೆಷ್ಟೋ ಉನ್ನತ ಶಿಕ್ಷಣ ಪಡೆದ ಯುವಕರು ನಿರುದ್ಯೋಗಿಗಳಾಗಿ ಬೀದಿಪಾಲಾಗುವಂತಾಗಿದೆ. ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಹುನ್ನಾರದಿಂದ ಈ ಎಲ್ಲಾ ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ. ವಿದ್ಯಾವಂತ ಯುವಕರು ಜಾಗ್ರತರಾಗದಿದ್ದರೆ ಮುಂದೆ ಬದುಕು ಅತಂತ್ರವಾಗಲಿದೆ ಎಂದು ಎಚ್ಚರಿಸಿದರು.
ಗ್ರಾಮ ಪಂಚಾಯಿತಿಗಳಿಗೆ ಮಾದಿಗ ಸಮುದಾಯದಿಂದ ಆಯ್ಕೆಯಾಗಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಕಾನೂನುಬದ್ಧವಾಗಿ ಅಧಿಕಾರ ನಡೆಸಬೇಕು. ಈ ಮೂಲಕ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಬೇಕು. ಗ್ರಾಪಂಗಳಲ್ಲಿ ನಮ್ಮ ದಡ್ಡತನವನ್ನು ದುರುಪಯೋಗ ಮಾಡಿಕೊಳ್ಳುವ ಪ್ರಸಂಗಗಳೇ ಇತ್ತೀಚೆಗೆ ಹೆಚ್ಚು ನಡೆಯುತ್ತವೆ. ಆದ್ದರಿಂದ ಸದಸ್ಯರು ಕಾನೂನಿನ ಅರಿವು ಪಡೆಯಬೇಕು ಎಂದರು.
ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಎಚ್.ಸಿ. ಗುಡ್ಡಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ನಮ್ಮ ಸಮುದಾಯದ ಅನುಭವಿ ಮಾಜಿ ಗ್ರಾಪಂ ಅಧ್ಯಕ್ಷರು, ಸದಸ್ಯರ ಬಳಿ ಗ್ರಾಪಂ ಆಡಳಿತದ ಬಗ್ಗೆ ತಿಳಿದುಕೊಂಡು ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಮಹಾನಗರಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಡಿ. ಗೋಣೆಪ್ಪ ಅವರನ್ನು ಅಭಿನಂದಿಸಲಾಯಿತು. ಮಾದಿಗ ಸಮುದಾಯದ ಟಿ. ಮರಿಯಪ್ಪ, ಬಿ.ಎಚ್. ಶೇಖರಪ್ಪ ಮಳಲಕೆರೆ, ಪಿ. ನಾಗರಾಜ್, ಎ.ಕೆ. ನಾಗೇಂದ್ರಪ್ಪ, ಜಿ.ಎಚ್. ತಮ್ಮಣ್ಣ, ಎನ್. ಕೆಂಚಪ್ಪ ಈಚಘಟ್ಟ, ರವಿಕುಮಾರ್, ಹುಲಿಗಪ್ಪ ಬಳ್ಳಾರಿ, ಹೆಗ್ಗೆರೆ ರಂಗಪ್ಪ, ಹನುಮಂತಪ್ಪ ಕುಂಬಳೂರು ಸೇರಿದಂತೆ ಇನ್ನಿತರರು ಇದ್ದರು.