Advertisement

ಮಾಸ್ಕ್ ವಿತರಿಸಿ ಸ್ಥಾಪನಾ ದಿನ ಆಚರಣೆ

04:48 PM Apr 21, 2021 | Team Udayavani |

ದಾವಣಗೆರೆ: ರಸ್ತೆ ಬದಿ ವ್ಯಾಪಾರಿಗಳು, ಗ್ರಾಹಕರಿಗೆ ಮಾಸ್ಕ್, ಸ್ಯಾನಿಟೈಸರ್‌ ವಿತರಸುವ ಮೂಲಕ ಮಂಗಳವಾರ ಅಖೀಲ ಭಾರತ ಬ್ಯಾಂಕ್‌ ನೌಕರರ ಸಂಘದ 76ನೇ ಸ್ಥಾಪನಾ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೆನರಾ ಬ್ಯಾಂಕ್‌ ಎಂಪ್ಲಾಯಿಸ್‌ ಯೂನಿಯನ್‌ ರಾಜ್ಯ ಉಪಾಧ್ಯಕ್ಷ ಕೆ. ರಾಘವೇಂದ್ರ ನಾಯರಿ, 1946 ರ ಏ. 20 ರಂದು ಅಖೀಲ ಭಾರತ ಬ್ಯಾಂಕ್‌ ನೌಕರರ ಸಂಘ ಬ್ಯಾಂಕ್‌ ಉದ್ಯೋಗಿಗಳ ಪ್ರಪ್ರಥಮ ಸಂಘಟನೆಯಾಗಿ ಸ್ಥಾಪನೆಗೊಂಡಿದೆ. ಸ್ಥಾಪನೆಯಾದ ದಿನದಿಂದಲೂ ಬ್ಯಾಂಕ್‌ ಉದ್ಯೋಗಿಗಳ ಪರವಾಗಿ ಅನೇಕ ಹೋರಾಟಗಳ ಮಾಡುತ್ತಾ ಬ್ಯಾಂಕ್‌ ನೌಕರರಿಗೆ ವಿವಿಧ ಸೌಲಭ್ಯಗಳನ್ನು ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

Advertisement

60ರ ದಶಕದಲ್ಲಿ ಬ್ಯಾಂಕ್‌ ರಾಷ್ಟ್ರೀಕರಣಕ್ಕಾಗಿ ಸುದೀರ್ಘ‌ವಾದ ಹೋರಾಟ ಮಾಡಿ 1969ರಲ್ಲಿ ಬ್ಯಾಂಕ್‌ ರಾಷ್ಟ್ರೀಕರಣಕ್ಕೆ ಕಾರಣವಾದ ಏಕೈಕ ಬ್ಯಾಂಕ್‌ ಸಂಘಟನೆ ಎಂಬ ಕೀರ್ತಿಗೆ ಭಾಜನವಾಗಿದೆ. ಬ್ಯಾಂಕ್‌ ರಾಷ್ಟ್ರೀಕರಣದ ಮೂಲಕ ಲಕ್ಷಾಂತರ ನಿರುದ್ಯೋಗಿಗಳಿಗೆ ಬ್ಯಾಂಕ್‌ ಉದ್ಯೋಗ ಹಾಗೂ ಕೋಟ್ಯಂತರ ಜನರಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಸ್ವ ಉದ್ಯೋಗ ಮಾಡಲು ಅವಕಾಶ ಕಲ್ಪಿಸಲಾಯಿತು. ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಅನೇಕ ಕಾಯಂ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲು ಕೂಡ ಸಂಘದ ವತಿಯಿಂದ ಹೋರಾಟ ಮಾಡಲಾಯಿತು. ಬ್ಯಾಂಕ್‌ ಉದ್ಯೋಗಿಗಳ ಉದ್ಯೋಗ ಭದ್ರತೆಗೆ ಹೋರಾಡಿ ಜಯ ಗಳಿಸಿದ ಪರಿಣಾಮವಾಗಿ ಇಂದಿಗೂ ಅಸಂಖ್ಯಾತರು ಇಂಜಿನಿಯರಿಂಗ್‌, ಎಂಬಿಎ, ಎಂಸಿಎ ಉನ್ನತ ಶಿಕ್ಷಣ ಹೊಂದಿದ್ದರೂ ಸಹ ಭದ್ರತೆ ಇರುವ ಕಾರಣಕ್ಕಾಗಿ ಬ್ಯಾಂಕ್‌ ನೌಕರಿಯನ್ನೇ ಅರಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.

1991ರಲ್ಲಿ ಆರಂಭವಾದ ಖಾಸಗೀಕರಣ, ಜಾಗತೀಕರಣ ಮತ್ತು ಉದಾರೀಕರಣ ನೀತಿಗಳ ವಿರುದ್ಧವೂ ನಿರಂತರವಾಗಿ ಹೋರಾಡಿದ ಶ್ರೇಯಸ್ಸು ಸಂಘಕ್ಕೆ ಸಲ್ಲುತ್ತದೆ. ಬ್ಯಾಂಕ್‌ ನೌಕರರ ಶ್ರೇಯೋಭಿವೃದ್ಧಿಗಾಗಿ ಹೋರಾಡುವುದರ ಜೊತೆಗೆ ಸಾರ್ವಜನಿಕ ಬ್ಯಾಂಕಿಂಗ್‌ ವ್ಯವಸ್ಥೆಯ ಉಳಿವಿಗಾಗಿ, ಅಸಂಘಟಿತ ವಲಯದ ನೌಕರರ ಹಕ್ಕಿಗಾಗಿ, ಬ್ಯಾಂಕ್‌ ಖಾಸಗಿಕರಣದ ವಿರುದ್ಧ, ವಿದೇಶೀ ನೇರ ಬಂಡವಾಳದ ಒಳ ಹರಿವಿನ ವಿರುದ್ಧ ಆಳುವ ಸರ್ಕಾರಗಳ ಕಾರ್ಮಿಕ ವಿರೋಧಿ ಧೋರಣೆಗಳ ವಿರುದ್ಧ ಅವಿರತ ಹೋರಾಟ ನಡೆಸುತ್ತಿದೆ ಎಂದು ಹೇಳಿದರು.

ಪ್ರಭಾತ್ಕರ್‌, ಎಚ್‌.ಎಲ್‌. ಪರ್ವಾನಾ, ಡಿ.ಪಿ. ಚಡ್ಡಾ, ತಾರಕೇಶ್ವರ್‌ ಚಕ್ರವರ್ತಿ, ಏಕನಾಥ್‌ ಪೈ, ಸಿ. ಸುಬ್ರಹ್ಮಣ್ಯನ್‌ ಮೊದಲಾದ ಮಹಾನ್‌ ನಾಯಕರು ಜೀವನವನ್ನೇ ಬ್ಯಾಂಕ್‌ ನೌಕರರ ಸಂಘಟನೆಗಾಗಿ ಮುಡಿಪಾಗಿಟ್ಟರು. ಸಿ.ಎಚ್‌. ವೆಂಕಟಾಚಲಂ, ಎಚ್‌. ವಸಂತ ರೈ, ಪಿ. ಸುಂದರೇಶನ್‌, ಅಜಯ್‌ ಮಾಂಜ್ರೆàಕರ್‌, ಸಿ.ಎಸ್‌. ವೇಣುಗೋಪಾಲ್‌ ಮುಂತಾದವರು ಈಗ ಹೋರಾಟದ ಸಾರಥ್ಯ ವಹಿಸಿದ್ದಾರೆ. ಸಂಘ ಅತ್ಯಂತ ಸಮರ್ಥವಾಗಿ ಮುನ್ನಡೆಯುತ್ತಿದೆ. ಕಳೆದ 75 ವರ್ಷಗಳ ಅವಧಿ  ಯಲ್ಲಿ ಅಖೀಲ ಭಾರತ ಬ್ಯಾಂಕ್‌ ನೌಕರರ ಸಂಘದ ನೆರಳಿನಲ್ಲಿ ಲಕ್ಷಾಂತರ ಬ್ಯಾಂಕ್‌ ನೌಕರರು ನೆಮ್ಮದಿ ಹಾಗೂ ಸುಭದ್ರವಾದ ಜೀವನವನ್ನು ಕಂಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ. ಆನಂದಮೂರ್ತಿ, ಕೆನರಾ ಬ್ಯಾಂಕ್‌ ವಿದ್ಯಾನಗರ ಶಾಖೆಯ ಮುಖ್ಯ ಪ್ರಬಂಧಕ ಆರ್‌.ಬಿ. ಸಂಜೀವಪ್ಪ, ಆರ್‌. ಆಂಜನೇಯ, ಕೆ. ವಿಶ್ವನಾಥ ಬಿಲ್ಲವ, ಸಿ. ಪರಶುರಾಮ, ಕಾಡಜ್ಜಿ ಎನ್‌. ವೀರಪ್ಪ, ಕೆ. ಶಶಿಶೇಖರ್‌, ದಾದಾಪೀರ್‌. ಸಿದ್ದಲಿಂಗೇಶ ಕೋರಿ, ಕೆ. ಸುನಂದಮ್ಮ, ಡಿ.ಎಂ. ಆನಂದಕುಮಾರ್‌, ಎಂ. ಸಂದೀಪ್‌, ಡಿ.ಎ. ಸಾಕಮ್ಮ, ಬಿ.ಎನ್‌. ಶ್ವೇತಾ, ಆಶಾ ವಿದ್ಯಾಸಾಗರ್‌, ದರ್ಶನ್‌, ಡಿ.ಎ. ರವಿ, ಅಂಬರೀಶ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next