ದಾವಣಗೆರೆ: ಎಲ್ಲೆಡೆ ಕೊರೊನಾ ವೈರಸ್‌ನ ಎರಡನೇ ಅಲೆ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಸ್ಯಾನಿಟೈಸರ್ ಬಳಸುವ ಮೂಲಕ ಸೋಂಕಿನ ವಿರುದ್ಧ ಹೋರಾಡಬೇಕು ಎಂದು ಅಖೀಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ದೇವರಮನೆ ಶಿವಕುಮಾರ್ ಮನವಿ ಮಾಡಿದರು.
ಅಖೀಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಗಡಿಯಾರ ಕಂಬದ ಬಳಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ರಸ್ತೆ ಬದಿ ವ್ಯಾಪಾರಿಗಳಿಗೆ, ಆಟೋ ಚಾಲಕರಿಗೆ, ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಜೀವ ಅಮೂಲ್ಯ. ಕೊರೊನಾ ಸೋಂಕು ತಡೆಗಟ್ಟಲು ಮಾಸ್ಕ್ ಹಾಕಿಕೊಳ್ಳುವುದು, ಆಗಾಗ ಕೈ ತೊಳೆಯುವ ಮೂಲಕ ಸ್ವಚ್ಚತೆ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಮಹಾಸಭಾದಿಂದ ವಿಜಯಲಕ್ಷ್ಮೀ ರಸ್ತೆ, ಕಾಯಿಪೇಟೆ, ತರಕಾರಿ ಮಾರುಕಟ್ಟೆ ಸೇರಿದಂತೆ ಹಲವು ಕಡೆ ಸಾವಿರ ಮಾಸ್ಕ್ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಗರದಾದ್ಯಂತ ಉಚಿತವಾಗಿ ಮಾಸ್ಕ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ನಾಮನಿರ್ದೇಶಿತ ಸದಸ್ಯ ಶಿವನಗೌಡ ಟಿ. ಪಾಟೀಲ್, ಟಿಂಕರ್ ಮಂಜಣ್ಣ, ಕರಿವಪರ ಸಿದ್ದೇಶ್, ಮಾಗಿ ಪ್ರಕಾಶ್, ಶ್ರೀಕಾಂತ್ ನೀಲಗುಂದ, ಅಭಿಷೇಕ್ ಪಿ. ಎಳೆಹೊಳೆ, ಶಿವಾನಂದ ಬೆನ್ನೂರ್, ದೇವೇಂದ್ರಪ್ಪ, ಮಹಿಳಾ ಘಟಕದ ಶೋಭಾ ಕೊಟ್ರೇಶ್, ಪುಷ್ಪಾ ವಾಲಿ, ದಾಕ್ಷಾಯಣಿ, ಕವಿತಾ,ಸುಮಂಗಲಾ ಇತರರು ಇದ್ದರು.