ದಾವಣಗೆರೆ: ನಗರಪಾಲಿಕೆ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಉದ್ಯಮ ಪರವಾನಿಗೆ ಮೇಳವನ್ನು ಹೆಚ್ಚು ಪರಿಣಾಮಕಾರಿಯಾಗಿ ಆಯೋಜಿಸಲಾಗುವುದು ಎಂದು ಮೇಯರ್ ಎಸ್.ಟಿ. ವೀರೇಶ್ ಹಳಿದರು. ಮಂಗಳವಾರ ದಾವಣಗೆರೆ ಹೋಟೆಲ್ ಉದ್ದಿಮೆದಾರರ ಸಂಘ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಪಿ.ಬಿ. ರಸ್ತೆಯ ಖಾಸಗಿ ರೆಸ್ಟೋರೆಂಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಉದ್ಯಮ ಪರವಾನಿಗೆ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರು, ಮೈಸೂರು ಮಾದರಿಯಲ್ಲಿ ದಾವಣಗೆರೆಯಲ್ಲೂ ಹೋಟೆಲ್ ಉದ್ಯಮ ಪರವಾನಗಿ ಮೇಳ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉದ್ಯಮ ಪರವಾನಿಗೆ ಮೇಳವನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಲಾಗುವುದು ಎಂದರು.
ವಿದ್ಯಾಕಾಶಿ, ವಾಣಿಜ್ಯ ನಗರ ಎಂದೇ ಕರೆಯಲ್ಪಡುವ ದಾವಣಗೆರೆಯ ಅಭಿವೃದ್ಧಿಯಲ್ಲಿ ಹೋಟೆಲ್ ಉದ್ಯಮದ ಕಾಣಿಕೆಯೂ ಇದೆ. ವಿವಿಧ ಕಡೆಯಿಂದ ದಾವಣಗೆರೆಗೆ ಬಂದು ಹೋಗುವಂತಹ ಸಾವಿರಾರು ಜನರಿಗೆ ಆಹಾರ ಒದಗಿಸುವ ಕಾಯಕವನ್ನು ಹೋಟೆಲ್ ಉದ್ಯಮ ಮಾಡುತ್ತಿದೆ. ಕೊರೊನಾ ಸಂದರ್ಭದಲ್ಲೂ ಹೋಟೆಲ್ ಉದ್ದಿಮೆದಾರರು ನೆರವು ನೀಡಿದ್ದಾರೆ. ದಾವಣಗೆರೆಯ ನಾಗರಿಕರ ಆರೋಗ್ಯ ರಕ್ಷಣೆ, ಮೂಲಸೌಲಭ್ಯ ಒದಗಿಸುವುದು ಮಹಾನಗರ ಪಾಲಿಕೆಯ ಪ್ರಮುಖ ಜವಾಬ್ದಾರಿಯಾಗಿದೆ. ನಗರಪಾಲಿಕೆ ಹೋಟೆಲ್ ಉದ್ದಿಮೆದಾರರ ಜೊತೆ ಇರುತ್ತದೆ ಎಂದು ಭರವಸೆ ನೀಡಿದರು.
ದಾವಣಗೆರೆ ಹೋಟೆಲ್ ಉದ್ದಿಮೆದಾರರ ಸಂಘದ ಗೌರವ ಅಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ, ದಾವಣಗೆರೆಯಲ್ಲಿ ಹೋಟೆಲ್ ಉದ್ಯಮ ಪರವಾನಿಗೆ ಮೇಳ ನಡೆಸುತ್ತಿರುವುದು ಹೊಸ ಪ್ರಯತ್ನ. ಒಂದೇ ಕಡೆ ಎಲ್ಲ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ಹೋಟೆಲ್ ಉದ್ಯಮಿಗಳು ಕೋವಿಡ್ ನಿಯಮ ಪಾಲಿಸುತ್ತ ಬಂದಿದ್ದೇವೆ. ನಾವೂ ಸಹ ಸೋಂಕಿನ ನಿಯಂತ್ರಣ ಕಾರ್ಯದಲ್ಲಿ ಸಹಕಾರ ನೀಡಿದ್ದೇವೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಮೋತಿ ಆರ್. ಪರಮೇಶ್ವರ್ ಮಾತನಾಡಿ, 5 ವರ್ಷಗಳಿಗೊಮ್ಮೆ ಪರವಾನಿಗೆ ನವೀಕರಣ ಮಾಡಿದರೆ ಹೋಟೆಲ್ ಉದ್ದಿಮೆದಾರರಿಗೆ ಅನುಕೂಲ ಆಗುತ್ತದೆ ಎಂದು ಸಲಹೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಪಿ. ಮುದಜ್ಜಿ ಮಾತನಾಡಿ, ದಾವಣಗೆರೆಯಲ್ಲಿ ಹೋಟೆಲ್ ಉದ್ಯಮ ಸೇರಿದಂತೆ 20-25 ಸಾವಿರ ವಿವಿಧ ಬಗೆಯ ಉದ್ಯಮಗಳಿವೆ. ಉದ್ದಿಮೆದಾರರು ಪರವಾನಿಗೆ ಪಡೆಯುವುದು, ಸಕಾಲದಲ್ಲಿ ನವೀಕರಣ ಮಾಡಿಸುವುದರಿಂದ ನಗರಪಾಲಿಕೆಗೆ ಆದಾಯ ಬರುತ್ತದೆ. ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಅನುಕೂಲ ಆಗುತ್ತದೆ. ಪ್ರತಿ ಉದ್ದಿಮೆದಾರರು ಪರವಾನಗಿ ಪಡೆದು ನವೀಕರಣ ಮಾಡಿಸಬೇಕು ಎಂದು ತಿಳಿಸಿದರು.
ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಡಿ. ಗೋಣೆಪ್ಪ, ಸದಸ್ಯ ಗಡಿಗುಡಾಳು ಮಂಜುನಾಥ್, ಆರೋಗ್ಯಾಧಿ ಕಾರಿ ಡಾ| ಸಂತೋಷ್ ಇತರರು ಇದ್ದರು. ನವೀನ್‌ಚಂದ್ರ ಸ್ವಾಗತಿಸಿದರು. ಬಿ.ಕೆ. ಸುಬ್ರಹ್ಮಣ್ಯ ನಿರೂಪಿಸಿದರು.