ದಾವಣಗೆರೆ: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಜನಸಾಮಾನ್ಯರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದರಲ್ಲಿ ತೊಡಗಿರುವ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಮಂಗಳವಾರ ಸಂಜೆ ನಗರದ ರಾಂ ಅಂಡ್ ಕೋ ವೃತ್ತ, ಡೆಂಟಲ್ ಬಾಯ್ಸ ಹಾಸ್ಟೆಲ್ ರಸ್ತೆ, ಎಂಸಿಸಿ ಬಿ ಬ್ಲಾಕ್, ಬಿಐಇಟಿ ರಸ್ತೆ ಮುಂತಾದ ಕಡೆ ಜಾಗೃತಿ ಮೂಡಿಸಿದರು.
ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಕೈ ಮುಗಿದು ಮಾಸ್ಕ್ ಹಾಕುವಂತೆ ಮನವಿ ಮಾಡಿದರು.
ಕೊರೊನಾ ತಡೆಗೆ ಮಾಸ್ಕ್ ಧರಿಸುವುದು, ಸ್ವಚ್ಚತೆ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಮಾಡುವಂತೆ ತಿಳಿಸಿದರು. ಮಾಸ್ಕ್ ಹಾಕದೆ ಬಂದಿದ್ದ ಯುವಕನಿಗೆ ಏನು ಮಾಡುತ್ತಿದೀªಯ ಎಂದು ಕೇಳಿದಾಗ, ತಪೋವನದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೇನೆ ಎಂದು ಯುವಕ ಉತ್ತರಿಸಿದ. ವೈದ್ಯಕೀಯ ವೃತ್ತಿಯಲ್ಲಿ ಇರುವ ನೀವೇ ಹೀಗೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು. ಬಾಲಕನೊಬ್ಬ ಎಗ್‌ರೈಸ್ ಹೋಟೆಲ್‌ನಲ್ಲಿ ಇದ್ದಿದ್ದನ್ನು ನೋಡಿದ ಡಿಸಿ ಬೀಳಗಿ, ಸ್ವತ್ಛತೆ ಇರುವುದಿಲ್ಲ. ಹಾಗಾಗಿ ಕೊರೊನಾ ಮುಗಿದ ಮೇಲೆ ಎಗ್‌ರೈಸ್ ತಿನ್ನುವಂತೆ ಹೇಳಿದರು.
ನಾನು ಯಾರು ಬಂದಿದ್ದೇನೆ ಗೊತ್ತಾ ಎಂದು ಕೇಳಿದಾಗ ಬಾಲಕ ಡಿಸಿ ಸರ್ ಎಂದು ಆತ ಹೇಳಿದ. ಹೇಗೆ ಗೊತ್ತು ಎಂದಾಗ ಪೇಪರ್‌ನಲ್ಲಿ ನೋಡಿದ್ದೇನೆ ಎಂದು ಬಾಲಕ ಉತ್ತರಿಸಿದ ಘಟನೆಯೂ ನಡೆಯಿತು. ಕೆಲವು ಹೋಟೆಲ್‌ಗಳಲ್ಲಿ ಸ್ವತ್ಛತೆ ಇಲ್ಲದ್ದನ್ನು ನೋಡಿದ ಜಿಲ್ಲಾಧಿಕಾರಿಗಳು, ಕೈಗೆ ಗ್ಲೌಸ್ ಬಳಸಿ ಆಹಾರ ಪದಾರ್ಥ ಸರಬರಾಜು ಮಾಡಲು ಸೂಚಿಸಿದರು.
ಬಿಐಇಟಿ ರಸ್ತೆ ಸೂಪರ್ ಮಾರ್ಟ್‌ಗೆ ಬರುವ ಸಾರ್ವಜನಿಕರು ಸ್ಯಾನಿಟೈಸರ್ ಹಾಗೂ ಥರ್ಮೋಮೀಟರ್ ಬಳಕೆ ಮಾಡದೇ ಇರುವುದನ್ನು ಕಂಡ ಅವರು, ಮಾಲ್ ಮುಚ್ಚಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೊರೊನಾ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಮಕ್ಕಳನ್ನು ಹೊರಗೆ ಕರೆದುಕೊಂಡು ಬಾರದಂತೆ ಕೆಲವು ಪೋಷಕರಿಗೆ ಮನವಿ ಮಾಡಿದರು. ಬಿಐಇಟಿ ರಸ್ತೆಯಲ್ಲಿ ಬರುತ್ತಿದ್ದ ನಗರ ಸಾರಿಗೆ ಬಸ್ ಹತ್ತಿದ ಜಿಲ್ಲಾಧಿಕಾರಿ, ಬಸ್‌ನಲ್ಲಿ ಮಾಸ್ಕ್ ಹಾಕದೇ ಇದ್ದವರಿಗೆ ಮಾಸ್ಕ್ ನೀಡಿದರು. ಕೊರೊನಾ ಪ್ರಕರಣ ಹೆಚ್ಚಾಗಿವೆ. ಅವಶ್ಯಕತೆ ಇದ್ದರೆ ಮಾತ್ರ ಹೊರಗೆ ಬನ್ನಿ ಎಂದು ತಿಳಿಸಿದರು.
ಪಾಲಿಕೆ ಸದಸ್ಯ ಜಿ.ಎಸ್. ಮಂಜುನಾಥ್, ರಾಘವೇಂದ್ರ ಚವಾಣ್, ಎಂ.ಜಿ. ಶ್ರೀಕಾಂತ್, ಕೆ.ಟಿ. ಗೋಪಾಲಗೌಡ ಇತರರು ಇದ್ದರು.