ದಾವಣಗೆರೆ: ಸಂವಿಧಾನದ ಬದಲಾವಣೆ, ಹಿಂದುತ್ವ ಆಧಾರಿತ ಸಂವಿಧಾನ ಜಾರಿ ಬಗ್ಗೆ ಮಾತನಾಡುವವರು ನಾಟಕೀಯವಾಗಿ ಅಂಬೇಡ್ಕರ್ ಜಯಂತಿ ಆಚರಿಸುತ್ತಿದ್ದಾರೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಕೆ. ರಾಮಚಂದ್ರಪ್ಪ ಆರೋಪಿದರು. ಸೋಮವಾರ ಜಿಲ್ಲಾ ಸಿಪಿಐ ಕಚೇರಿಯಲ್ಲಿ ನಡೆದ ಅಂಬೇಡ್ಕರ್‌ರವರ 130ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲೇ ಅತಿ ಶ್ರೇಷ್ಠ ಸಂವಿಧಾನ ಎಂದೇ ಗುರುತಿಸಲ್ಪಡುವ ನಮ್ಮ ಸಂವಿಧಾನ ಸುಡಲು ಯತ್ನಿಸಿದವರು, ಬದಲಾವಣೆ ಮಾಡಿಯೇ ತೀರುತ್ತೇವೆ ಎನ್ನುವಂತಹವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಜಯಂತಿ ಆಚರಿಸುತ್ತಿರುವುದು ಬಹು ದೊಡ್ಡ ದುರಂತ ಎಂದರು.
ಭಾರತ ರತ್ನ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಾಲ್ಯದಲ್ಲೇ ಅನೇಕ ಸಂಕಷ್ಟ, ಅಸ್ಪೃಶ್ಯತೆಯ ನೋವು ಅನುಭವಿಸಿದ ವರು. ಅನೇಕ ಸವಾಲುಗಳ ನಡುವೆಯೂ ಛಲದಿಂದ ಶಿಕ್ಷಣವಂತರಾದವರು. ತಮ್ಮ ಬದುಕನ್ನು ದೇಶ, ಸಾರ್ವಜನಿಕರು ಸಂವಿಧಾನಕ್ಕಾಗಿ ಮೀಸಲಿಡುವ ಮೂಲಕ ಮಹಾನ್ ನಾಯಕರಾದವರು ಎಂದು ತಿಳಿಸಿದರು.
ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ 46 ಜನರನ್ನು ನೇಣಿಗೇರಿಸಲು ಮುಂದಾದಾಗ ಅದರ ವಿರುದ್ಧ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿ ತಮ್ಮ ಪತ್ನಿಯ ಸಾವಿನ ಸಂದರ್ಭದಲ್ಲೂ ಪ್ರಕರಣ ಖುಲಾಸೆಗೊಳಿಸಿದ ಕೀರ್ತಿ ಅಂಬೇಡ್ಕರರಿಗೆ ಸಲ್ಲುತ್ತದೆ. ಹಾಗಾಗಿಯೇ ಅವರು ಏಷ್ಯಾದಲ್ಲಿಯೇ ಮಹಾ ನ್ಯಾಯವಾದಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಂಬೇಡ್ಕರ್ ರವರು ತಮಗಾದ ಹಿಂಸೆ, ದಬ್ಟಾಳಿಕೆ, ದೌರ್ಜನ್ಯ ಸಹಿಸಿಕೊಂಡು ಅರ್ಥಶಾಸ್ತ್ರ, ರಾಜನೀತಿ ಸೇರಿದಂತೆ ಹತ್ತಾರು ವಿಷಯಗಳಲ್ಲಿ ಪದವಿ ಪಡೆದುಕೊಂಡು ಡಾಕ್ಟರೇಟ್ ಪಡೆದರು. ಸ್ವತಂತ್ರ ಭಾರತದ ಕಾರ್ಮಿಕ, ಕಾನೂನು ಸಚಿವರಾಗಿ ಕೆಲಸ ಮಾಡಿದವರು.
ಅನೇಕ ಜನಪರ ಕಾನೂನು ಜಾರಿಗೆ ತಂದರು ಎಂದು ಸ್ಮರಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಬಂಡವಾಳಶಾಹಿಗಳಿಗೆ ದಾರಿ ಮಾಡಿಕೊಡುತ್ತಿವೆ. ಸಂವಿಧಾನವನ್ನೇ ಬದಲಾಯಿಸಲು ನೋಡುತ್ತಿರುವುದರ ವಿರುದ್ಧ ನಾವೆಲ್ಲ ಸಿಡಿದೇಳುವ ಅಗತ್ಯವಿದೆ. ಇನ್ನೂ 20-30 ವರ್ಷಗಳಾದರೂ ಸರಿ ಬಂಡವಾಳಶಾಹಿ ಸಮಾಜವನ್ನು ಬುಡ ಸಹಿತ ಕಿತ್ತು ಹಾಕಿ ಸಮ ಸಮಾಜ ನಿರ್ಮಾಣ ಮಾಡಲು ಸಿದ್ಧರಾಗಬೇಕು. ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸಿಪಿಐನ ಎಲ್ಲಾ ವಿಭಾಗದ ನಾಯಕರುಗಳು ಜನ ಜಾಗೃತಿ ಮೂಡಿಸಿ, ಕೊರೊನಾ ತಡೆಗಟ್ಟಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಆನಂದರಾಜ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಬ್ಯಾಂಕ್ ನೌಕರರ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ, ಆವರಗೆರೆ ವಾಸು, ಐರಣಿ ಚಂದ್ರು, ಎಐಟಿಯುಸಿ ತಾಲೂಕು ಅಧ್ಯಕ್ಷ ಡಿ.ಎಸ್. ನಾಗರಾಜ್, ಆವರಗೆರೆ ಎನ್.ಟಿ. ಬಸವರಾಜ್, ಟಿ.ಎಸ್. ನಾಗರಾಜ್, ಎಂ.ಬಿ. ಶಾರದಮ್ಮ, ರುದ್ರಮ್ಮ, ಸರೋಜಮ್ಮ, ವಿಶಾಲಕ್ಷಮ್ಮ ಇತರರು ಇದ್ದರು. ಪಿ. ಷಣ್ಮುಖಸ್ವಾಮಿ ವಂದಿಸಿದರು.