ಹೊನ್ನಾಳಿ: ಯುಗಾದಿ ಹಬ್ಬ ಕನ್ನಡ ನಾಡಿನ ಬಹುದೊಡ್ಡ ಹಾಗೂ ಹೊಸ ವರ್ಷ ಆರಂಭದ ಹಬ್ಬ. ರೈತರು ವರ್ಷದ ಮೊದಲ ಬೇಸಾಯ ಚಟುವಟಿಕೆಗಳಿಗೆ ಚಾಲನೆ ನೀಡುವ ಹಬ್ಬವಾಗಿದೆ. ನ್ಯಾಮತಿ ತಾಲೂಕಿನ ಮಲ್ಲಿಗೆನಹಳ್ಳಿ ಗ್ರಾಮದ ಅನ್ನದಾತರು ಸಂಪ್ರದಾಯದಂತೆ ಹೊಸ ಬೇಸಾಯಕ್ಕೆ ಯುಗಾದಿ ಹಬ್ಬದಂದು ಭೂಮಿತಾಯಿಗೆ ಗ್ರಾಮದ ಗ್ರಾಮಸ್ಥರು ಸಾಮೂಹಿಕ ಪೂಜೆ ಮಾಡಿ ಭೂತಾಯಿ ಉತ್ತಮ ಬೆಳೆ ಕೊಟ್ಟು ರೈತರ ಕೈ ಹಿಡಿಯಲಿ ಎಂದು ಪ್ರಾರ್ಥಿಸಿದರು.
ಮಲ್ಲಿಗೆನಹಳ್ಳಿ ಗ್ರಾಮದ ಅನ್ನದಾತರು ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳಿಗೆ ನೀರು ತುಂಬಿ ಉತ್ತಮ ಬೆಳೆಯಾಗಲಿ ಎಂದು ಭೂತಾಯಿಗೆ ಪ್ರಾರ್ಥಿಸಿದರು. ಯುಗಾದಿ ಹಬ್ಬದ ಸಂಭ್ರಮದ ಬಳಿಕ ಇಡೀ ಗ್ರಾಮಸ್ಥರು ದೇವರಭೂಮಿಗೆ ಪೂಜೆ ನೆರವೇರಿಸಿ ಸಾಷ್ಟಾಂಗ ನಮಸ್ಕಾರ ಮಾಡಿ ಕೃಷಿ ಚಟುವಟಿಕೆಗೆ ಪ್ರತಿ ವರ್ಷದಂತೆ ಸಾಮೂಹಿಕವಾಗಿ ಚಾಲನೆ ನೀಡಿದರು.
ನ್ಯಾಮತಿ ಪಟ್ಟಣ ಸೇರಿದಂತೆ ಇತರ ಗ್ರಾಮಗಳಲ್ಲಿ ಅನ್ನದಾತರು ಮೊದಲ ಬೇಸಾಯ ಮಾಡಬೇಕಾದರೆ ಗ್ರಾಮದ ಜಂಗಮರು, ಪುರೋಹಿತರ ಪಂಚಾಂಗದ ಪ್ರಕಾರ ಅಧಿದೇವತೆಯ ಅಪ್ಪಣೆಯನ್ನು ಕೇಳಿ ಯಾರ ಹೆಸರಿಗೆ ಬಲ ಬರುತ್ತದಯೋ ಬಲಚಾರದ ವ್ಯಕ್ತಿಯು ಗ್ರಾಮ ದೇವತೆಗೆ ಗ್ರಾಮದ ಅಗಸೆ (ಕರೆಗಲ್ಲು) ಬಾಗಿಲು, ನೇಗಿಲು ಮತ್ತು ಭೂಮಿಗೆ ಪೂಜೆ ಸಲ್ಲಿಸಿ ಮೊದಲ ಬೇಸಾಯ (ಚಿನ್ನದ ಉಳುಮೆ) ವರ್ಷಧಾರೆ ಉಳುಮೆಗೆ ಚಾಲನೆ ನೀಡುವ ಸಂಪ್ರದಾಯ ಒಂದು ಕಾಲದ ಅರೆಮಲೆನಾಡಿನ ಹೆಬ್ಟಾಗಿಲು ಎಂದು ಕರೆಸಿಕೊಂಡ ನ್ಯಾಮತಿ ಪ್ರಾಂತ್ಯದಲ್ಲಿ ಈಗಲೂ ಕೂಡ ಆಚರಣೆಯನ್ನು ಮಾಡುತ್ತಿದ್ದಾರೆ.
ತಮ್ಮ ತಮ್ಮ ಜಮೀನುಗಳಲ್ಲಿ ಮೊದಲ ಬೇಸಾಯ ಮಾಡುವುದು ಸಂಪ್ರದಾಯ ಅದರೆ ನ್ಯಾಮತಿ ತಾಲೂಕಿನ ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ಮಾತ್ರ ವಿಶೇಷವಾಗಿ ಸುಮಾರು ಐದು ಎಕರೆಯ ವಿಸ್ತ್ರೀರ್ಣದ ದೇವರ ಜಮೀನಿನಲ್ಲಿ ಗ್ರಾಮಸ್ಥರು ಸಾಮೂಹಿಕ ಪೂಜೆ ಮಾಡಿ ಚಾಲನೆ ನೀಡುವ ಪುರಾತನ ಕಾಲದಿಂದಲೂ ಆಚರಿಸುತ್ತಾ ಬಂದಿದ್ದು ದೇವರ ಜಮೀನನಲ್ಲಿ ಈಗಲೂ ಕೂಡ ಚಾಚು ತಪ್ಪದೆ ಆಚರಣೆ ಮಾಡುತ್ತಿದ್ದಾರೆ. ಅದೇ ರೀತಿ ಈ ವರ್ಷವೂ ಎಲ್ಲಾ ಕೈಕರ್ಯಗಳನ್ನು ಮಾಡಿದರು.
ಇದಕ್ಕೂ ಮಾದಲು ಮನೆಯಲ್ಲಿರುವ ಎತ್ತು, ದನ ಕರುಗಳ ಮೈ ತೊಳೆದು ಕೃಷಿ ಪರಿಕರಿಗಳನ್ನು ಸ್ವತ್ಛಗೊಳಿಸಿ ಮಾವಿನ ಸಪ್ಪು, ಬಾಳೆಕಂದುಗಳನ್ನು ಕಟ್ಟಿ ಆಲಂಕರಿಸಿ ಮನೆಯಲ್ಲಿ ವಿವಿಧ ರೀತಿಯ ಸಿಹಿ ತಿನಿಸುಗಳನ್ನು ಮಾಡಿಕೊಂಡು ಯಾರ ಹೆಸರಿಗೆ ಬಲ ಬಂದಿರುತ್ತೆ ಅವರು ಕುಟುಂಬದ ಸದಸ್ಯರೊಂದಿಗೆ ಬೇಸಾಯದ ಜೊತೆ ದೇವರ ಜಮೀನುಗೆ ತೆರಳಿ ಭೂಮಿಪೂಜೆ ನೆರವೇರಿಸಿ ನೈವೇದ್ಯ ಮಾಡಿ ಮಳೆ, ಬೆಳೆ ಸಮೃದ್ಧಿಯಾಗಲಿ ಎಂದು ದೇವರಲ್ಲಿ ಮೊರೆ ಇಟ್ಟು ಬೇಸಾಯ ಮಾಡಿದರು.