ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆ ತೀವ್ರವಾಗಿ ವ್ಯಾಪಿಸುತ್ತಿದ್ದು, ಸಾರ್ವಜನಿಕರು ಮುಂಜಾಗ್ರತೆ ವಹಿಸದಿದ್ದರೆ ಭಾರೀ ಗಂಡಾಂತರಕ್ಕೆ ಸಿಲುಕಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ಎಚ್ಚರಿಸಿದ್ದಾರೆ. ಭಾನುವಾರ ಜನನಿಬಿಡ ಪ್ರದೇಶಗಳಾದ ತರಕಾರಿ ಮಾರುಕಟ್ಟೆ, ಎಪಿಎಂಸಿ, ಗಡಿಯಾರ ಕಂಬ ಸೇರಿದಂತೆ ಹಲವೆಡೆ ಮಾಸ್ಕ್ ಅಭಿಯಾನ ನಡೆಸಿ, ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಿದರು. ನಿಯಮ ಉಲ್ಲಂಘಿಸಿದವರಿಗೆ ಸ್ಥಳದಲ್ಲೇ ದಂಡ ವಿ ಧಿಸುವ ಎಚ್ಚರಿಕೆ ನೀಡಿದರು.
ಅನೇಕರಿಗೆ ದಂಡ ವಿಧಿಸಿ, ಮಾಸ್ಕ್ ನೀಡುವ ಮೂಲಕ ಜಾಗೃತಿ ಮೂಡಿಸಿದರು. ಮನೆಯಿಂದ ಹೊರಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡೇ ಬರಬೇಕು. ಇಲ್ಲದಿದ್ದಲ್ಲಿ ದಂಡ ಹಾಕಲಾಗುವುದು ಮಾತ್ರವಲ್ಲ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮಾಸ್ಕ್ ಧರಿಸದ ಅನೇಕರಿಗೆ ಖುದ್ದಾಗಿ ಭರ್ಜರಿ ಕ್ಲಾಸ್ ತೆಗೆದುಕೊಂಡರು. ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಏನೆಲ್ಲ ಕ್ರಮ ತೆಗೆದುಕೊಳ್ಳುತ್ತಿದೆ. ಮಾಸ್ಕ್ ಹಾಕಿಕೊಳ್ಳದೇ ಓಡಾಡುವುದು, ವ್ಯಾಪಾರ ಮಾಡುವುದು ಸರಿ ಅಲ್ಲ. ಸರ್ಕಾರ ಪ್ರತಿಯೊಬ್ಬರ ಜೀವ ಉಳಿಸುವುದಕ್ಕಾಗಿಯೇ ನಿಯಮ ಮಾಡಿದೆ. ಅದನ್ನ ಪಾಲಿಸಬೇಕು. ಆದರೆ, ಏನೂ ಆಗುವುದೇ ಇಲ್ಲ ಎನ್ನುವಂತೆ ವರ್ತಿಸುವುದು ಸರಿ ಅಲ್ಲ ಎಂದು ಅನೇಕರಿಗೆ ತಿಳಿವಳಿಕೆ ನೀಡಿದರು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸ್ ಮಾಡಿಕೊಂಡು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ನಿಮ್ಮ ಬಗ್ಗೆ ನೀವು ಜಾಗರೂಕರಾಗಿರಬೇಕು. ನಿಮಗಾಗಿ ರಜೆ ದಿನಗಳನ್ನು ನೋಡದೆ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ನಮಗೂ ಮನೆ, ಹೆಂಡತಿ, ಮಕ್ಕಳಿದ್ದಾರೆ. ಅರ್ಥಮಾಡಿಕೊಳ್ಳಿ. ಕೋವಿಡ್ ನಿಯಮಗಳನ್ನು ಪಾಲಿಸದವರಿಗೆ ದಂಡ ವಿ ಧಿಸಲಾಗುತ್ತದೆ ಎಂದು ಅವರು ಎಚ್ಚರಿಸಿದರು. ಮಾಸ್ಕ್ ಧರಿಸದೇ ಇದ್ದಂತಹವರನ್ನ ಖುದ್ದು ಪತ್ತೆ ಹಚ್ಚಿ, ದಂಡ ವಿಧಿಸಿದರು. ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಸಹ ಮಾಸ್ಕ್ ಧರಿಸದೇ ಇದ್ದವರಿಗೆ ಸರಿಯಾಗಿ ಪಾಠ ಕಲಿಸಿದರು. ಜಾಗೃತಿ ಮೂಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿ ಕಾರಿ, ಕಳೆದ ವರ್ಷ ಇದೇ ವೇಳೆಗೆ ದಾವಣಗೆರೆ ಜಿಲ್ಲೆ ಗ್ರೀನ್ ಜೋನ್ (ಹಸಿರು ವಲಯ)ದಲ್ಲಿತ್ತು. ಪ್ರಾರಂಭಿಕ ಹಂತದಲ್ಲಿ ಒಂದೆರಡು ಕೇಸ್ ಬಂದಾಗ ಸಾರ್ವಜನಿಕರು ಸಾಕಷ್ಟು ಜಾಗರೂಕತೆಯಿಂದ ಸಹಕಾರ ನೀಡುತ್ತಿದ್ದರು. ಆದರೆ,ಈಗ ದಿನದಿಂದ ದಿನಕ್ಕೆ ಸೋಂಕು ತೀವ್ರಗೊಳ್ಳುತ್ತಿದೆ. ಶನಿವಾರ 122 ಹಾಗೂ ಭಾನುವಾರ 180 ಪ್ರಕರಣಗಳು ವರದಿಯಾಗಿವೆ.
ಈಗಾಗಲೇ 500 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. ಆದರೂ ಸಹ ಜನರು ಕೊರೊನಾ ಭಯವೇ ಇಲ್ಲದಂತೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದು ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ನಾವು ಕೂಡ ಸಹಿಸುವುದಿಲ್ಲ. ನಿಯಮ ಉಲ್ಲಂಘನೆ ಮಾಡುವವರಿಗೆ ಕಾನೂನಾತ್ಮಕವಾದ ಕ್ರಮ ತೆಗೆದುಕೊಳ್ಳುತ್ತೇವೆ. ಈಗ ಕೋವಿಡ್ ಕುರಿತು ಜನಸಾಮಾನ್ಯರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಭಾರೀ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು. ಶನಿವಾರ ನಡೆದ ವೀಡಿಯೋ ಕಾನ್# ರೆನ್ಸ್‌ನಲ್ಲಿ ಮೂವರು ಸಚಿವರು ಕೊರೊನಾ ನಿಯಂತ್ರಣ ಸಂಬಂಧ ನೀಡಿರುವ ಕಟ್ಟುನಿಟ್ಟಿನ ಸೂಚನೆಗಳನ್ನು ಕಾರ್ಯಗತಗೊಳಿಸಲಾಗುವುದು. ಈ ಹಿನ್ನೆಲೆಯಲ್ಲಿ ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ಮಾಸ್ಕ್ ಅಭಿಯಾನ, ಕಾರ್ಯಾಚರಣೆ ನಡೆಸಲಾಗುತ್ತಿದೆ. ವಿವಿಧ ಸಭೆ, ಸಮಾರಂಭಗಳಲ್ಲಿ ಎಷ್ಟು ಜನ ಸೇರಬೇಕು ಎಂಬ ಸೂಚನೆ ನೀಡಲಾಗಿದೆ. ಎಲ್ಲರೂ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.
ಕರ್ತವ್ಯ ನಿರತ ವೈದ್ಯರುಗಳಿಗೆ ಒಂದು ವೇಳೆ ಪಾಸಿಟಿವ್ ಬಂದರೆ ಅಂತಹವರನ್ನು ಸರ್ಕಾರಿ ಗೆಸ್ಟ್ ಹೌಸ್‌ಗಳಲ್ಲಿ ಕ್ವಾರಂಟೈನ್ ಮಾಡಲು ಈಗಾಗಲೇ ಸರ್ಕಾರಿ ಗೆಸ್ಟ್ ಹೌಸ್‌ಗಳನ್ನು ನಮ್ಮ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ ಹಾಗೂ ಆಸ್ಪತ್ರೆಗಳಲ್ಲಿ ರೋಗಿಗಳನ್ನು ನೋಡಲು ಬರುವವರನ್ನು ನಿಯಂತ್ರಿಸಲು ಬ್ಯಾರಿಕೇಡ್ ಹಾಕಲಾಗಿದೆ. ಈಗಾಗಲೇ ಜಿಲ್ಲೆಯ ಆಸ್ಪತ್ರೆಗಳಲ್ಲಿ 1,882 ಬೆಡ್‌ಗಳು ಸಿದ್ಧವಿದ್ದು, 159 ಬೆಡ್‌ಗಳು ಭರ್ತಿಯಾಗಿವೆ. ಹಿಂದಿನ ವರ್ಷ 933 ಹಾಸಿಗೆಗಳು ಸಾಕಾಗಿದ್ದವು. ಈಗ ಎಂತಹ ಪರಿಸ್ಥಿತಿ ಬಂದರೂ ನಿಭಾಯಿಸಲು ಜಿಲ್ಲಾಡಳಿತ ಸಿದ್ಧವಿದೆ ಎಂದು ತಿಳಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಮಾತನಾಡಿ, ಕೊರೊನಾ ಸೋಂಕು ತೀವ್ರಗೊಳ್ಳುತ್ತಿದ್ದರೂ ಜನರು ನಿರ್ಲಕ್ಷé ವಹಿಸುತ್ತಿದ್ದಾರೆ. ಈಗಾಗಲೇ ಜಿಲ್ಲಾ ಧಿಕಾರಿಗಳೊಂದಿಗೆ ಜನಸಂದಣಿ ಇರುವ ಸ್ಥಳಗಳಿಗೆ ತೆರಳಿ ಜಾಗೃತಿ ಮೂಡಿಸಿ, ನಿಯಮ ಉಲ್ಲಂಘನೆ ಮಾಡುವವರಿಗೆ ಸ್ಥಳ ದಂಡ ವಿ ಧಿಸುತ್ತಿದ್ದೇವೆ. ಮದುವೆ ಸಮಾರಂಭ, ಕಲ್ಯಾಣ ಮಂಟಪ, ರಾಜಕೀಯ ಆಚರಣೆಗಳು ಸೇರಿದಂತೆ ಸಭೆ ಸಮಾರಂಭಗಳಲ್ಲಿ ಜನರು ಸೇರುವುದನ್ನ ಮಿತಿಗೊಳಿಸಲಾಗಿದೆ ಹಾಗೂ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ರೆಮ್ ಡೆಸಿವರ್ ಕಾಳಸಂತೆಯಲ್ಲಿ ಮಾರಾಟವಾಗುವುದು ಕಂಡುಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಪಿ. ಮುದಜ್ಜಿ, ತಹಶೀಲ್ದಾರ್ ಬಿ.ಎನ್. ಗಿರೀಶ್ ಇತರರು ಇದ್ದರು.