ಹರಿಹರ: ಸದಾ ಕಾಲ ಬಟ್ಟೆ ನೇಯುವ ಕಾಯಕ ಮಾಡುತ್ತಾ ಅದರಲ್ಲೇ ಭಗವಂತನನ್ನು ಕಾಣುತ್ತಿದ್ದ ದೇವರ ದಾಸಿಮಯ್ಯರ ಕಾಯಕ ನಿಷ್ಠೆ ಎಲ್ಲರಿಗೂ ಮಾದರಿ ಎಂದು ತುಮ್ಮಿನಕಟ್ಟೆ ಮಾರ್ಕಂಡೇಯ ಪದ್ಮಶಾಲಿ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ ಹೇಳಿದರು. ತಾಲೂಕು ಆಡಳಿತದಿಂದ ಶನಿವಾರ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಗುಡಿ-ಗುಂಡಾರಗಳ ಅಲೆಯುವ ಡಾಂಭಿಕ ಭಕ್ತಿಗಿಂತ ನಾವು ಮಾಡುವ ಕಾಯಕವನ್ನೇ ಶ್ರದ್ಧೆ, ನಿಷ್ಠೆಯಿಂದ ಮಾಡುವುದು ತೋರಿಕೆಯ ಪ್ರಾರ್ಥನೆಗಿಂತ ಮಿಗಿಲಾದುದು ಎಂದರು. ನಿಷ್ಕಳಂಕ ಬದುಕು ರೂಪಿಸಿಕೊಂಡಿದ್ದ ದಾಸಿಮಯ್ಯರವರು ಕಾಯಕ ನಿಷ್ಠೆ ಮಾತ್ರವಲ್ಲ, ಸಮಾಜದಲ್ಲಿ ಸಮಾನತೆ ತರುವುದಕ್ಕಾಗಿ ಹೋರಾಡಿದರು. ಶರಣರಲ್ಲಿ ಪ್ರಥಮವಾಗಿ ವಚನಗಳನ್ನು ರಚಿಸಿದವರು ದೇವರ ದಾಸಿಮಯ್ಯ. ಅನಂತರ ಬಂದ ಶರಣರ ವಚನಗಳಲ್ಲೂ ಅವರ ವಚನಗಳ ಗಾಢ ಪ್ರಭಾವವನ್ನು ಕಾಣಬಹುದು ಎಂದು ತಿಳಿಸಿದರು.
ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ಅದ್ಯ ವಚನಕಾರರಾದ ದೇವರ ದಾಸಿಮಯ್ಯ 12ನೇ ಶತಮಾನದಲ್ಲಿಯೇ ನೂರಾರು ವಚನಗಳನ್ನು ಬರೆದಿದ್ದಾರೆ ಅವುಗಳ ತಿರುಳನ್ನು ಅರ್ಥ ಮಾಡಿಕೊಂಡು ನಾವು ಜೀವನವನ್ನು ಸಾಗಿಸಿದರೆ ಅವರ ಜಯಂತಿ ಅಚರಣೆ ಅರ್ಥಪೂರ್ಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ದೇವಾಂಗ ಮಾತನಾಡಿ, ದೇವರ ದಾಸಿಮಯ್ಯನವರು ಶ್ರಮ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದರು. ಅವರು ಬರೆದಿರುವ ವಚನಗಳನ್ನು ಓದಿ ಅರ್ಥೈಸಿಕೊಂಡರೆ ನಮ್ಮ ಜೀವನ ಶೈಲಿಯಲ್ಲಿ ಮಹತ್ತರವಾದ ಬದಲಾವಣೆಯಾಗುತ್ತದೆ. ಶಂಕರ ದಾಸಿಮಯ್ಯ, ಜೇಡರ ದಾಸಿಮಯ್ಯ, ದೇವರ ದಾಸಿಮಯ್ಯ ಎಂದು ಭೇದ ಮಾಡದೆ ಇವರೆಲ್ಲರೂ ಒಂದೇ ಎಂದು ಏಕತೆಯಿಂದ ಬಾಳಬೇಕು ಎಂದರು.
ನೇಕಾರ ಸಮಾಜದ ಮುಖಂಡ ಎಚ್. ಕೆ. ಕೊಟ್ರಪ್ಪ, ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಜಿ.ಎಚ್. ಮರಿಯೋಜಿ ರಾವ್, ಪ್ರಕಾಶ್ ಕೊಳೂರು, ಹನುಮಂತ ರಾವ್, ರಂಗನಾಥ್, ನಾಗರಾಜ್, ವೀರಣ್ಣ ಅಗಡಿ, ಗಂಗಾಧರ ಕೆ., ವೆಂಕಣ್ಣ ವಾಸನ, ಪ್ರಭು.ಕೆ, ಚಂದ್ರಮ್ಮ ಎಚ್. ಕೆ, ಅರುಣಾ, ಓಂಕಾರಪ್ಪ ಮಾಳಗಿ, ಹೇಮಣ್ಣ, ಮಂಜುನಾಥ್ ಬಳ್ಳಿ, ನಟರಾಜ್, ದಿಲೀಪ್ ಕುಮಾರ್, ರುದ್ರಪ್ಪ ಶಿರಗೂರು, ಹನುಮಂತಪ್ಪ ಗುತ್ತಲ ಇತರರು ಇದ್ದರು.