ಹೊನ್ನಾಳಿ: ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಅವಳಿ ತಾಲೂಕಿನಲ್ಲಿ ತಮ್ಮ ಐದು ವರ್ಷ ಅವಧಿ ಯಲ್ಲಿ ಏನು ಗುರುತರವಾದ ಕೆಲಸ ಮಾಡಿದ್ದಾರೆ ಎನ್ನುವುದನ್ನು ತೋರಿಸಲಿ. ಆಗ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ಸವಾಲೆಸೆದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಮುಗಿದು ಮೂರು ವರ್ಷಗಳಿಂದ ಮಾಯವಾಗಿದ್ದ ಶಾಂತನಗೌಡ ಎರಡು ವರ್ಷಗಳಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಮಾಧ್ಯಮಗಳ ಎದುರು ಪ್ರತ್ಯಕ್ಷರಾಗಿದ್ದಾರೆ. ನನ್ನ, ಸಹೋದರರ ಹಾಗೂ ಬಿಜೆಪಿ ತಾಲೂಕು ಅಧ್ಯಕ್ಷರ ಮೇಲೆ ವಿನಾಕಾರಣ ಆರೋಪ ಮಾಡಿದ್ದಾರೆ.
ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸುಳ್ಳು ಹೇಳುವ ಮೂಲಕ ಅವಳಿ ತಾಲೂಕಿನ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹರಿ ಹಾಯ್ದರು. ಕೋವಿಡ್ ಅವಧಿಯಲ್ಲಿ ಜನರ ಕಷ್ಟದಲ್ಲಿ ಭಾಗಿಯಾಗದ ಮಾಜಿ ಶಾಸಕರು ಕೋವಿಡ್ ಬಂದಾಗ ಎಲ್ಲಿಗೆ ಹೋಗಿದ್ದರು, ಯಾರಿಗೆ ಊಟ, ತಿಂಡಿ, ಮಾಸ್ಕ್ ಏನನ್ನಾದರೂ ವಿತರಿಸಿದ್ದಾರಾ ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ನಾನು ಜನರ ಮಧ್ಯೆ ಇದ್ದು ಊಟ, ಔಷದಿ ಕೊಟ್ಟು ಮಾನವೀತೆ ಮೆರೆದಿದ್ದೇನೆ. ಕೇವಲ ವಯಸ್ಸನ್ನು ಹೇಳಿಕೊಂಡು ನಿಮ್ಮ ಹಾಗೆ ಢೋಂಗಿ ರಾಜಕಾರಣ ಮಾಡಿಲ್ಲ. ನಾನು ಸೋತಾಗಲು ಮನೆಯಲ್ಲಿ ಕುಳಿತುಕೊಳ್ಳದೆ ಜನರೊಂದಿಗಿದ್ದು, ಅವರ ಸಂಕಷ್ಟದಲ್ಲಿ ಭಾಗಿಯಾಗಿದ್ದೇನೆ ಎಂದರು.
ನಾನು ಭ್ರಷ್ಟಾಚಾರ ಮಾಡಿದ್ದರೆ ಬಹಿರಂಗಪಡಿಸಲಿ. ರೇಣುಕಾಚಾರ್ಯ ಪಲಾಯನ ಮಾಡುವ ವ್ಯಕ್ತಿಯಲ್ಲ. ನಿಮ್ಮ ರೈಸ್ ಮಿಲ್‌ನಲ್ಲಿ ನೀವೇ ಅಕ್ಕಿ, ವಿದ್ಯುತ್ ಕದ್ದಿದ್ದಿರೀ, ಲಿಕ್ಕರ್ ಕಳ್ಳ ದಂಧೆ ಮಾಡಿದ್ದಿರಿ, ಮನೆಯಲ್ಲಿ ಕೂತು ಅಪ್ಪ-ಮಕ್ಕಳು ಮರಳಿನ ಟೋಕನ್ ಕೊಟ್ಟಿದ್ದೀರಿ ಎಂದು ಆರೋಪಗಳ ಸುರಿಮಳೆಗೈದ ರೇಣುಕಾಚಾರ್ಯ, ಇಂತಹ ದಂಧೆಗಳನ್ನು ನಾನು ಮತ್ತು ಸಹೋದರರು ಯಾವತ್ತಿಗೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ನಿಮ್ಮ ಅವ ಧಿಯಲ್ಲಿ ಟ್ರಾಕ್ಟರ್ ಒಂದಕ್ಕೆ ಒಂಭತ್ತ ಸಾವಿರ ರೂ. ಇದ್ದ ಮರಳು, ನನ್ನ ಅವಧಿಯಲ್ಲಿ ನಾಲ್ಕೈದು ಸಾವಿರಕ್ಕೆ ಸಿಗುತ್ತಿದೆ. ನನ್ನ ರಾಜಕೀಯ ಏಳ್ಗೆಯನ್ನು ಸಹಿಸದೆ ನನ್ನ ವಿರುದ್ಧ ಆರೋಪ ಮಾಡುತ್ತಿರಾ ಎಂದು ಪ್ರಶ್ನಿಸಿದರು.
ನೆರಲಗುಂಡಿ ಗ್ರಾಮದ ಕೆರೆ ನಿರ್ಮಾಣ ಹೆಸರಿನಲ್ಲಿ 50 ಲಕ್ಷ ರೂ. ಲಪಟಾಯಿದ್ದಾರೆ ಎಂದು ಆರೋಪ ಮಾಡುವ ಮಾಜಿ ಶಾಸಕರು, ಕೂಡಲೇ ಗ್ರಾಮಕ್ಕೆ ತೆರಳಿ ಗ್ರಾಮಸ್ಥರನ್ನು ವಿಚಾರಿಸಲಿ. ಗ್ರಾಮಸ್ಥರ ಮನವಿ ಮೇರಗೆ ಕೆರೆ ಮಣ್ಣನ್ನು ತೆಗೆಸಿದ್ದೇವೆಯೇ ಹೊರತು ಇದರಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ. ಭ್ರಷ್ಟಾಚಾರ ಸಾಬೀತಾದರೆ ನಾನು ನೇಣಿಗೆ ಏರುತ್ತೇನೆ. ಆಗ ಮತ್ತೆ ಶಾಸಕನಾಗುವ ಹಗಲು ಕನಸು ಕಾಣುವ ಮಾಜಿ ಶಾಸಕರು, ಕನಸನ್ನು ನನಸು ಮಾಡಿಕೊಳ್ಳಲಿ ಎಂದು ಕುಟುಕಿದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ. ಮಂಜೂರಾಗಿದ್ದು, 2800 ಮೀಟರ್ ಉದ್ದದಲ್ಲಿ 2250 ಮೀಟರ್ ಕೆಲಸವಾಗಿದೆ. ಈ ಕಾಮಗಾರಿಗೆ 38 ಲಕ್ಷ ರೂ. ಖರ್ಚಾಗಿದ್ದು ಬಾಕಿ ಕೆಲಸ ಪ್ರಗತಿಯಲ್ಲಿದೆ. 5.50 ಕೋಟಿ ರೂ. ವೆಚ್ಚದ ನೆರಲಗುಂಡಿ, ಬಸವಾಪುರ, ಕಮ್ಮರಗಟ್ಟೆ ರಸ್ತೆ ಕಾಮಗಾರಿಯಲ್ಲಿ 7.9 ಕಿಮೀ ರಸ್ತೆಗೆ ಟೆಂಡರ್ ಆಗಿದೆ. ಅಗ್ರಿಮೆಂಟ್ ಹಾಗೂ ವರ್ಕ್ ಆರ್ಡರ್ ಸಿಕ್ಕಿಲ್ಲ. ಹಾಗಾಗಿ ಕಳಪೆಯಾಗಲು ಹೇಗೆ ಸಾಧ್ಯ, 75 ತಿಂದು 25 ರಷ್ಟು ಕೆಲಸ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ. ಇವರ ಆರೋಪ ತಾನು ತಿಂದು ಮೇಕೆ ಬಾಯಿಗೆ ಒರೆಸಿದ ಹಾಗಿದೆ ಎಂದರು.