ದಾವಣಗೆರೆ: ಕೇಂದೀಯ ಕನ್ನಡ ಸಾಹಿತ್ಯ ಪರಿಷತ್ತಿಗೆ ಕೊಡಬೇಕಾದ 10 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿ ದ್ದಾರೆ ಎಂಬುದಾಗಿ ಶಿವಕುಮಾರಸ್ವಾಮಿ ಕುರ್ಕಿ ತಮ್ಮ ವಿರುದ್ಧ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎ.ಆರ್. ಉಜ್ಜನಪ್ಪ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2012-15 ರವರೆಗೆ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷನಾಗಿದ್ದ ಅವಧಿಯಲ್ಲಿ ಪ್ರತಿ ವರ್ಷ ಕೇಂದ್ರ ಸಾಹಿತ್ಯ ಪರಿಷತ್ತಿನಿಂದ ಬಂದ ಅನುದಾನದ ಖರ್ಚು, ವೆಚ್ಚದ ಬಗ್ಗೆ ಸರಿಯಾದ ಸಮಯಕ್ಕೆ ಆಡಿಟ್ ಸಲ್ಲಿಸಲಾಗಿದೆ. ಶಿವಕುಮಾರಸ್ವಾಮಿ ಕುರ್ಕಿ ಆರೋಪ ಮಾಡಿರುವಂತೆ 10 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿಲ್ಲ. ಅದಕ್ಕೆ ಸಂಬಂಧಿಸಿದಂತೆ ಲೆಕ್ಕ ಕೊಡಬೇಕಾಗಿರುವುದನ್ನು ಬಾಕಿ ಉಳಿಸಿಕೊಳ್ಳಲಾಗಿತ್ತು. ಎಲ್ಲ ವಿವರವನ್ನು ಕಸಾಪಕ್ಕೆ ನೀಡಲಾಗಿದೆ. ಆದರೂ ಯಾವ ಕಾರಣಕ್ಕೆ ಬಾಕಿ ಇದೆ ಎಂದು ತೋರಿಸಲಾಗಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದರು.
ಮಾಜಿ ಅಧ್ಯಕ್ಷ ಬಿ.ಎಂ. ಸದಾಶಿವಪ್ಪ ಅವರಿಂದ ನಾನು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ 4,129 ರೂಪಾಯಿ ಪ್ರಾರಂಭ ಶಿಲ್ಕು, ಸಿಂಡಿಕೇಟ್ ಬ್ಯಾಂಕ್ ನಲ್ಲಿ 4 ಲಕ್ಷ ರೂ. ನಿಗದಿತ ಠೇವಣಿ ಇರುವುದನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಅದನ್ನು ಸೇರಿಸಿಕೊಂಡು ಲೆಕ್ಕ ನೀಡುವಂತೆ 2006ರ ಏ. 5 ರಂದು ಪತ್ರ ಬರೆಯಲಾಗಿತ್ತು. ಅದರಂತೆ ನಾನೇ ಖುದ್ದು ಕೇಂದ್ರೀಯ ಸಾಹಿತ್ಯ ಪರಿಷತ್ತಿಗೆ ತೆರಳಿ ಲೆಕ್ಕಪತ್ರ ಒಪ್ಪಿಸಿದ್ದೇನೆ ಎಂದು ಹೇಳಿದರು. ಪುಂಡಲೀಕ ಹಾಲಂಬಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಚುನಾವಣೆಗೆ ಮುನ್ನವೇ ಲೆಕ್ಕಪತ್ರ ಸಲ್ಲಿಸುವಂತೆ ತಿಳಿಸಿದಂತೆ ಲೆಕ್ಕ ನೀಡಲಾಗಿತ್ತು. ಆದರೆ ಯಾವ ಕಾರಣಕ್ಕೆ ಲೆಕ್ಕ ಕೊಡುವುದು ಬಾಕಿ ಇದೆ ಎಂಬುದನ್ನು ತೋರಿಸಲಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಚುನಾವಣಾ ಭರಾಟೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೋಗಲಿಕ್ಕೆ ಆಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕೇಂದೀಯ ಸಾಹಿತ್ಯ ಪರಿಷತ್ತಿನಿಂದ ಇಂತಹ ಕಾರ್ಯಕ್ರಮಕ್ಕಾಗಿಯೇ ಚೆಕ್ ಮೂಲಕ ಹಣ ಬಿಡುಗಡೆ ಮಾಡಲಾಗುತ್ತದೆ. ಬಂದಂತಹ ಹಣ ಖರ್ಚು ಮಾಡಿ, ಲೆಕ್ಕಪತ್ರ ಒಪ್ಪಿಸಲಾಗಿದೆ. ಹಾಗಾಗಿಯೇ ಕಳೆದ 5 ವರ್ಷದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತಿಗೆ ಹಣ ಬಂದಿದೆ. ಲೆಕ್ಕಪತ್ರ ಸರಿಯಾಗಿ ಇಲ್ಲ ಎಂದಾಗಿದ್ದರೆ ಅನುದಾನ ಬರುತ್ತಲೇ ಇರುತ್ತಿರಲಿಲ್ಲ ಎಂದರು.
ಜಿಲ್ಲಾ, ತಾಲೂಕು ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ ಸಭೆ ನಡೆಸಿಲ್ಲ ಎಂದು ಶಿವಕುಮಾರ ಕುರ್ಕಿ ಆರೋಪ ಮಾಡಿದ್ದಾರೆ. ಜಿಲ್ಲಾ ಮತ್ತು ತಾಲೂಕು ಪರಿಷತ್ತಿನ ಎಲ್ಲ ಸದಸ್ಯರು ಕೇಂದ್ರೀಯ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗಿರುತ್ತಾರೆ. ಕೇಂದ್ರೀಯ ಸಾಹಿತ್ಯ ಪರಿಷತ್ತಿನಿಂದಲೇ ಸರ್ವ ಸದಸ್ಯರ ಸಭೆ ನಡೆಸಿ ಲೆಕ್ಕಪತ್ರ ಕ್ರೋಢೀಕರಿಸಿ ಮಂಡನೆ ಮಾಡಲಾಗುತ್ತಿದೆ. ಹಾಗಾಗಿ ಜಿಲ್ಲಾ, ತಾಲೂಕು ಪರಿಷತ್ತಿನ ಸರ್ವ ಸದಸ್ಯರ ಸಭೆ ನಡೆಸಲಿಕ್ಕೆ ಬರುವುದಿಲ್ಲ ಎಂದು ವಿವರಿಸಿದರು.
ಶಿವಕುಮಾರಸ್ವಾಮಿ ಕುರ್ಕಿಯವರು ದೂರವಾಣಿ ಕರೆ ಮಾಡಿ ತಮ್ಮೊಡನೆ ಪ್ರಚಾರಕ್ಕೆ ಬರಬೇಕು ಎಂದು ಆಹ್ವಾನಿಸಿದರು. ಕಳ್ಳರ ಜೊತೆ ಬಂದರೆ ನಿಮಗೆ ಮತ ಹಾಕುತ್ತಾರಾ ಎಂದು ಪ್ರಶ್ನಿಸಿದೆ. ನಮ್ಮ ಬಂಧುಗಳೇ ಆಗಿರುವವರು ನನ್ನ ಮೇಲೆ ಯಾಕೆ ಆರೋಪ ಮಾಡಿದ್ದಾರೋ ಗೊತ್ತಿಲ್ಲ ಎಂದರು. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ| ಎಚ್.ಎಸ್. ಮಂಜುನಾಥ ಕುರ್ಕಿ, ಮಾಜಿ ಪ್ರಧಾನ ಕಾರ್ಯದರ್ಶಿ ಬಾ.ಮ. ಬಸವರಾಜಯ್ಯ ಸುದ್ದಿಗೋಷ್ಠಿಯಲ್ಲಿದ್ದರು.