ದಾವಣಗೆರೆ: ಕೋವಿಡ್ ಎರಡನೇ ಅಲೆ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ 45 ವರ್ಷ ಮೇಲ್ಪಟ್ಟ ಜಿಲ್ಲೆಯ ಎಲ್ಲ ವಕೀಲರಿಗೆ ಇಂದಿನಿಂದ ಮೂರು ದಿನಗಳ ಕಾಲ ಲಸಿಕಾ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಬಿ. ಗೀತಾ ಹೇಳಿದರು.
ಜಿಲ್ಲಾ ನ್ಯಾಯಾಲಯ, ಜಿಲ್ಲಾ ವಕೀಲರ ಸಂಘ, ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಗುರುವಾರ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಏರ್ಪಡಿಸಿದ ಲಸಿಕಾ ಉತ್ಸವ ಅಭಿಯಾನದಲ್ಲಿ ಅವರು ಮಾತನಾಡಿದರು. ಈಗಾಗಲೇ ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿಗಳು ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದಿದ್ದಾರೆ.
ಇದುವರೆಗೂ ಲಸಿಕೆ ಪಡೆಯದ ಜಿಲ್ಲೆಯ 45 ವರ್ಷ ಮೇಲ್ಪಟ್ಟ ಎಲ್ಲ ವಕೀಲರು, ಸಿಬ್ಬಂದಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾ ತೀವ್ರ ಪರಿಣಾಮದಿಂದ ತಪ್ಪಿಸಿಕೊಳ್ಳಲು ಲಸಿಕೆ ಸಹಕಾರಿಯಾಗಿದೆ. ಎಲ್ಲರೂ ಸ್ವ ಇಚ್ಛೆಯಿಂದ ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು. ಲಸಿಕೆ ಹಾಕಿಸಿಕೊಂಡರೆ ಕೊರೊನಾ ಬರುವುದಿಲ್ಲ ಎಂದು ನಿರ್ಲಕ್ಷಿಸುವಂತಿಲ್ಲ. ಕೊರೊನಾ ಬಂದರೂ ಅದರ ತೀವ್ರತೆ ಕಡಿಮೆ ಇರುತ್ತದೆ ಹಾಗೂ ಸಾವಿನ ದವಡೆಯಿಂದ ಪಾರಾಗಬಹುದು. ಲಸಿಕೆ ಹಾಕಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯದ ಕಡೆ ಸಾಗೋಣ ಎಂದರು.
ನಗರ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೇಂದ್ರ-1ರ ಸರ್ಜನ್ ಡಾ| ನಾಗರಾಜ್ ಮಾತನಾಡಿ, ಕೋವಿಡ್‌ಗೆ ಸಂಬಂಧಿಸಿದ ಲಸಿಕೆ ಹಾಕಿಸಿಕೊಂಡವರಿಗೆ ಅರ್ಧ ಗಂಟೆ ನಿರೀಕ್ಷಣೆಯಲ್ಲಿರಿಸಿ ಪರಿಶೀಲಿಸಲಾಗುವುದು. ಕೋವ್ಯಾಕ್ಸಿನ್ ಲಸಿಕೆ ತೆಗೆದುಕೊಂಡವರಿಗೆ ಎರಡನೇ ಡೋಸ್ ನಾಲ್ಕು ವಾರದ ಬಳಿಕ ಹಾಕಲಾಗುತ್ತದೆ. ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡವರಿಗೆ ಮೊದಲ ಡೋಸ್ ಪಡೆದ ಆರು ವಾರದ ನಂತರ ಎರಡನೇ ಡೋಸ್ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಅಭಿಯಾನದಲ್ಲಿ ಹಿರಿಯ ನ್ಯಾಯವಾದಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎನ್.ಟಿ. ಮಂಜುನಾಥ್, ವಕೀಲರಾದ ಅನ್ನಪೂರ್ಣಮ್ಮ, ಎಸ್. ಆರ್.ಚಂದ್ರಶೇಖರ್, ರಮೇಶ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದು ಲಸಿಕೆ ಪಡೆದರು.