ಮಲೇಬೆನ್ನೂರು: ಮಲೇಬೆನ್ನೂರು-ಕುಂಬಳೂರು ಮಧ್ಯದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ವೀರಭದ್ರಸ್ವಾಮಿ ದೇವಾಲಯದ ನೂತನ ಶಿಲಾಮೂರ್ತಿಗಳ ಪುರ ಪ್ರವೇಶದ ನಂತರ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು ಎಂದು ಶ್ರೀ ವೀರಭದ್ರೇಶ್ವರ ಟ್ರಸ್ಟ್ ಅಧ್ಯಕ್ಷ ಪಿ. ಪಂಚಪ್ಪ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಶಿಲಾ ಮೂರ್ತಿಗಳ ಪುರಪ್ರವೇಶ ಮತ್ತು ಮೆರವಣಿಗೆಯನ್ನು ಹಾಗೂ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಲೋಕಾರ್ಪಣೆಯನ್ನು ಸರಳವಾಗಿ ಆಚರಿಸಲಾಗುವುದು ಎಂದರು.
ಟ್ರಸ್ಟ್ ನಿರ್ದೆಶಕ ಬಿ. ಚಿದಾನಂದಪ್ಪ ಮಾತನಾಡಿ, ದೇವಾಲಯದ ಲೋಕಾರ್ಪಣೆಯನ್ನು ಸಭೆ, ಸಮಾರಂಭ ಮತ್ತು ಸಾಮೂಹಿಕ ವಿವಾಹಗಳನ್ನು ಒಟ್ಟು ಮೂರು ದಿನಗಳವರೆಗೆ ಮಾಡಬೇಕೆಂದು ಮಾ. 7 ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿದ್ದೆವು. ಕೊರೊನಾ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿ ಒಂದು ದಿನ ಮಾತ್ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಏ. 15ರಂದು ಬೆಳಗ್ಗೆ 10 ಗಂಟೆಗೆ ಹೊನ್ನಾಳಿ ತಾಲೂಕು ಬೀರಗೊಂಡನಹಳ್ಳಿಯಲ್ಲಿ ನಿರ್ಮಿಸಿರುವ ನೂತನ ಶಿಲಾ ವಿಗ್ರಹಗಳು ಪಟ್ಟಣದ ಪಿಡಬ್ಲೂಡಿ ಕಾಲೋನಿಯಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣಕ್ಕೆ ಪುರಪ್ರವೇಶ ಮಾಡಲಿವೆ. 10:30ರ ನಂತರ ಹೊನ್ನಾಳಿ ಹಿರೇಕಲ್ಮಠದ ಡಾ| ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡುವರು.
ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಮಹಾಗಣಪತಿ, ಶ್ರೀ ಭದ್ರಕಾಳಿ ಮಾತಾ, ಶ್ರಿ ನಂದಿ, ಶ್ರೀ ಕಾಲಬೈರವ ಮತ್ತು ನಾಗ ಪರಿವಾರ ಶಿಲಾ ವಿಗ್ರಹಗಳನ್ನು ಮಲೇಬೆನ್ನೂರು ಮತ್ತು ಕುಂಬಳೂರಿನ ರಾಜಬೀದಿಗಳಲ್ಲಿ ಮೆರವಣಿಗೆಯೊಂದಿಗೆ ನೂತನ ದೇವಸ್ಥಾನದ ಆವರಣಕ್ಕೆ ತರಲಾಗುವುದು. ಲೋಕಾರ್ಪಣೆಗೊಳ್ಳುವವರೆಗೆ ವಿಗ್ರಹಗಳನ್ನು ಜಲಾವಾಸ, ಕ್ಷೀರಾ ವಾಸ, ಪುಷ್ಪವಾಸ ಸೇರಿದಂತೆ ವಿವಿಧ ಧಾರ್ಮಿಕ ವಿ ವಿಧಾನಗಳನ್ನು ನೆರವೇರಿಸಲಾಗುವುದು. ಮೇ 14 ರಂದು ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ವಿಗ್ರಹ ಪ್ರಾಣ ಪ್ರತಿಷ್ಠಾಪನೆ ನೆರವೇರಿಸುವರು ಎಂದರು.
ಟ್ರಸ್ಟ್ ಉಪಾಧ್ಯಕ್ಷ ಬಿ. ನಾಗೇಂದ್ರಪ್ಪ, ನಿರ್ದೇಶಕರುಗಳಾದ ಬಿ. ಚಿದಾನಂದಪ್ಪ, ಕೆ. ವೃಷಭೇಂದ್ರಪ್ಪ, ಎನ್.ಕೆ. ಬಸವರಾಜ್, ಎಸ್.ಎನ್. ಶಂಭುಲಿಂಗಪ್ಪ, ಎಚ್.ಸಿ. ವಿಜಯ್‌ಕುಮಾರ್, ಬಿ. ಶಂಭುಲಿಂಗಪ್ಪ, ಬಿ. ಉಮಾಶಂಕರ್, ಎಚ್. ವಿಶ್ವನಾಥ್, ಡಿ.ಎಂ. ಕಿರಣ, ಸಚಿನ್, ಬಿ. ವೀರೇಶ್, ಬಿ.ಸಿ. ಸತೀಶ್ ಇದ್ದರು.